ಪೊಲೀಸ್ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್‌ಐ ಹುದ್ದೆಗೆ ಅನುಭವವುಳ್ಳ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಶೇ.70:30 ಅನುಪಾತವನ್ನು ನಿಗದಿಪಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರಾದ ಡಿ.ಟಿ.ಶ್ರೀನಿವಾಸ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿ, “ಈ ಅನುಪಾತ ನಿಗದಿಯು ಇಲಾಖೆಯ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕೆ ಪೂರಕವಾಗಿರುತ್ತದೆ. ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯಲ್ಲಿ ಪಿ.ಎಸ್.ಐ (ಸಿವಿಲ್) ಹುದ್ದೆಯು ಪ್ರಮುಖ ಹುದ್ದೆಯಾಗಿದ್ದು, ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಅಪರಾಧ ಪ್ರಕರಣಗಳ ಪತ್ತೆ ಮತ್ತು ತನಿಖೆ, ಸಂಚಾರ ನಿರ್ವಹಣೆಯು ಇವರ ಮುಖ್ಯ ಕರ್ತವ್ಯವಾಗಿರುತ್ತದೆ” ಎಂದರು.
“ಈ ಕರ್ತವ್ಯಗಳನ್ನು ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಹಾಗೂ ತಾಂತ್ರಿಕ ನೈಪುಣ್ಯತೆಯುಳ್ಳ ಯುವ ಅಧಿಕಾರಿಗಳ ಅವಶ್ಯಕತೆ ಇರುತ್ತದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅಪರಾಧ. ಪ್ರಕರಣಗಳು ಹೆಚ್ಚಿನ ತಾಂತ್ರಿಕತೆಯಿಂದ ಕೂಡಿದ್ದು, ಇಂತಹ ಪ್ರಕರಣಗಳ ಪತ್ತೆಗೆ ಹೆಚ್ಚಿನ ತಾಂತ್ರಿಕ ವಿದ್ಯಾರ್ಹತೆಯುಳ್ಳ ಯುವಕರ ಅವಶ್ಯಕತೆ ಇರುತ್ತದೆ.
ಸಾಮಾನ್ಯವಾಗಿ ಪೊಲೀಸ್ ಕಾನ್ಸ್-ಟೇಬಲ್ ವೃಂದದ ಸಿಬ್ಬಂದಿಗಳು ಕ್ರಮವಾಗಿ ಹೆಡ್ ಕಾನ್ಸ್‌ಟೇಬಲ್ ಮತ್ತು ಎಎಸ್‌ಐ ಹುದ್ದೆಗಳಿಗೆ 02 ಮುಂಬಡ್ತಿಯನ್ನು ಹೊಂದಿ ನಂತರ ಪಿ.ಎಸ್.ಐ(ಸಿವಿಲ್) ಹುದ್ದೆಗೆ ಅರ್ಹರಾಗುತ್ತಾರೆ. ಇವರ ಶಿಕ್ಷಣವು ಮೂಲ ಹುದ್ದೆಯ ಕನಿಷ್ಕ ಮಟ್ಟದ್ದಾಗಿರುವುದರಿಂದ ಪ್ರಸ್ತುತ ವರದಿಯಾಗುತ್ತಿರುವ ಹೆಚ್ಚಿನ ತಾಂತ್ರಿಕತೆ ಅಪರಾಧ ಪ್ರಕರಣ ಭೇದಿಸುವುದು ಕಷ್ಟಸಾಧ್ಯವಾಗಿರುತ್ತದೆ” ಎಂದು ಹೇಳಿದರು.
ಕಾಲಮಿತಿಯೊಳಗೆ ಮುಂಬಡ್ತಿ
“ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಘಟಕದಲ್ಲಿ (ಸಂಚಾರಿ ವಿಭಾಗಗಳನ್ನು ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ರವರುಗಳಿಗೆ ಪ್ರಸ್ತುತ ಸುಮಾರು 29 ವರ್ಷಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಎಎಸ್ ಐ ಹುದ್ದೆಯಲ್ಲಿ 5 ವರ್ಷ 10 ತಿಂಗಳು ಸೇವೆಯನ್ನು ಪೂರೈಸಿರುವ ಕಾಲಮಿತಿಯೊಳಗೆ ಮುಂಬಡ್ತಿ ನೀಡಲಾಗಿದೆ” ಎಂದು ಗೃಹ ಸಚಿವರು ಮಾಹಿತಿ ನೀಡಿದರು.
15 ದಿವಸಗಳ ವೇತನ ಹೆಚ್ಚಳಕ್ಕೆ ಪರಿಷ್ಕರಣೆ: ಡಾ.ಜಿ.ಪರಮೇಶ್ವರ್
“ಪೊಲೀಸ್ ಇಲಾಖೆಯ ಎ.ಎಸ್.ಐ ಮತ್ತು ಸಿಬ್ಬಂದಿಗಳು ಪಿ.ಎಸ್.ಐ ವೃಂದದ ಪತ್ರಾಂಕಿತ ರಜಾ ದಿವಸಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಸ್ತುತ ಲಭ್ಯವಿರುವ 15 ದಿವಸಗಳ ವೇತನವನ್ನು 30 ದಿವಸಗಳ ವೇತನಕ್ಕೆ ಪರಿಷ್ಕರಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ” ಎಂದು ತಿಳಿಸಿದರು.
“ಪ್ರಸ್ತುತ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕೆಲವು ನಿರ್ದಿಷ್ಟ ವೃಂದದ ಸಿಬ್ಬಂದಿಗಳನ್ನೂ ಒಳಗೊಂಡಂತೆ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್-ಟೇಬಲ್ ಮತ್ತು ಹೆಡ್ ಕಾನ್ಸ್-ಟೇಬಲ್ ವೃಂದದ ಸಿಬ್ಬಂದಿಗಳಿಗೆ ಅವರು ಪತ್ರಾಂಕಿತ ರಜಾ ದಿವಸಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ 30 ದಿನಗಳ ಹೆಚ್ಚುವರಿ ವೇತನವನ್ನು ಪಾವತಿಸಲು
ಅವಕಾಶವಿರುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಲಭ್ಯವಿರುವ ಪತ್ರಾಂಕಿತ ರಜಾ ವೇತನದ ಸೌಲಭ್ಯವೂ ಸೇರಿದಂತೆ ಸರ್ಕಾರಿ ನೌಕರರ ವಿಶೇಷ ಭತ್ಯೆಯ ಪರಿಷ್ಕರಣೆಯು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿರುತ್ತದೆ” ಎಂದು ಗೃಹ ಸಚಿವರು ವಿವರಿಸಿದರು.





