ʼನ್ಯಾಯ ಬೇಡಿಕೊಳ್ಳುವುದಲ್ಲ, ದಕ್ಕಿಸಿಕೊಳ್ಳುವುದುʼ: ಬಲಾಢ್ಯರ ವಿರುದ್ಧ ಗೆದ್ದ ಗಟ್ಟಿಗಿತ್ತಿಯರ ಕಥೆ!

Date:

ಬೆದರಿಕೆ, ಅವಮಾನ, ಪ್ರಕರಣ ಹಿಂಪಡೆಯುವ ಒತ್ತಡ, ತನಿಖೆಯಲ್ಲಿನ ವಿಳಂಬ ಮತ್ತು ಸಾಕ್ಷ್ಯ ನಾಶಗಳಂತಹ ಪರಿಸ್ಥಿತಿಗಳ ನಡುವೆಯೂ ಕೆಲ ಮಹಿಳೆಯರು ಪ್ರಕರಣದಿಂದ ವಿಮುಖರಾಗದೆ, ವ್ಯವಸ್ಥೆಯನ್ನು ಪ್ರಶ್ನಿಸಿ ನ್ಯಾಯವನ್ನು ತಮ್ಮತ್ತ ತಿರುಗಿಸಿಕೊಂಡಿದ್ದಾರೆ. ಇಲ್ಲಿ ನ್ಯಾಯ ಸಿಗುವುದಿಲ್ಲ, ದಕ್ಕಿಸಿಕೊಳ್ಳಬೇಕು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಭಾರತದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದೆಂದರೆ ಸಾಮಾಜಿಕ, ಆರ್ಥಿಕ, ಮುಖ್ಯವಾಗಿ ರಾಜಕೀಯ ಶಕ್ತಿಗಳ ವಿರುದ್ಧ ನಡೆಸುವ ಸುದೀರ್ಘ ಹೋರಾಟ. ಆರೋಪಿಗಳು ಬಲಾಢ್ಯರಾಗಿದ್ದರೆ, ಸಂತ್ರಸ್ತೆಯ ಹೋರಾಟದ ಹಾದಿಗೆ ಮುಳ್ಳು ಸುರಿಯಲಾಗುತ್ತದೆ. ಪ್ರತಿ ಹೆಜ್ಜೆಯೂ ಕಠಿಣವಾಗುತ್ತದೆ. ಬೆದರಿಕೆ, ಅವಮಾನ, ಪ್ರಕರಣ ಹಿಂಪಡೆಯುವ ಒತ್ತಡ, ತನಿಖೆಯಲ್ಲಿನ ವಿಳಂಬ ಮತ್ತು ಸಾಕ್ಷ್ಯ ನಾಶಗಳಂತಹ ಪರಿಸ್ಥಿತಿಗಳ ನಡುವೆಯೂ ಕೆಲ ಮಹಿಳೆಯರು ಪ್ರಕರಣದಿಂದ ವಿಮುಖರಾಗದೆ, ವ್ಯವಸ್ಥೆಯನ್ನು ಪ್ರಶ್ನಿಸಿ ನ್ಯಾಯವನ್ನು ತಮ್ಮತ್ತ ತಿರುಗಿಸಿಕೊಂಡಿದ್ದಾರೆ. ಇಲ್ಲಿ ನ್ಯಾಯ ಸಿಗುವುದಿಲ್ಲ, ದಕ್ಕಿಸಿಕೊಳ್ಳಬೇಕು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಬಿಲ್ಕಿಸ್ ಬಾನೋ ಇಂದ ಹಿಡಿದು ಈಗಿನ ಉನ್ನಾಂವ್ ಪ್ರಕರಣದ ಸಂತ್ರಸ್ತೆಯವರೆಗೂ ಹಲವು ಸ್ಪೂರ್ತಿದಾಯಕ ಕಥೆಗಳಿವೆ.

