ತಾಪಮಾನ ಕುಸಿತದ ಜೊತೆಗೆ ಆರೋಗ್ಯದ ಸವಾಲನ್ನೂ ಹೊತ್ತು ತರುವ ಋತು ಚಳಿಗಾಲ. ಸಾಮಾನ್ಯವಾಗಿ ಚಳಿಗಾಲ ನವೆಂಬರ್ ಮಾಹೆಯಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೂ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವನ ಅತಿಯಾದ ಚಟುವಟಿಕೆಯಿಂದ ಕಾಲಗಳಲ್ಲಿ ಅನಿಯಮಿತತೆ ಕಂಡುಬರುತ್ತಿದೆ. ಬಂದರೆ ಮಳೆ, ಚಳಿ, ಬಿಸಿಲೂ ಎಲ್ಲವೂ ಅತಿಯಾಗಿ ಬರುತ್ತದೆ. ಈ ವರ್ಷ ಚಳಿ ಹೆಚ್ಚಿರಬಹುದು ಎನ್ನುವ ತಜ್ಞರ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಚಳಿಗಾಲದಲ್ಲಿ ಕಾಡುವ ಶೀತ, ಜ್ವರ, ಒಣ ತ್ವಚೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುನ್ನೆಚ್ಚರಿಕೆ ಹೇಗಿರಬೇಕು? ಚಿಕಿತ್ಸೆ ಹೇಗೆ? ತಜ್ಞರ ಸಲಹೆಗಳೇನು? ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಚಳಿಗಾಲದ ಸಾಮಾನ್ಯ ಆರೋಗ್ಯ ಸಮಸ್ಯೆಗಳು
ಗಂಟಲು ನೋವು: ಗಂಟಲಿನ ಹಿಂಭಾಗದಲ್ಲಿರುವ ಅಂಡಾಕಾರದ ಅಂಗಾಂಶ (ಟಾನ್ಸಿಲ್) ಸೋಂಕಿಗೆ ಒಳಗಾಗಿ ಉರಿಯುವ ಸ್ಥಿತಿ. ಸಾಮಾನ್ಯವಾಗಿ, ವೈರಸ್‌ಗಳಿಂದ ಉಂಟಾಗುವ ಸೋಂಕುಗಳು ಇದಕ್ಕೆ ಕಾರಣವಾಗುತ್ತವೆ.
ನೆಗಡಿ: ಇದು ರೈನೋವೈರಸ್‌ನಿಂದ ಉಂಟಾಗುತ್ತದೆ. ಶೀತ ಗಾಳಿಯಿಂದ ಉಂಟಾಗುವ ಶುಷ್ಕತೆಯಿಂದಾಗಿ ದೇಹದಲ್ಲಿ ಈ ವೈರಸ್ ಅಭಿವೃದ್ಧಿ ಹೊಂದುತ್ತದೆ.
ಬ್ರಾಂಕೈಟಿಸ್/ಶ್ವಾಸನಾಳದ ಉರಿಯೂತ: ತಂಪಾದ ಗಾಳಿಯು ಶ್ವಾಸನಾಳದ ಕೊಳವೆಗಳನ್ನು ಒಣಗಿಸುತ್ತದೆ. ಅವು ಸೂಕ್ಷ್ಮಜೀವಿಗಳ ದಾಳಿಗೆ ಗುರಿಯಾಗುವಂತೆ ಮಾಡುತ್ತದೆ. ಈ ಸೂಕ್ಷ್ಮಜೀವಿಗಳು ನಾಳಗಳನ್ನು ಉಬ್ಬಿಸುತ್ತವೆ, ಇದರಿಂದಾಗಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಸೂಕ್ಷ್ಮಜೀವಿಗಳ ಹೊರತಾಗಿ, ಧೂಳು, ಹೊಗೆ ಮತ್ತು ರಾಸಾಯನಿಕ ಹೊಗೆ (ವಿಶೇಷವಾಗಿ ಬಣ್ಣ ಮತ್ತು ವಾರ್ನಿಷ್‌ಗಳಿಂದ) ಯಂತಹ ಕೆಲವು ಅಲರ್ಜಿಗಳು ಸಹ ಶ್ವಾಸನಾಳದ ಕೊಳವೆಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ.
