ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಸೋಮವಾರ ಸಿಎಂ ಮನೆ ಮುತ್ತಿಗೆಗೆ ಯತ್ನಿಸಿದರು.
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಪ್ರತಿಭಟನೆಯಲ್ಲಿ ಸಾಗಿ ಬರುತ್ತಿದ್ದ ನಾಯಕರನ್ನು ಪೊಲೀಸರು ತಡೆದು ಬಂಧಿಸಿ, ಬಸ್‌ನಲ್ಲಿ ಕರೆದೊಯ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, “ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ” ಎಂದು ಆರೋಪಿಸಿದರು.
“ಇಂಥ ದೇಶದ್ರೋಹಿಗಳಿಗೆ ಟಿ.ವಿ., ಮೊಬೈಲ್ ಫೋನ್, ಗುಂಡು- ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ. ರಾಜ್ಯ ಸರಕಾರವು ಕಣ್ಮುಚ್ಚಿ ಕುಳಿತಿರುವುದು ಇದರಿಂದ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಲಾಗಿದೆ. ಇದಕ್ಕೆಲ್ಲ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಅವರು ನೇರ ಹೊಣೆಗಾರರು” ಎಂದು ದೂರಿದರು.
ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿ: ಆರ್.ಅಶೋಕ್
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, “ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಅವರ ಹಾಟ್‍ಲೈನ್ ಮೂಲಕ ಈ ಜೈಲಿನಿಂದ ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಕರೆಗಳು ಹೋಗುತ್ತಿವೆ. ಇವರು 2 ವರ್ಷದಿಂದ ಕತ್ತೆ ಕಾಯುತ್ತಿದ್ದಾರಾ? ಗುಪ್ತಚರ ವಿಭಾಗ ಎರಡು ವರ್ಷದಿಂದ ಸತ್ತು ಹೋಗಿದೆ. ಪೊಲೀಸ್ ಠಾಣೆಗಳನ್ನು ಇವರು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ” ಎಂದು ಆಕ್ಷೇಪಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕರಾದ ಕೆ. ಗೋಪಾಲಯ್ಯ, ಉದಯ್ ಬಿ. ಗರುಡಾಚಾರ್, ಎಂ. ಕೃಷ್ಣಪ್ಪ, ಸಿ. ಮುನಿರಾಜು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ರಾಜ್ಯ ಕಾರ್ಯದರ್ಶಿಗಳಾದ ಹೆಚ್.ಸಿ. ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಮುಖಂಡ ಉಮೇಶ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಎಸ್. ಹರೀಶ್, ಸಪ್ತಗಿರಿ ಗೌಡ ಮತ್ತು ಪ್ರಮುಖರು ಉಪಸ್ಥಿತರಿದ್ದರು.