ಬಿಲ್ಕಿಸ್‌ ಬಾನೋ ಪ್ರಕರಣ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ವಾತಂತ್ರ್ಯ ನಂತರದ ಭಾರತದ ಅತ್ಯಂತ ಭೀಕರ ಸಮುದಾಯ ಹಿಂಸಾಚಾರ ಎನಿಸಿರುವ 2002ರ ಗುಜರಾತ್ ಗಲಭೆಯ ವೇಳೆ ನಡೆದ ಬಿಲ್ಕಿಸ್ ಬಾನೋ ಪ್ರಕರಣ, ಭಾರತದಲ್ಲಿ ಗಲಭೆ ವೇಳೆ ನಡೆದ ಹಿಂಸೆಯಲ್ಲಿನ ಲೈಂಗಿಕ ಅಪರಾಧಗಳು ಮತ್ತು ನ್ಯಾಯ ವ್ಯವಸ್ಥೆಯ ವೈಫಲ್ಯವನ್ನು ಜಗಜ್ಜಾಹೀರು ಮಾಡಿದ ಅತ್ಯಂತ ಪ್ರಮುಖ ಪ್ರಕರಣಗಳಲ್ಲಿ ಒಂದು. ದಾಹೋದ್ ಜಿಲ್ಲೆಯ ರಣಧಿಕ್ಪುರ ಗ್ರಾಮದ ಬಳಿ, ಗಲಭೆಯಿಂದ ಪಾರಾಗಲು ಓಡುತ್ತಿದ್ದಾಗ, ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಕಾಮುಕರ ಗುಂಪೊಂದು ಅತ್ಯಾಚಾರ ನಡೆಸಿತು. ಆಕೆಯ ಮೂರು ವರ್ಷದ ಮಗಳನ್ನು ಸೇರಿಸಿ ಕುಟುಂಬದ 7 ಮಂದಿಯನ್ನು ಅಮಾನುಷವಾಗಿ ಹತ್ಯೆಗೈದರು. ಬಿಲ್ಕಿಸ್ ಬಾನೋ ಸ್ವತಃ ಊಹಿಸಲಾಗದ ಭಯಾನಕತೆಗೆ ಒಳಗಾಗಿದ್ದರು.

ಬಿಲ್ಕಿಸ್‌ ಬಾನೋ 1

ಆರಂಭದಲ್ಲಿ ಸ್ಥಳೀಯ ಪೊಲೀಸರು ಪ್ರಕರಣವನ್ನು ಕನಿಷ್ಠ ದಾಖಲಿಸಿಕೊಳ್ಳುವುದೂ ಇಲ್ಲ. ಸಾಕ್ಷ್ಯ ಸಂಗ್ರಹದಲ್ಲಿ ಭಾರೀ ದೋಷಗಳು ನಡೆದವು. ಬಾನೋ ಕುಟುಂಬದ ಶವಗಳ ಸರಿಯಾದ ಗುರುತಿಸುವಿಕೆಯೂ ಆಗಲಿಲ್ಲ. ಬಾನೋ, ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ , ಮರು ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಪುರಸ್ಕರಿಸಿ, 2004ರಲ್ಲಿ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI)ಕ್ಕೆ ವಹಿಸಿತು ಹಾಗೂ ನ್ಯಾಯಸಮ್ಮತ ವಿಚಾರಣೆಗಾಗಿ ವಿಚಾರಣೆಯನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತು.

ಜನವರಿ 2008 ರಲ್ಲಿ, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಈ ಭೀಕರ ಕೃತ್ಯ ಎಸಗಿದ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಒಬ್ಬ ಪೊಲೀಸ್ ಅಧಿಕಾರಿಯನ್ನು ಸಾಕ್ಷಿಯನ್ನು ಸುಳ್ಳು ಮಾಡಿದ ಆರೋಪದ ಮೇಲೆ ಶಿಕ್ಷೆಗೊಳಪಡಿಸಲಾಯಿತು. 2017ರಲ್ಲಿ ಸಿಬಿಐ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್ ಬಿಲ್ಕಿಸ್ ಬಾನೋ ಅವರಿಗೆ ಪರಿಹಾರವಾಗಿ 50 ಲಕ್ಷ ರೂಪಾಯಿ ಹಾಗೂ ಸರ್ಕಾರಿ ಕೆಲಸ ಮತ್ತು ವಸತಿ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಆದೇಶಿಸಿತು. ಆಗಸ್ಟ್‌ 2022ರಲ್ಲಿ ಗುಜರಾತ್ ಸರ್ಕಾರವು ತನ್ನ ಕ್ಷಮಾದಾನ ನೀತಿಯ ಅಡಿಯಲ್ಲಿ ಜೈಲಿನಲ್ಲಿದ್ದ 11 ಅಪರಾಧಿಗಳನ್ನು ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಿತು. ಇದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಗುಜರಾತ್‌ ಸರ್ಕಾರದ ನಡೆಯನ್ನು ಖಂಡಿಸಿ 2024ರ ಜ.8ರಂದು ಬಾನೋ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿತು. ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ, ಅದು ಮಹಾರಾಷ್ಟ್ರ ಸರ್ಕಾರಕ್ಕೆ ಇದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ 11 ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಲಾಯಿತು. ಬಿಲ್ಕಿಸ್‌ ಬಾನೋ ಕಡೆಗೂ ಗೆದ್ದರು.