ನ್ಯುಮೋನಿಯಾ: ಇದೊಂದು ಶ್ವಾಸಕೋಶದ ಗಂಭೀರ ಸಮಸ್ಯೆ. ಇದು ಸಾಮಾನ್ಯವಾಗಿ ಎದೆ ನೋವು, ಜ್ವರ, ಬೆವರು, ಉಸಿರಾಟದ ತೊಂದರೆ, ಅತಿಸಾರದೊಂದಿಗೆ ತೀವ್ರವಾದ ಕೆಮ್ಮಿಗೂ ಕಾರಣವಾಗಬಹುದು. ಕೆಲವು ಬಾರಿ ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು.
ಕೀಲು ನೋವು: ಮಧ್ಯವಯಸ್ಸಿನಿಂದ ವೃದ್ಧಾಪ್ಯದವರಲ್ಲಿ ಈ ಸಮಸ್ಯೆ ಹೆಚ್ಚು. ಬಿಗಿತ ಮತ್ತು ಸಂಧಿವಾತದ ರೂಪದಲ್ಲಿ ಕಾಣಿಸುತ್ತದೆ.
ಶುಷ್ಕ ತ್ವಚೆ: ಹಿಮ ತುಂಬಿದ ಗಾಳಿಯಿಂದ ತ್ವಚೆಯಲ್ಲಿನ ತೇವಾಂಶ ನಾಶವಾಗಿ ಚರ್ಮ ಒಣಗುತ್ತದೆ. ಹಿಮ್ಮಡಿ, ತುಟಿ ಒಡೆದು ನೋವು, ರಕ್ತಸ್ರಾವವೂ ಆಗಬಹುದು.
ತಡೆಗಟ್ಟುವ/ ಚಿಕಿತ್ಸೆ, ಆಹಾರ ಕ್ರಮ ಹೀಗಿರಲಿ…
ಚಳಿಗಾಲದಲ್ಲಿ ದೇಹದ ಉಷ್ಣತೆ ಸಹಜವಾಗಿ ಕಡಿಮೆಯಾಗುವುದರಿಂದ ಆಹಾರದಿಂದ ಹಿಡಿದು ದೈನಂದಿನ ಚಟುವಟಿಕೆಗಳವರೆಗೆ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ. ಈ ಋತುವಿನಲ್ಲಿ ಎಳ್ಳು-ಬೆಲ್ಲ, ಬಿಸಿ ಸೂಪುಗಳು, ತುಪ್ಪವಿರುವ ಉಷ್ಣ ಆಹಾರಗಳ ಸೇವನೆ ಉತ್ತಮ. ಅದರಿಂದ ದೇಹಕ್ಕೆ ಬೇಕಾದಷ್ಟು ಶಕ್ತಿ ಮತ್ತು ಬೆಚ್ಚಗಿನ ಅನುಭವ ಸಿಗುತ್ತದೆ. ದಾಹ ಕಡಿಮೆಯಿದ್ದರೂ ರೂಢಿಯಿರುವಷ್ಟು ನೀರು, ಸೀಸನ್‌ನಲ್ಲಿ ಸಿಗುವ ಹಣ್ಣು, ತರಕಾರಿಗಳ ಸೇವನೆ ಉತ್ತಮ. ನಿಂಬೆ, ಕಿತ್ತಳೆ, ಸೀತಾಫಲಗಳಲ್ಲಿ ವಿಟಮಿನ್ C ಹೇರಳವಾಗಿದ್ದು, ಶೀತ ಜ್ವರ ತಡೆಯುತ್ತದೆ. ಬಾದಾಮಿ, ಗೋಡಂಬಿ ಸೇರಿದಂತೆ ಡ್ರೈ ಹಣ್ಣು ಹಾಗೂ ಬೀಜಗಳು ದೇಹಕ್ಕೆ ಉತ್ತಮ ಕೊಬ್ಬು ಮತ್ತು ಶಕ್ತಿ ನೀಡುತ್ತವೆ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಕಾರಿಯಾಗುತ್ತದೆ. ಚಯಾಪಚಯ ಕ್ರಿಯೆಗೂ ಪೂರಕ. ಚರ್ಮದ ಆರೈಕೆಗೆ ಎಳ್ಳೆಣ್ಣೆ ಸ್ನಾನ, ಉತ್ತಮ ಗುಣಮಟ್ಟದ ಸಾಬೂನು ಬಳಕೆ, ನೈಸರ್ಗಿಕ ಲೇಪ ಇವು ಚರ್ಮ ಒಣಗುವಿಕೆ ಮತ್ತು ಬಿರುಕುಗಳನ್ನು ತಡೆಯಲು ಸಹಕಾರಿಯಾಗುತ್ತವೆ. ಜೊತೆಗೆ ಸಂಪೂರ್ಣ ಮೈ ಮುಚ್ಚುವ ಬೆಚ್ಚಗಿನ ಬಟ್ಟೆ, ಕಿವಿ ರಕ್ಷಣೆ, ಬೂಟು ಮತ್ತು ಸ್ವಚ್ಛ ಸಾಕ್ಸ್ ಬಳಸುವುದು ತಂಪಿನಿಂದ ಉಂಟಾಗುವ ಉಸಿರಾಟ ಮತ್ತು ನರಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಅನಾರೋಗ್ಯ ತಡೆಗಟ್ಟುವ ದೃಷ್ಟಿಯಿಂದ ಯೋಗ, ಸೂರ್ಯನಮಸ್ಕಾರ ಮತ್ತು ಧ್ಯಾನ ಚಳಿಗಾಲದ ಉತ್ತಮ ವ್ಯಾಯಾಮಗಳಾಗಿವೆ. ಇವು ರಕ್ತಸಂಚಾರ ಸುಧಾರಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ದಿನಕ್ಕೆ ಕನಿಷ್ಠ 15 ನಿಮಿಷ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ವಿಟಮಿನ್ D ದೊರೆಯುತ್ತದೆ. ಇದು ಎಲುಬು–ಸಂಧಿಗಳ ಆರೋಗ್ಯಕ್ಕೆ ಅಗತ್ಯ. ಯಾವುದೇ ಆಹಾರ, ಉತ್ಪನ್ನ ಅಥವಾ ಮನೆಮದ್ದುಗಳ ಬಳಕೆಯಲ್ಲಿ ಇತಿಮಿತಿ ಕಾಪಾಡುವುದು ಮುಖ್ಯ. ಚಳಿಗಾಲದ ಪದ್ಧತಿಗಳನ್ನು ಬೇಸಿಗೆಯಲ್ಲೂ ಅದೇ ರೀತಿಯಲ್ಲಿ ಮುಂದುವರಿಸುವುದು ದೇಹಕ್ಕೆ ತೊಂದರೆ ಉಂಟುಮಾಡಬಹುದು. ಉತ್ಪನ್ನಗಳನ್ನು ಖರೀದಿಸುವಾಗ ಜಾಹೀರಾತುಗಳ ಸುಳ್ಳು ಭರವಸೆಗಳಿಗೆ ಮಾರುಹೋಗದೇ ಇರುವುದೂ ಕೂಡ ಸುರಕ್ಷಿತ ಜೀವನಶೈಲಿಯ ಒಂದು ಭಾಗ. ಚಳಿಗಾಲದ ಈ ಸರಳ ಕ್ರಮಗಳು ದೊಡ್ಡ ಸಮಸ್ಯೆಗಳನ್ನು ತಡೆಯಲು ಸಾಕಷ್ಟು ಪರಿಣಾಮಕಾರಿ. ಈ ಮಾಹಿತಿ ಮಾರ್ಗದರ್ಶನಕ್ಕಾಗಿ ಇದ್ದರೂ ಯಾವುದೇ ಕ್ರಮ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ.
