ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಮಹಿಳೆಯರು ಮತ್ತು ಅವರ ಕುಟುಂಬಗಳ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ಬೀರಿವೆ. ಮಹಿಳೆಯರ ಸ್ವಾವಂಬನೆ, ಕುಟುಂಬದ ಪೋಷಣೆ, ಆರೋಗ್ಯ ರಕ್ಷಣೆ, ಚಲನಶೀಲತೆ, ಉದ್ಯೋಗ ಹಾಗೂ ಮಹಿಳೆಯರ ಘನತೆಯ ಜೀವನಕ್ಕೆ ಗ್ಯಾರಂಟಿಗಳು ನೆರವಾಗಿದೆ ಎಂದು ಸ್ವತಂತ್ರ ಅಧ್ಯಯನವೊಂದು ತಿಳಿಸಿದೆ.
ಸ್ವತಂತ್ರ ನೀತಿ ಸಲಹೆಗಾರರಾದ ತಾರಾ ಕೃಷ್ಣಸ್ವಾಮಿ ನೇತೃತ್ವದಲ್ಲಿ ಲೋಕನೀತಿ-ಸಿಎಸ್‌ಡಿಎಸ್, ಬೆಂಗಳೂರು ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ ಹಾಗೂ ಇಂಡಸ್ ಆಕ್ಷನ್ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿವೆ. ಸಮೀಕ್ಷಾ ವರದಿಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸೆಪ್ಟೆಂಬರ್ 27ರಂದು ಸಲ್ಲಿಸಲಾಗಿದೆ.
ಸಮೀಕ್ಷೆ ಮತ್ತು ವರದಿಯ ಬಗ್ಗೆ ತಾರಾ ಕೃಷ್ಣಸ್ವಾಮಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, “ರಾಜ್ಯದ ಎಲ್ಲ ಭಾಗಗಳಲ್ಲಿಯೂ ಸಮೀಕ್ಷೆ ನಡೆದಿದೆ. 15 ಜಿಲ್ಲೆಗಳಲ್ಲಿ ನಾನಾ ರೀತಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 6,000 ಮಹಿಳೆಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ” ಎಂದು ತಿಳಿಸಿದ್ದಾರೆ
“ಅನ್ನ ಭಾಗ್ಯ ಮತ್ತು ಶಕ್ತಿ ಯೋಜನೆಯು ತಮ್ಮ ಮತ್ತು ತಮ್ಮ ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗಿದೆ ಎಂದು 90% ಮಹಿಳೆಯರು ಹೇಳಿಕೊಂಡಿದ್ದಾರೆ. ಅಂತೆಯೇ, ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳು ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿವೆ ಎಂಬುದಾಗಿ 80% ಮಹಿಳೆಯರು ಹೇಳಿದ್ದಾರೆ” ಎಂದು ವರದಿ ತಿಳಿಸಿದೆ.
“ಮಹಿಳೆಯರು ಡಿಬಿಟಿ ಮೂಲಕ ಗೃಹ ಲಕ್ಷ್ಮಿ ಹಣವನ್ನು ಪಡೆದರೂ, ಅವರು ಶಕ್ತಿ ಯೋಜನೆಯಿಂದ ತಮ್ಮ ಖರ್ಚಿನ ಪೈಕಿ ವಾರಕ್ಕೆ 75% (500 ರೂ. ವರೆಗೆ) ಉಳಿತಾಯ ಮಾಡುತ್ತಿದ್ದಾರೆ. ಅಂತೆಯೇ, ಗೃಹ ಜ್ಯೋತಿ ಯೋಜನೆಯಿಂದ ವಿದ್ಯುತ್‌ಗಾಗಿನ ವೆಚ್ಚದಲ್ಲಿ ತಿಂಗಳಿಗೆ 74% (500 ರೂ.ವರೆಗೆ) ಹಣವನ್ನು ಉಳಿಸುತ್ತಿದ್ದಾರೆ” ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ.
ಸಮೀಕ್ಷೆ ನಡೆಸಿದ ಎಲ್ಲ ಜಿಲ್ಲೆಗಳಲ್ಲಿ 5 ಗ್ಯಾರಂಟಿ ಯೋಜನೆಗಳು ಒಟ್ಟಾರೆ ಪರಿಣಾಮದಿಂದಾಗಿ 75-98% ಮಹಿಳೆಯರು ಆರೋಗ್ಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿದೆ. ಮಹಿಳೆಯರು ಶಕ್ತಿ, ಗೃಹ ಜ್ಯೋತಿ ಯೋಜನೆಯಿಂದ ಉಳಿತಾಯವಾದ ಮತ್ತು ಗೃಹ ಲಕ್ಷ್ಮಿ ಯೋಜನೆಯಿಂದ ಪಡೆದ ಹಣವನ್ನು ಹಾಲು, ತರಕಾರಿ, ಮೊಟ್ಟೆ, ಮಾಂಸದಂತಹ ಆಹಾರ ಪದಾರ್ಥಗಳ ಖರೀದಿಗಾಗಿ ಬಳಸುತ್ತಿದ್ದಾರೆ. ಪರಿಣಾಮವಾಗಿ, 88% ಕುಟುಂಬಗಳು ಉತ್ತಮ ಮತ್ತು ಪೌಷ್ಠಿಕಾಂಶಭರಿತ ಆಹಾರ ಸೇವಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ಸಮೀಕ್ಷೆ ಗುರುತಿಸಿದೆ.