ನಿರ್ಭಯಾ ಪ್ರಕರಣ:

2012ರ ಡಿಸೆಂಬರ್ 16ರಂದು ನಡೆದ ನಿರ್ಭಯಾ ಪ್ರಕರಣ ಭಾರತದ ಸಾಮಾಜಿಕ ಹಾಗೂ ಕಾನೂನು ಇತಿಹಾಸದಲ್ಲಿ ಅಚ್ಚಳಿಯದ ಗಾಯವಾಗಿ ಉಳಿದಿದೆ. ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ, ರಾತ್ರಿ ಸಿನಿಮಾ ನೋಡಿ ಹಿಂತಿರುಗುತ್ತಿದ್ದ 23 ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಖಾಸಗಿ ಬಸ್ಸೊಂದನ್ನು ಹತ್ತಿದ್ದರು. ಆದರೆ ಆ ಬಸ್ಸಿನಲ್ಲಿದ್ದ ಆರು ಮಂದಿ ಆರೋಪಿಗಳು ಯುವತಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಸ್ನೇಹಿತನ ಮೇಲೆ ಭೀಕರ ಹಲ್ಲೆ ಮಾಡಿದರು. ನಂತರ ಇಬ್ಬರನ್ನೂ ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಎಸೆದು ಪರಾರಿಯಾದರು. ಹಲ್ಲೆಯ ತೀವ್ರತೆ ಎಷ್ಟು ಭಯಾನಕವಾಗಿತ್ತೆಂದರೆ, ಯುವತಿಯ ಆಂತರಿಕ ಅಂಗಗಳು ಸಂಪೂರ್ಣವಾಗಿ ಹಾನಿಗೊಂಡಿದ್ದವು. ಆಕೆಯನ್ನು ತಕ್ಷಣ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಎಲ್ಲಾ ಪ್ರಯತ್ನಗಳ ನಡುವೆಯೂ 2012ರ ಡಿ.29ರಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ದೇಶವೇ ಆಕೆಯನ್ನು ಗೌರವದಿಂದ ‘ನಿರ್ಭಯಾ’ ಎಂದು ಕರೆಯತೊಡಗಿತು.

nirbhaya 1

ಪ್ರಕರಣದ ಗಂಭೀರತೆಯನ್ನು ಗಮನಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. 2013ರಲ್ಲಿ ನಾಲ್ವರು ವಯಸ್ಕ ಆರೋಪಿಗಳಿಗೆ ಮರಣ ದಂಡನೆ (ಗಲ್ಲು ಶಿಕ್ಷೆ) ವಿಧಿಸಲಾಯಿತು. ಈ ತೀರ್ಪನ್ನು ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದವು. ಅನೇಕ ಕಾನೂನು ಪ್ರಕ್ರಿಯೆಗಳು ಮತ್ತು ಮೇಲ್ಮನವಿಗಳ ನಂತರ, 2020ರ ಮಾ.20ರಂದು ನಾಲ್ವರು ಅಪರಾಧಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅಪ್ರಾಪ್ತ ಆರೋಪಿಗೆ ಆಗಿನ ಬಾಲಾಪರಾಧ ಕಾನೂನಿನ ಪ್ರಕಾರ ಗರಿಷ್ಠ ಮೂರು ವರ್ಷಗಳ ಸುಧಾರಣಾ ಕೇಂದ್ರದ ಶಿಕ್ಷೆ ನೀಡಿ ಬಿಡುಗಡೆ ಮಾಡಲಾಯಿತು.

ನಿರ್ಭಯಾ ಪ್ರಕರಣವು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಹಿಳೆಯರ ಸುರಕ್ಷತೆ, ಪೊಲೀಸರ ಹೊಣೆಗಾರಿಕೆ, ನ್ಯಾಯಾಂಗದ ವೇಗ.. ಎಲ್ಲದರ ಮೇಲೂ ಗಂಭೀರ ಪ್ರಶ್ನೆಗಳು ಎದ್ದವು. ಈ ಜನಾಂದೋಲನದ ಪರಿಣಾಮವಾಗಿ ಸರ್ಕಾರವು ವರ್ಮಾ ಸಮಿತಿಯನ್ನು ರಚಿಸಿತು.

ವರ್ಮಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 2013 ಜಾರಿಗೊಂಡಿತು. ಇದರಿಂದ ಅತ್ಯಾಚಾರದ ವ್ಯಾಖ್ಯಾನವನ್ನು ವಿಸ್ತರಿಸಲಾಯಿತು, ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಗಳನ್ನು ಸೇರಿಸಲಾಯಿತು. ಜೊತೆಗೆ, ಘೋರ ಅಪರಾಧಗಳಲ್ಲಿ ಭಾಗಿಯಾಗುವ 16–18 ವರ್ಷದ ಬಾಲಕರನ್ನು ವಯಸ್ಕರಂತೆ ವಿಚಾರಣೆ ನಡೆಸಲು ಅವಕಾಶ ನೀಡುವಂತೆ ಬಾಲಾಪರಾಧ ನ್ಯಾಯ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯಿತು. ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳಿಗೆ ಹಣಕಾಸು ನೆರವು ನೀಡಲು ‘ನಿರ್ಭಯಾ ನಿಧಿ’ ಸ್ಥಾಪಿಸಲಾಯಿತು.

