ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ 2023-2024 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯದ ತಾಲ್ಲೂಕಿಗೆ ಒಂದರಂತೆ 238 ಗ್ರಾಮ ಪಂಚಾಯತಿಗಳಿಗೆ ನಗದು 5 ಲಕ್ಷ ರೂ. ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, “ಪ್ರಜಾತಂತ್ರ ಗಟ್ಟಿ ಆಗಬೇಕಿದ್ದಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು, ಗ್ರಾಮ ಪಂಚಾಯತಿಗಳು ಶಕ್ತಿ ಕೇಂದ್ರಗಳಾಗಬೇಕು” ಎಂದು ಹೇಳಿದರು. ಇದೇ ವೇಳೆ ಮುಖ್ಯಮಮಂತ್ರಿ ಅವರು ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ “ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ” ಎಂದು ಹೇಳಿದರು.
ಇ-ಸ್ವತ್ತು ತಂತ್ರಾಂಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿ, “ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಉಪಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗಿದೆ. ಗ್ರಾಮ ಪಂಚಾಯತಿಗಳವ್ಯಾಪ್ತಿಯಲ್ಲಿಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನೆಲ್ಲಾ ನೀಡಲಾಗುತ್ತಿದೆ. ಗ್ರಾಮ ಪಂಚಾಯತಿಗಳಿಗೆ ಇದು ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು ಪ್ರಕರಣ 199ಬಿ ಹಾಗೂ 199ಸಿ ಸೇರಿಸಲಾಗಿರುತ್ತದೆ. ತಿದ್ದುಪಡಿಯನ್ನು ದಿನಾಂಕ: 07.04.2025 ರಂದು ಅಧಿಸೂಚಿಸಲಾಗಿರುತ್ತದೆ” ಎಂದರು.
“ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025ನ್ನು ರೂಪಿಸಲಾಗಿದೆ. ಈ ನಿಯಮಗಳು 17.10.2025ರಿಂದ ಜಾರಿಗೆ ಬಂದಿರುತ್ತವೆ. ನಿಯಮಗಳಲ್ಲಿ ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅನುಸರಿಸಬೇಕಾದ ಕ್ರಮಗಳು, ತೆರಿಗೆ ನಿರ್ಧರಣಾ ವಿಧಾನಗಳು ವಸೂಲಾತಿ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಜೊತೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳ ಅನುಮೋದನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಹೇಳಲಾಗಿದೆ. ಪ್ರತಿಯೊಂದು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳ ಜವಾಬ್ದಾರಿಗಳು, ಜಾರಿಗೆ ಕಾಲಾವಧಿ, ಅಪೀಲುಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆವಿವರಿಸಲಾಗಿದೆ. ನೂತನ ನಿಯಮಗಳ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿಯನ್ನು ನೀಡಲಾಗಿದೆ. ನಿಯಮಗಳ ಜಾರಿಗೆ ಪೂರಕವಾಗಿ ಪಂಚತಂತ್ರ ತಂತ್ರಾಂಶದಲ್ಲಿಯೂ ಅಗತ್ಯ ಮಾರ್ಪಾಡು ಮಾಡಲಾಗಿದೆ” ಎಂದು ತಿಳಿಸಿದರು.
“ಇ-ಸ್ವತ್ತು (eswathu.karnataka.gov.in) ತಂತ್ರಾಂಶದ ಹೊಸ ಅವತರಣಿಕೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಹೊಸ ವ್ಯವಸ್ಥೆಯ ಆರಂಭಿಕ ದಿನಗಳಲ್ಲಿ, ಇ-ಸ್ವತ್ತು ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಹಾಗೂ ಇ-ಸ್ವತ್ತು ಪ್ರಮಾಣಪತ್ರಗಳು (ನಮೂನೆ–11ಎ ಮತ್ತು ನಮೂನೆ–11ಬಿ) ಪಡೆಯುವಾಗ ಕೆಲವು ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ” ಎಂದರು.
“ತಂತ್ರಾಂಶದಲ್ಲಿ ಕಾಣಿಸಿಕೊಳ್ಳುವ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಬದ್ದವಾಗಿದೆ. ನಾಗರಿಕರು ಸಹಕರಿಸುವಂತೆ ವಿನಂತಿಸಲಾಗಿದೆ. ಇ-ಸ್ವತ್ತು ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲಾ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇಲಾಖೆಯಿಂದ ಇ-ಸ್ವತ್ತು ಸಹಾಯವಾಣಿ ( ಸಂಖ್ಯೆ: 9483476000) ಸ್ಥಾಪಿಸಲಾಗಿದೆ” ಎಂದು ಹೇಳಿದರು.