“ಸಮೀಕ್ಷೆಗೆ ಒಳಪಟ್ಟ ಒಟ್ಟು ಮಹಿಳೆಯರಲ್ಲಿ 83% ಮಹಿಳೆಯರು ವೈದ್ಯರು, ಆಸ್ಪತ್ರೆಗಳು, ಪರೀಕ್ಷೆಗಳು ಹಾಗೂ ಔಷಧಿಗಾಗಿ ಖರ್ಚುಗಳಿಗೆ ಪರದಾಡುವ ಪರಿಸ್ಥಿತಿ ಇಲ್ಲದೆ, ತಮ್ಮ ಆರೋಗ್ಯದ ಮೇಲೆ ಕಾಳಜಿವಹಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅವರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣ ಮತ್ತು ಆರೋಗ್ಯ ಸೇವೆಗಳ ವೆಚ್ಚವನ್ನು ಭರಿಸಲು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸುತ್ತಿದ್ದಾರೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಸಂಯೋಜನೆಯು ಫಲಾನುಭವಿಗಳ ಜೀವನದಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ತಂದಿದೆ” ಎಂದು ತಾರಾ ಕೃಷ್ಣಮೂರ್ತಿ ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರದ ಭೂಮಿ ಲೂಟಿ: ಅದಾನಿ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮೋದಿ ಸರ್ಕಾರದ ನೇರ ಪಾತ್ರ
“ಉಚಿತ ಪ್ರಯಾಣದಿಂದಾಗಿ ರಾಜ್ಯಾದ್ಯಂತ ಕಡಿಮೆ ಆದಾಯ ಹೊಂದಿರುವ ಮಹಿಳೆಯರಲ್ಲಿ ಸರಾಸರಿ 19% ಮಹಿಳೆಯರು ಹೊಸ ಉದ್ಯೋಗವನ್ನು ಪಡೆಯುತ್ತಿದ್ದಾರೆ ಅಥವಾ ಉತ್ತಮ ಸಂಬಳದ ಕೆಲಸಕ್ಕೆ ಸೇರಲು ಸಾಧ್ಯವಾಗುತ್ತಿದೆ. ಕಡಿಮೆ ಆದಾಯದ ಮಹಿಳೆಯರ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕಾಗಿ ಶಕ್ತಿ ಯೋಜನೆ ನೆರವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 34% ಮಹಿಳೆಯರು ಹೊಸ ಅಥವಾ ಉತ್ತಮ ವೇತನದ ಉದ್ಯೋಗಗಳನ್ನು ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, 26% ಮಹಿಳೆಯರು ಹೊಸ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ!” ಎಂದು ವರದಿ ತಿಳಿಸಿದೆ.
ಗೃಹ ಜ್ಯೋತಿ ಯೋಜನೆಯಿಂದಾಗಿ ತಮ್ಮ ಕುಟುಂಬಗಳು ವಿದ್ಯುತ್ ಸಂಪರ್ಕ ಮತ್ತು ಅಗತ್ಯವಿರುವಷ್ಟು ವಿದ್ಯುತ್ ಬಳಸಲು ಸಾಧ್ಯವಾಗುತ್ತಿದೆ ಎಂದು 72% ಮಹಿಳೆಯರು ಹೇಳಿಕೊಂಡಿದ್ದಾರೆ. ಪರಿಣಾಮವಾಗಿ, ಮಕ್ಕಳು ತಮ್ಮ ಶಾಲೆಗಳ ‘ಹೋಮ್ ವರ್ಕ್’ ಮಾಡುವಾಗ, ಶಾಂತವಾಗಿ ಅಡುಗೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ, 43% ಮಹಿಳೆಯರು ಹೀಟರ್‌ಗಳು, ಮಿಕ್ಸರ್‌ಗಳು ಹಾಗೂ ರೆಫ್ರಿಜರೇಟರ್‌ಗಳಂತಹ ಹೊಸ ಉಪಕರಣಗಳನ್ನು ಖರೀಸಿದಲು ಸಾಧ್ಯವಾಗಿದೆ ಎಂಬುದನ್ನು ವರದಿ ಕಂಡುಕೊಂಡಿದೆ.
5 ಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮ ವಿಶ್ವಾಸ, ಸ್ವಾವಲಂಬನೆ ಹಾಗೂ ಸಬಲೀಕರಣದ ಮೇಲೆ ಅತಿದೊಡ್ಡ ಪರಿಣಾಮ ಬೀರುತ್ತವೆ. ರಾಜ್ಯಾದ್ಯಂತ 70-95% ಮಹಿಳೆಯರು ತಮ್ಮ ಜೀವನ ಮಟ್ಟವು ಸುಧಾರಣೆ ಕಂಡಿದೆ ಎಂದು ಹೇಳಿಕೊಂಡಿದ್ದಾರೆ.