ಈ ಪ್ರಕರಣ, ನ್ಯಾಯಕ್ಕಾಗಿ ಸಂತ್ರಸ್ತೆಯ ಧ್ವನಿ ಎಷ್ಟು ಬಲಿಷ್ಠವಾಗಿರಬಹುದು ಎಂಬುದನ್ನು ದೇಶಕ್ಕೆ ತೋರಿಸಿ, ಕಾನೂನು ವ್ಯವಸ್ಥೆಯನ್ನು ಬದಲಾಯಿಸಲು ಜನಶಕ್ತಿಯೇ ಕಾರಣವಾಗಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿ ಉಳಿದಿದೆ.

ಮುಂಬೈ ಶಕ್ತಿ ಮಿಲ್ಸ್‌ ಪ್ರಕರಣ:

ಮುಂಬೈನ ಶಕ್ತಿ ಮಿಲ್ಸ್ ಅತ್ಯಾಚಾರ ಪ್ರಕರಣ 2013ರಲ್ಲಿ ದೇಶವನ್ನ ಬೆಚ್ಚಿಬೀಳಿಸಿದ ಇನ್ನೊಂದು ಅತ್ಯಂತ ಭೀಕರ ಘಟನೆ. ದೆಹಲಿಯ ನಿರ್ಭಯಾ ಪ್ರಕರಣದ ನಂತರ, ಮಹಿಳೆಯರ ಸುರಕ್ಷತೆ ಕುರಿತು ರಾಷ್ಟ್ರಮಟ್ಟದಲ್ಲಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾದ ಪ್ರಮುಖ ಪ್ರಕರಣಗಳಲ್ಲಿ ಇದೂ ಒಂದು.

2013ರ ಆ.22ರಂದು ದಕ್ಷಿಣ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದ ಸಮೀಪದ ಪಾಳುಬಿದ್ದ ಶಕ್ತಿ ಮಿಲ್ಸ್ ಆವರಣದಲ್ಲಿ, 22 ವರ್ಷದ ಮಹಿಳಾ ಫೋಟೋ ಜರ್ನಲಿಸ್ಟ್ ಒಬ್ಬರು ತಮ್ಮ ಪುರುಷ ಸಹೋದ್ಯೋಗಿಯೊಂದಿಗೆ ಪತ್ರಿಕಾ ವರದಿಗಾಗಿ ಫೋಟೋ ತೆಗೆಯಲು ತೆರಳಿದ್ದರು. ಈ ವೇಳೆ ಐವರು ದುಷ್ಕರ್ಮಿಗಳು ಅವರ ಮೇಲೆ ಮುಗಿಬಿದ್ದರು. ಸಹೋದ್ಯೋಗಿಯನ್ನು ಕಟ್ಟಿಹಾಕಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಈ ಘಟನೆ ನಗರದಲ್ಲಿ ಭಾರೀ ಆಘಾತ ಮೂಡಿಸಿತು. ಪ್ರಕರಣದ ತನಿಖೆ ಮುಂದುವರಿದಂತೆ, ಜುಲೈ 2013ರಲ್ಲಿ ಇದೇ ಶಕ್ತಿ ಮಿಲ್ಸ್ ಆವರಣದಲ್ಲಿ ಮತ್ತೊಬ್ಬ ಟೆಲಿಫೋನ್ ಆಪರೇಟರ್ ಯುವತಿಯ ಮೇಲೂ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂತು. ಈ ಎರಡೂ ಪ್ರಕರಣಗಳಲ್ಲಿ ಮೂವರು ಆರೋಪಿಗಳು ಸಾಮಾನ್ಯರಾಗಿದ್ದರು.

image 2025 12 31T184449.471

ಪೊಲೀಸರು ಈ ಪ್ರಕರಣದಲ್ಲಿ ವಿಜಯ್ ಜಾಧವ್, ಕಾಸಿಂ ಬೆಂಗಾಲಿ, ಸಲೀಂ ಅನ್ಸಾರಿ, ಸಿರಾಜ್ ರೆಹಮಾನ್ ಮತ್ತು ಒಬ್ಬ ಅಪ್ರಾಪ್ತ ಬಾಲಕ ಸೇರಿ ಐವರು ಆರೋಪಿಗಳನ್ನು ಬಂಧಿಸಿದರು. ನಿರ್ಭಯಾ ಪ್ರಕರಣದ ನಂತರ ಜಾರಿಗೆ ಬಂದಿದ್ದ ಹೊಸ ಕಠಿಣ ಕಾನೂನುಗಳ ಅಡಿಯಲ್ಲಿ, ವಿಶೇಷವಾಗಿ IPC ಸೆಕ್ಷನ್ 376E (ಪುನರಾವರ್ತಿತ ಅತ್ಯಾಚಾರಕ್ಕೆ ಕಠಿಣ ಶಿಕ್ಷೆ) ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. 2014ರಲ್ಲಿ ಸೆಷನ್ಸ್ ಕೋರ್ಟ್ ನೀಡಿದ ತೀರ್ಪಿನಲ್ಲಿ, ಪುನರಾವರ್ತಿತ ಅಪರಾಧಿಗಳಾದ ವಿಜಯ್ ಜಾಧವ್, ಕಾಸಿಂ ಬೆಂಗಾಲಿ ಮತ್ತು ಸಲೀಂ ಅನ್ಸಾರಿಗೆ ಮರಣ ದಂಡನೆ (ಗಲ್ಲು ಶಿಕ್ಷೆ) ವಿಧಿಸಲಾಯಿತು. ಮತ್ತೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಅಪ್ರಾಪ್ತ ಬಾಲಕನನ್ನು ಬಾಲ ಸುಧಾರಣಾ ಕೇಂದ್ರಕ್ಕೆ ಕಳುಹಿಸಲು ಆದೇಶಿಸಲಾಯಿತು.

