ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸೂರ್ಯಕಾಂತ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 124ನೇ ವಿಧಿಯ ಪ್ರಕಾರ ಪ್ರಮಾಣವಚನವನ್ನು ಬೋದಿಸಿದರು. 52ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ಬಿ ಆರ್ ಗವಾಯಿಯವರು ನಿನ್ನೆ ನಿವೃತ್ತರಾಗಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್ ಅವರನ್ನು ನೇಮಕ ಮಾಡುವಂತೆ ನ್ಯಾ.ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ಆಕ್ಟೋಬರ್ 30ರಂದು ನೇಮಕ ಮಾಡಲಾಗಿತ್ತು.
ನ್ಯಾ. ಸೂರ್ಯಕಾಂತ್ ಅವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ.29ರಂದು ನಿವೃತ್ತಿಯಾಗಲಿದ್ದಾರೆ. ಸುಮಾರು 15 ತಿಂಗಳುಗಳ ಕಾಲ ಮುಖ್ಯನ್ಯಾಯಮೂರ್ತಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಹಾಗೆಯೇ ಅವರಿಗೆ 65 ವರ್ಷವಾಗುತ್ತಿದ್ದಂತೆ 2027ರ ಫೆಬ್ರವರಿ 9ರಂದು ನಿವೃತ್ತಿ ಹೊಂದಲಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಆರಂಭಿಕ ಜೀವನ
1962ರ ಫೆಬ್ರವರಿ 10ರಂದು ಹರಿಯಾಣದ ಹಿಸಾರ್ ಜಿಲ್ಲೆಯ ಪೆಟ್ವಾರ್ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. 1984ರಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. 2011ರಲ್ಲಿ ಕಾನೂನು ಸ್ನಾತಕೋತ್ತರ ಪದವಿಯನ್ನು ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.
ವೃತ್ತಿ ಜೀವನ
1984ರಲ್ಲಿ ಹರಿಯಾಣದ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ನಂತರ 1985ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ಚಂಡೀಗಢಕ್ಕೆ ಸ್ಥಳಾಂತರಗೊಂಡರು.
2000ರ ಜುಲೈ 7ರಂದು ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. 2004ರ ಜನವರಿ 09ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಶಾಶ್ವತ ನ್ಯಾಯಾಧೀಶರಾಗಿ ಬಡ್ತಿಯಾಗುವವರೆಗೂ ಹರಿಯಾಣದ ಅಡ್ವೊಕೇಟ್ ಜನರಲ್ ಹುದ್ದೆಯಲ್ಲಿದ್ದರು. 2007ರ ಫೆಬ್ರವರಿ 23ರಿಂದ 2011ರ ಫೆಬ್ರವರಿ 22ರವರೆಗೆ ಸತತ ಎರಡು ಅವಧಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಮಂಡಳಿಯ ಸದಸ್ಯರಾಗಿ ಸಹ ನಾಮನಿರ್ದೇಶನಗೊಂಡು ಸೇವೆ ಸಲ್ಲಿಸಿದ್ದಾರೆ.
2018ರ ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಸೇವೆ ಸಲ್ಲಿಸಿದ್ದಾರೆ. ನಂತರ 2019ರ ಮೇ 24ರಂದು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಇಂದಿನಿಂದ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಸುಮಾರು 15 ತಿಂಗಳು ಕಾಲ ಸೇವೆ ಸಲ್ಲಿಸಲಿದ್ದಾರೆ.
ಪ್ರಮುಖ ತೀರ್ಪುಗಳು
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಜಸ್ಟೀಸ್ ಸೂರ್ಯ ಕಾಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ನೀಡದ್ದ 370ನೇ ವಿಧಿಯನ್ನು ರದ್ದುಗೊಳಿಸುವುದು, ಬಿಹಾರದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಪೆಗಾಸಸ್ ಸ್ಪೈವೇರ್ ಪ್ರಕರಣ, ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಹಾಗೂ ಲಿಂಗ ಸಮಾನತೆ ಸೇರಿದಂತೆ ಹಲವು ಮಹತ್ವದ ತೀರ್ಪುಗಳು ಮತ್ತು ಆದೇಶಗಳನ್ನು ಹೊರಡಿಸಿದ ಪೀಠದ ಭಾಗವಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದರು.