ಈದಿನಕ್ಕೆ ಪ್ರತಿಕ್ರಿಯಿಸಿದ ಫಿಸಿಷಿಯನ್ ಡಾ. ಮಹೇಶ್, “ಚಳಿಗಾಲದ ತೀವ್ರತೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚಿರುತ್ತದೆ. ಹೋಲಿಕೆಯಲ್ಲಿ ಕರ್ನಾಟಕದಲ್ಲಿ ಚಳಿ ಕಡಿಮೆ. ಆದರೂ ಋತುಮಾನಕ್ಕೆ ತಕ್ಕ ಮುಂಜಾಗ್ರತೆಗಳು ಅವಶ್ಯಕ. ವಯಸ್ಸಾದವರಲ್ಲಿ ಚಳಿಗಾಲದ ಸಮಸ್ಯೆಗಳು ಬಾಧಿಸುವುದು ಹೆಚ್ಚು. ಹಾಗಾಗಿ ಚಳಿಗಾಲಕ್ಕೂ ಮೊದಲೇ ಅವರಿಗೆ ಫ್ಲೂ ವ್ಯಾಕ್ಸಿನ್ ಕೊಡಿಸುವುದು ಸೂಕ್ತ. ಮಕ್ಕಳನ್ನು ಹಾಗೂ ವೃದ್ಧರನ್ನು ಸೀಸನಲ್ ಫ್ಲೂ (ಇನ್‌ಫ್ಲುಯೆಂಜಾ) ನಿಂದ ರಕ್ಷಿಸಲು ಬೆಚ್ಚಗಿನ ಕೊಠಡಿಗಳಲ್ಲಿ ಮಲಗುವುದು, ಬೆಚ್ಚಗಿನ ತುಂಬು ಬಟ್ಟೆಗಳನ್ನು ತೊಡುವುದು, ಹೆಚ್ಚು ನೀರು ಕುಡಿಯುವುದು, ಶೀತ ಗಾಳಿಗೆ ಮೈಯೊಡ್ಡುವುದನ್ನು ನಿಯಂತ್ರಿಸುವ ಅಭ್ಯಾಸ ಮಾಡಿಕೊಳ್ಳಬೇಕು” ಎಂದರು.
ಇದನ್ನೂ ಓದಿ ಮದುವೆ-ಉದ್ಯೋಗ: ಯುವಜನತೆಯ ಗೊಂದಲ, ಆಶಯಗಳೇನು?
ಮಾನವನ ದೇಹಕ್ಕೆ, ಜೀವನಶೈಲಿಗೆ ಚಳಿಗಾಲ ಒಂದು ಸವಾಲಿನ ಋತುವಾದರೂ ಇದು ಪ್ರಕೃತಿಯ ನಿತ್ಯಚಕ್ರ. ದೇಹದ ಉಷ್ಣತೆ ಕುಸಿಯುತ್ತಿದ್ದಂತೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂದುವುದು ಸಹಜ. ಸರಿಯಾದ ಆಹಾರ ಸೇವನೆ, ವ್ಯಾಯಾಮ, ಉಣ್ಣೆ ಬಟ್ಟೆಗಳ ಬಳಕೆ, ಸ್ವಚ್ಛತೆ ಮತ್ತು ಸೂರ್ಯನ ಬೆಳಕಿನ ಸರಿಯಾದ ಬಳಕೆ. ಇವೆಲ್ಲವೂ ಸೇರಿ ಚಳಿಗಾಲವನ್ನು ಆರಾಮದಾಯಕ ಮತ್ತು ಆರೋಗ್ಯಕರವಾಗಿಸಬಹುದು. ಆಗ ಯಾವ ಆತಂಕ ಭಯವಿಲ್ಲದೆ ಚಳಿಯನ್ನೂ ಆಹ್ಲಾದಿಸಬಹುದು. ತಜ್ಞರ ಸಲಹೆಗಳ ಪ್ರಕಾರ ಮೊದಲೇ ಸಣ್ಣ ಸಣ್ಣ ಮುಂಜಾಗ್ರತೆಗಳನ್ನು ಅನುಸರಿಸುವುದರಿಂದ ಸಮಸ್ಯೆ ಬಂದಾಗ ಒದ್ದಾಡುವುದನ್ನು ತಪ್ಪಿಸಬಹುದು.