ಆದರೆ 2021ರ ನವೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್, ಮೂವರು ಆರೋಪಿಗಳಿಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಸಾಯುವವರೆಗೂ ಜೀವಾವಧಿ ಜೈಲು ಶಿಕ್ಷೆಗೆ ಪರಿವರ್ತಿಸಿತು. ಆರೋಪಿಗಳು ತಮ್ಮ ಜೀವನದ ಕೊನೆಯವರೆಗೂ ಜೈಲಿನಲ್ಲೇ ಇರಬೇಕು ಮತ್ತು ಪ್ರತಿದಿನ ಸೂರ್ಯೋದಯವನ್ನು ನೋಡುವಾಗ ತಮ್ಮ ಅಪರಾಧದ ಬಗ್ಗೆ ಪಶ್ಚಾತ್ತಾಪ ಪಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಈ ಪ್ರಕರಣದ ಬಳಿಕ, ಮುಂಬೈನಂತಹ ಮಹಾನಗರದಲ್ಲೂ ಮಹಿಳೆಯರ ಸುರಕ್ಷತೆ ಎಷ್ಟು ದುರ್ಬಲವಾಗಿದೆ ಎಂಬುದು ಬೆಳಕಿಗೆ ಬಂತು. ಪಾಳುಬಿದ್ದ ಕಟ್ಟಡಗಳು ಮತ್ತು ನಿರ್ಲಕ್ಷಿತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವ ಅಗತ್ಯ, ಹಾಗೆಯೇ ಲೈಂಗಿಕ ಅಪರಾಧಿಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ವಿಧಿಸಬೇಕೆಂಬ ಒತ್ತಡ ಕಾನೂನು ವ್ಯವಸ್ಥೆಯ ಮೇಲೆ ಹೆಚ್ಚಾಯಿತು.

ಕಥುವಾ ಅತ್ಯಾಚಾರ ಪ್ರಕರಣ:

2018ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ರಸಾನಾ ಗ್ರಾಮದಲ್ಲಿ ನಡೆದ ಕಥುವಾ ಅತ್ಯಾಚಾರ–ಕೊಲೆ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತು. ಅಲೆಮಾರಿ ಬಕರ್ವಾಲ್ ಸಮುದಾಯಕ್ಕೆ ಸೇರಿದ 8 ವರ್ಷದ ಮುಸ್ಲಿಂ ಬಾಲಕಿ ಆಸಿಫಾ ಬಾನೋಳನ್ನು 7 ಮಂದಿ ದುರುಳರು (6 ವಯಸ್ಕರು ಮತ್ತು ಒಬ್ಬ ಅಪ್ರಾಪ್ತ) ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡಿದರು. ಈ ಅಪರಾಧವು ಆ ಪ್ರದೇಶದಿಂದ ಬಕರ್ವಾಲ್ ಸಮುದಾಯವನ್ನು ಭಯಭೀತಗೊಳಿಸಿ ಹೊರದಬ್ಬುವ ಉದ್ದೇಶದಿಂದ ನಡೆದಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂತು.

ಆಸಿಫಾ ಬಾನೋ ಸುಮಾರು ಒಂದು ವಾರ ಕಣ್ಮರೆಯಾಗಿದ್ದು, ನಂತರ ಗ್ರಾಮದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿ, ಆರೋಪಿಗಳನ್ನು ಬಂಧಿಸಿದರು. 2018ರ ಏ.16ರಂದು ಕಥುವಾದಲ್ಲೇ ವಿಚಾರಣೆ ಆರಂಭವಾಯಿತು. 2018ರಲ್ಲಿ 8 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಇದು ರಾಷ್ಟ್ರಮಟ್ಟದ ಸುದ್ದಿಯಾಗಿ ಪರಿಣಮಿಸಿತು.