ವಸಾಹತು ಯುಗದ ದೇಶದ್ರೋಹ ಕಾನೂನನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಸರ್ಕಾರ ಪರಿಶೀಲನೆ ನಡೆಸುವವರೆಗೂ ಅದರ ಅಡಿಯಲ್ಲಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸಬಾರದು ಎಂದು ನಿರ್ದೇಶಿಸಿದ್ದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಹೆಸರುಗಳ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ಬಾರ್ ಅಸೋಸಿಯೇಷನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿರ್ದೇಶಿಸಿದ ಕೀರ್ತಿಯೂ ನ್ಯಾ. ಸೂರ್ಯ ಕಾಂತ್ ಅವರಿಗೆ ಸಲ್ಲುತ್ತದೆ. ಕಾನೂನುಬಾಹಿರವಾಗಿ ಪದಚ್ಯುತಗೊಳಿಸಲಾದ ಮಹಿಳಾ ಸರಪಂಚರನ್ನು ಪುನಃ ನೇಮಿಸಿದ ಪೀಠದ ನೇತೃತ್ವ ವಹಿಸಿದ್ದ ಅವರು ಲಿಂಗ ಪಕ್ಷಪಾತವನ್ನು ಟೀಕಿಸಿದ್ದರು.
1967ರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ತೀರ್ಪನ್ನು ರದ್ದುಗೊಳಿಸಿದ ಏಳು ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಇದ್ದರು. ಈ ತೀರ್ಪು ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನದ ಮರುಪರಿಶೀಲನೆಗೆ ದಾರಿ ಮಾಡಿಕೊಟ್ಟಿತ್ತು.
ಇನ್ನು 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಭದ್ರತಾ ಉಲ್ಲಂಘನೆಯ ತನಿಖೆಗಾಗಿ ಮಲ್ಹೋತ್ರಾ ನೇತೃತ್ವದ ಮಾಜಿ ನ್ಯಾಯಮೂರ್ತಿಗಳ ಐವರು ಸದಸ್ಯರ ಸಮಿತಿಯನ್ನು ನೇಮಿಸಿದ ಪೀಠದಲ್ಲಿ ನ್ಯಾಯಮೂರ್ತಿ ಕಾಂತ್ ಇದ್ದರು. “ಇಂತಹ ವಿಷಯಗಳ ತನಿಖೆಗೆ ನ್ಯಾಯಾಂಗದಲ್ಲಿ ತರಬೇತಿ ಪಡೆದ ಮನಸ್ಸುಗಳ ಅಗತ್ಯವಿದೆ” ಎಂದು ಹೇಳಿದ್ದರು.
ಹಾಗೆಯೇ ನ್ಯಾಯಮೂರ್ತಿ ಕಾಂತ್ ಅವರು ರಕ್ಷಣಾ ಪಡೆಗಳಿಗೆ ಒನ್ ರ್ಯಾಂಕ್-ಒನ್ ಪಿಂಚಣಿ ಯೋಜನೆಯನ್ನು ಸಹ ಎತ್ತಿಹಿಡಿದಿದ್ದರು. “ಇದು ಸಾಂವಿಧಾನಿಕವಾಗಿ ಮಾನ್ಯವಾಗಿದೆ” ಎಂದು ಹೇಳಿದ್ದರು.
ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕರಿಸುವ ಎರಡು ದಿನ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ ಜಸ್ಟೀಸ್ ಸೂರ್ಯಕಾಂತ್ ಅವರು, “ತ್ವರಿತ ವಿಲೇವಾರಿಗಾಗಿ ಸಾಂವಿಧಾನಿಕ ಪೀಠಗಳನ್ನು, ಅದರಲ್ಲೂ ವಿಶೇಷವಾಗಿ 7 ಮತ್ತು 9 ನೇ ನ್ಯಾಯಾಧೀಶರ ಪೀಠಗಳನ್ನು ಸ್ಥಾಪಿಸುವುದು ನನ್ನ ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ.





