ಬಿಹಾರ ಚುನಾವಣೆಗೆ 400 ಕೋಟಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ ಸಚಿವರಿಗೆ ಇಲಾಖಾವಾರು ಕಪ್ಪವನ್ನು ನಿಗದಿಪಡಿಸಿದ್ದಾರೆ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಮೃತ್ಯುಂಜಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರದ ವಿರೋಧ ಪಕ್ಷದ ನಾಯಕರ ಬಳಿ ನಿಖರವಾದ ಮಾಹಿತಿ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇವರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ಈ ಬೃಹತ್ ಮೊತ್ತದ ಕನ್ನಡಿಗರ ತೆರಿಗೆ ಹಣವನ್ನು ಬಿಹಾರ ಚುನಾವಣೆಗಾಗಿ ಅಕ್ರಮವಾಗಿ ಹೇಗೆ ಸಾಗಣೆ ಮಾಡಿದ್ದಾರೆ ಹಾಗೂ ಚುನಾವಣಾ ಅಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷವು ಬಳಸಿಕೊಳ್ಳುತ್ತಿರುವುದನ್ನು ಕೂಡಲೇ ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಬೇಕು ಹಾಗೂ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?
ಮುಂದಿನ ಮಂತ್ರಿಮಂಡಲ ವಿಸ್ತರಣೆಗಾಗಿ ನೂರಾರು ಕೋಟಿ ರೂಪಾಯಿಗಳ ಕಪ್ಪ ಕಾಣಿಕೆಗಳನ್ನು ಒಪ್ಪಿಸಬೇಕು ಎಂದು ಪದೇ ಪದೇ ಹೇಳುತ್ತಿರುವ ವಿರೋಧ ಪಕ್ಷದ ನಾಯಕನ ಹೇಳಿಕೆಯಲ್ಲಿ ಸಾಚಾತನ ಇಲ್ಲದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸ್ವತಃ ತಾವೇ ಮುಂದಾಗಿ ಇಡಿ ತನಿಖೆಗೆ ಒಪ್ಪಿಸಿ ರಾಜ್ಯದ ಜನತೆಗೆ ನೈಜ ಚಿತ್ರಣವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ ಎಂದು ಆಪ್ ಮಾಧ್ಯಮ ಸಂಚಾಲಕ ಜಗದೀಶ್ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