image 2025 12 31T184602.820

ಆರೋಪಿಗಳ ಬಂಧನದ ಬಳಿಕ, ಕೆಲ ಸ್ಥಳೀಯ ಸಂಘಟನೆಗಳು ಮತ್ತು ರಾಜಕೀಯ ಗುಂಪುಗಳಿಂದ ಪ್ರತಿಭಟನೆಗಳು ನಡೆದವು. ಆದರೆ ಆರೋಪಿಗಳಿಗೆ ದೊರೆತ ರಾಜಕೀಯ ಬೆಂಬಲ, ವಿಶೇಷವಾಗಿ ಕೆಲವು ಬಿಜೆಪಿ ಸ್ಥಳೀಯ ನಾಯಕರ ಪಾತ್ರ, ದೇಶದಾದ್ಯಂತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತು. 2019ರ ಜೂನ್ 10ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿ, 7 ಆರೋಪಿಗಳಲ್ಲಿ 6 ಮಂದಿಯನ್ನು ದೋಷಿಗಳೆಂದು ಘೋಷಿಸಿತು ಮತ್ತು ಒಬ್ಬನನ್ನು ಖುಲಾಸೆಗೊಳಿಸಿತು. ದೋಷಿಗಳಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ, ಉಳಿದ ಮೂವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಅಕ್ಟೋಬರ್‌ನಲ್ಲಿ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ (SIT) 6 ಸದಸ್ಯರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದವು. ಸಾಕ್ಷಿದಾರರಿಗೆ ಹಿಂಸೆ ನೀಡಿ ಸುಳ್ಳು ಹೇಳಿಕೆ ಕೊಡಲು ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ, ಅವರ ವಿರುದ್ಧ FIR ದಾಖಲಿಸುವಂತೆ ಕೋರ್ಟ್‌ ಆದೇಶಿಸಿತು.

ಹಾಥ್ರಸ್‌ ಪ್ರಕರಣ:

ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ 2020ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಈ ಘಟನೆ ಮಹಿಳೆಯರ ಸುರಕ್ಷತೆ, ದಲಿತರ ಮೇಲಿನ ದೌರ್ಜನ್ಯ ಮತ್ತು ಪೊಲೀಸರ ಪಾತ್ರ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕಾರಣವಾಯಿತು.

2020ರ ಸೆ.14ರಂದು 19 ವರ್ಷದ ದಲಿತ ಯುವತಿ, ತನ್ನ ತಾಯಿ ಮತ್ತು ಸಹೋದರನೊಂದಿಗೆ ಹೊಲಕ್ಕೆ ಹುಲ್ಲು ಕುಯ್ಯಲು ಹೋಗಿದ್ದ ವೇಳೆ, ಗ್ರಾಮದ ನಾಲ್ವರು ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು. ಆರೋಪಿಗಳು ಯುವತಿಯನ್ನು ನೆಲಕ್ಕೆ ಬೀಳಿಸಿ, ತೀವ್ರವಾಗಿ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದರು. ಹಲ್ಲೆಯಿಂದಾಗಿ ಆಕೆಯ ಬೆನ್ನೆಲುಬು ಮುರಿದು, ನಾಲಿಗೆಗೆ ಗಂಭೀರ ಗಾಯಗಳು ಉಂಟಾಗಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಮೊದಲು ಅಲಿಗಢದ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲಾ ವೈದ್ಯಕೀಯ ಪ್ರಯತ್ನಗಳ ನಡುವೆಯೂ, 2020ರ ಸೆ.29ರಂದು ಆಕೆ ಮೃತಪಟ್ಟಳು.‌

ಹತ್ರಾಸ್ 1

ಯುವತಿಯ ಸಾವಿನ ಬಳಿಕ, ಉತ್ತರ ಪ್ರದೇಶ ಪೊಲೀಸರ ನಡೆ ಭಾರೀ ವಿವಾದಕ್ಕೆ ಕಾರಣವಾಯಿತು. ಮೃತದೇಹವನ್ನು ಕುಟುಂಬದವರ ಅನುಮತಿಯಿಲ್ಲದೆ ಮತ್ತು ಅವರ ಅನುಪಸ್ಥಿತಿಯಲ್ಲಿ, ಪೊಲೀಸರು ರಾತ್ರೋರಾತ್ರಿ (ಸುಮಾರು ಬೆಳಗಿನ ಜಾವ 2:30ಕ್ಕೆ) ಸುಟ್ಟರು. ಈ ಕ್ರಮವನ್ನು ಸಾಕ್ಷ್ಯ ನಾಶಪಡಿಸುವ ಯತ್ನ ಎಂದು ಕುಟುಂಬ ಮತ್ತು ನಾಗರಿಕ ಸಮಾಜ ತೀವ್ರವಾಗಿ ಖಂಡಿಸಿತು. ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದರು. ನಂತರ ಸಾರ್ವಜನಿಕ ಒತ್ತಡ ಮತ್ತು ಕಾನೂನು ಹೋರಾಟದ ಹಿನ್ನೆಲೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖೆಯನ್ನು ಸಿಬಿಐ (CBI)ಗೆ ವರ್ಗಾಯಿಸಲಾಯಿತು. ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂದು ಸ್ಪಷ್ಟಪಡಿಸಿತು.

