ನಾಗವಾರದಿಂದ ಬಾಗಲೂರು ಕ್ರಾಸ್ ವರೆಗಿನ ಮೆಟ್ರೋ ಕಾಮಗಾರಿ ಪ್ರಗತಿಯನ್ನು ಬುಧವಾರ ಬೆಳಿಗ್ಗೆ ವೀಕ್ಷಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಾಮಾಗಾರಿ ನಡೆಸುತ್ತಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
“ಒಂದು ಮೆಟ್ರೋ ಪಿಲ್ಲರ್ ಹಾಕಲು ಎರಡು ವರ್ಷ ತೆಗೆದುಕೊಂಡಿದ್ದೀರಿ? ಎರಡು ತಿಂಗಳಲ್ಲಿ ಆಗುವ ಕೆಲಸಕ್ಕೆ ಎರಡು ವರ್ಷ ಏಕೆ? ಮೆಟ್ರೋ ಕಾಮಗಾರಿ ಶೀಘ್ರ ಮುಗಿಸಲು ಇರುವ ಸಮಸ್ಯೆ ಏನು” ಎಂದು ಪ್ರಶ್ನಿಸಿದರು.
“ಕಾಮಗಾರಿ ತಡವಾಗುತ್ತಿರುವ ಕಾರಣ ಜನರಿಗೆ ಸಮಸ್ಯೆ ಎದುರಾಗಿದೆ. ಮೆಟ್ರೋ ಕಾಮಗಾರಿಯಿಂದ ರಸ್ತೆಯ ಗುಣಮಟ್ಟ ಕ್ಷೀಣಿಸುತ್ತಿದೆ. ಪರಿಣಾಮ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಜನರು ಬೇಸತ್ತಿದ್ದಾರೆ” ಎಂದರು.
“ಮೆಟ್ರೋ ಕಾಮಗಾರಿಗೆ ಬಳಸಿದ ಅನಗತ್ಯ ವಸ್ತುಗಳ ವಿಲೇವಾರಿ ಮಾಡದೆ ಅಲ್ಲೇ ಎಸೆಯಲಾಗಿದೆ. ಇದರಿಂದಲೂ ಜನರಿಗೆ ನಿತ್ಯ ಸಮಸ್ಯೆ ತಪ್ಪಿದ್ದಲ್ಲ. ಮಳೆ ಬಂದರೆ ನೀರು ಹರಿಯಲು ವ್ಯವಸ್ಥೆ ಸಹ ಮಾಡಲಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಶೀಘ್ರ ಕಾಮಗಾರಿ ಮುಗಿಸಿ ಅಲ್ಲಿಯ ವರೆಗೂ ರಸ್ತೆ ಸುಗಮ ಸಂಚಾರಕ್ಕೆ ಕನಿಷ್ಠ ವ್ಯವಸ್ಥೆಯನ್ನಾದರೂ ಮಾಡಿ” ಎಂದು ಕೃಷ್ಣ ಬೈರೇಗೌಡ ಅವರು ಸೂಚಿಸಿದರು.