2023ರ ಮಾರ್ಚ್‌ನಲ್ಲಿ ವಿಶೇಷ ನ್ಯಾಯಾಲಯವು ನಾಲ್ವರು ಆರೋಪಿಗಳ ಪೈಕಿ ಮುಖ್ಯ ಆರೋಪಿ ಸಂದೀಪ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಉಳಿದ ಮೂವರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಯಿತು. ದೇಶಾದ್ಯಂತ ಜಾತಿ ಆಧಾರಿತ ಹಿಂಸೆ, ಪೊಲೀಸರ ಕಾರ್ಯವೈಖರಿ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನ್ಯಾಯಾಂಗದ ಪಾತ್ರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಟೀಕೆಗಳು ವ್ಯಕ್ತವಾದವು. ಈ ಪ್ರಕರಣವು ಭಾರತದ ಸಾಮಾಜಿಕ ನ್ಯಾಯ ಮತ್ತು ಕಾನೂನು ವ್ಯವಸ್ಥೆಯ ಸ್ಥಿತಿಗತಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಮಹತ್ವದ ಘಟನೆಯಾಗಿ ಉಳಿದಿದೆ.

ಹತ್ರಾಸ್ 2

ಉನ್ನಾಂವ್‌ ಪ್ರಕರಣ:

ಉತ್ತರ ಪ್ರದೇಶದ ಉನ್ನಾಂವ್ ಅತ್ಯಾಚಾರ ಪ್ರಕರಣ ಭಾರತದ ಇತ್ತೀಚಿನ ಅತ್ಯಂತ ಸಂವೇದನಾಶೀಲ ಮತ್ತು ಚರ್ಚಿತ ಪ್ರಕರಣಗಳಲ್ಲೊಂದು. ರಾಜಕೀಯ ಪ್ರಭಾವ, ಪೊಲೀಸ್ ನಿರ್ಲಕ್ಷ್ಯ, ಸಾಕ್ಷಿಗಳಿಗೆ ಬೆದರಿಕೆ ಮತ್ತು ಸಂತ್ರಸ್ತೆಯ ನಿರಂತರ ಹೋರಾಟಗಳ ಕಾರಣಗಳಿಂದಾಗಿ ಈ ಪ್ರಕರಣ ದೇಶದ ಕಾನೂನು ವ್ಯವಸ್ಥೆಯ ಮೇಲೆ ಅಸಹನೆ ಮೂಡುವಂತೆ ಮಾಡಿದೆ.

ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯ 17 ವರ್ಷದ ಯುವತಿ, ಸ್ಥಳೀಯ ಶಾಸಕ ಕುಲದೀಪ್ ಸಿಂಗ್ ಸೆಂಗರ್ ತನ್ನನ್ನು ಮನೆಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲು ಪ್ರಯತ್ನಿಸಿದರು. ಸಂತ್ರಸ್ತೆ ಹಲವು ಬಾರಿ ಪೊಲೀಸರ ಬಳಿ ದೂರು ನೀಡಿದರೂ, ಆರಂಭದಲ್ಲಿ ಪ್ರಕರಣ ದಾಖಲಿಸಲ್ಪಡಲಿಲ್ಲ. ಶಾಸಕನ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಮತ್ತು ಆಡಳಿತ ಯಂತ್ರ ಮೌನ ವಹಿಸಿದ್ದವು ಎಂಬ ಆರೋಪಗಳು ಕೇಳಿಬಂದವು. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂತ್ರಸ್ತೆಯ ಕುಟುಂಬದ ಮೇಲೆ ದೌರ್ಜನ್ಯ ಮುಂದುವರಿಯಿತು. 2018ರಲ್ಲಿ ಯುವತಿಯ ತಂದೆಯನ್ನೇ ಸುಳ್ಳು ಪ್ರಕರಣದಲ್ಲಿ ಪೊಲೀಸರು ಬಂಧಿಸಿದರು. ಜೈಲಿನಲ್ಲಿ ತೀವ್ರ ಹಲ್ಲೆಗೊಳಗಾದ ಬಳಿಕ ಅವರು ಮೃತಪಟ್ಟರು. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆಯಿತು. ಸಂತ್ರಸ್ತೆ ದೆಹಲಿಯ ಮುಖ್ಯಮಂತ್ರಿ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಬಳಿಕ, ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತು.

ಪ್ರಕರಣದ ತನಿಖೆಯನ್ನು CBIಗೆ ವರ್ಗಾಯಿಸಲಾಯಿತು. ಸಿಬಿಐ ತನಿಖೆಯಲ್ಲಿ, ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ದೃಢಪಟ್ಟಿತು. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿಗಳ ಮೇಲೆ ನಿರಂತರ ದಾಳಿಗಳು ನಡೆದವು. 2019ರಲ್ಲಿ, ಸಂತ್ರಸ್ತೆಯೊಂದಿಗೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದು, ಆಕೆಯ ಇಬ್ಬರು ಸಂಬಂಧಿಕರು ಮೃತಪಟ್ಟರು. ಇದನ್ನೂ ಕೊಲೆ ಯತ್ನವೆಂದು CBI ದಾಖಲಿಸಿತು.

ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ದೆಹಲಿಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಡಿಸೆಂಬರ್ 2019ರಲ್ಲಿ, ವಿಶೇಷ ನ್ಯಾಯಾಲಯವು ಕುಲದೀಪ್ ಸಿಂಗ್ ಸೆಂಗರ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂಪಾಯಿ ದಂಡ ವಿಧಿಸಿತು. ನಂತರ, ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣಗಳಲ್ಲಿಯೂ ಸೆಂಗರ್‌ಗೆ ಪ್ರತ್ಯೇಕವಾಗಿ ಶಿಕ್ಷೆಗೊಳಪಟ್ಟ.

image 2025 12 31T184730.661

ಸೆಂಗರ್‌ಗೆ ದೆಹಲಿ ಹೈಕೋರ್ಟ್ 2025ರ ಡಿ.23ರಂದು ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ CBI ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಡಿ.29ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಆದೇಶದ ಪರಿಣಾಮವಾಗಿ, ಸೆಂಗರ್ ಸದ್ಯಕ್ಕೆ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ. ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸೆಂಗರ್ ವಿರುದ್ಧದ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2026ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: 2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸಂತ್ರಸ್ತೆ ಸ್ವಾಗತಿಸಿದ್ದು, ʼನನಗೆ ನ್ಯಾಯ ಸಿಕ್ಕಿದೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲಿ ಲೈಂಗಿಕ ದೌರ್ಜನ್ಯ ಸಂತ್ರಸ್ತೆಗೆ ನ್ಯಾಯವು ಸ್ವಯಂಸ್ಫೂರ್ತಿಯಾಗಿ ಸಿಗುವುದಲ್ಲ; ಅದನ್ನು ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕು. ವಿಶೇಷವಾಗಿ ಆರೋಪಿಗಳು ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಶಕ್ತಿಯೊಂದಿಗೆ ಪ್ರಭಾವಿಗಳಾಗಿದ್ದರೆ ನ್ಯಾಯದ ದಾರಿ ಇನ್ನಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಈ ಪ್ರಕರಣಗಳು ಬಯಲು ಮಾಡಿವೆ. ಕೇವಲ ಈ ಪ್ರಕರಣಗಳು ಮಾತ್ರವಲ್ಲ. ನ್ಯಾಯಾಲಯದ ಹಂತಕ್ಕೆ ಬಂದರೂ ನ್ಯಾಯ ದಕ್ಕಿಸಿಕೊಳ್ಳಲಾಗದ ಪ್ರಕರಣಗಳಿವೆ, ಬಲಾಢ್ಯರ ವಿರುದ್ಧ ಹೋರಾಡಲು ಶಕ್ತಿ ಸಾಲದೆ ಮರುಗಿದ ಸಾಕಷ್ಟು ಉದಾಹರಣೆಗಳಿವೆ. ಬೆಳಕಿಗೆ ಬಂದವು ಕೆಲವು, ಮರೆಯಲ್ಲಿ ಉಳಿದವು ಹಲವು. ಅನೇಕ ಬಾರಿ ನ್ಯಾಯಾಲಯದ ಮೆಟ್ಟಿಲೇರಲು ಸಂತ್ರಸ್ತೆಯೇ ತನ್ನ ಜೀವ, ಕುಟುಂಬ ಮತ್ತು ಗೌರವವನ್ನು ಪಣಕ್ಕಿಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅದನ್ನೆಲ್ಲ ದಾಟಿ ಬಂದ ನಾರಿಯರು ಇತಿಹಾಸದ ಪುಟ ಸೇರುತ್ತಾರೆ. ಅಂಥವರ ಹೋರಾಟದಿಂದಲೇ ಕಾನೂನು ತಿದ್ದುಪಡಿಗಳು ಬಂದವು, ಸಮಾಜದಲ್ಲಿ ನ್ಯಾಯಾಂಗದ ಪಾತ್ರದ ಮೇಲೆ ಬೆಳಕು ಬಿತ್ತು. ಈ ಮಹಿಳೆಯರು ಹಿಂದೆ ಸರಿಯದೆ ತಮ್ಮ ನೋವನ್ನು ಮೌನವಾಗಿ ನುಂಗಿಕೊಳ್ಳುವ ಬದಲು, ವ್ಯವಸ್ಥೆಯನ್ನು ಪ್ರಶ್ನಿಸಿದರು, ಕಾನೂನನ್ನು ಎದುರಿಸಿದರು, ಸಮಾಜದ ಅಸಹಜ ಮೌನವನ್ನು ಒಡೆದು ಹಾಕಿದರು, ಆ ಮೂಲಕ ಮಹಿಳಾ ಸಮಾಜಕ್ಕೆ ಸ್ಪೂರ್ತಿಯಾದರು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...