ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ವಿಷಯದಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವ ಹಿನ್ನಲೆ, ಸಾವಿರಾರು ಪದವಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಸರ್ಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದಿರುವುದನ್ನು ಖಂಡಿಸಿ AIDSO ಕರ್ನಾಟಕ ರಾಜ್ಯ ಸಮಿತಿಯು ಸೆ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ತರಗತಿ ಬಹಿಷ್ಕಾರಕ್ಕೆ ಕರೆ ನೀಡಿದೆ.
ಕಳೆದ ಎರಡು ತಿಂಗಳಿಂದ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಇದೇ ಅವಧಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಪಠ್ಯಕ್ರಮ, ಘಟಕ ಪರೀಕ್ಷೆಗಳು ಮುಗಿದು, ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ಧತೆ ನಡೆಯುತ್ತಿದೆ. ಆದರೆ, ಬಡ ಮತ್ತು ಗ್ರಾಮೀಣ ಹಿನ್ನಲೆಯ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುವಂತಾಗಿದೆ.
ಈ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಎಐಡಿಎಸ್‌ಓ ರಾಜ್ಯ ಸಮಿತಿಯು, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಯುಜಿಸಿ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಲ್ಲ. ಸರ್ಕಾರ ಬಯಸಿದರೆ ಈ ಬಿಕ್ಕಟ್ಟನ್ನು ತಕ್ಷಣವೇ ಪರಿಹರಿಸಬಹುದು. ಆದರೆ, ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು AIDSO ಭಾವಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡೆ ಪ್ರದೇಶದಲ್ಲಿ ವ್ಯಾಪಕ ಶೋಧಕ್ಕೆ ಎಸ್‌ಐಟಿ ಮತ್ತೆ ಸಿದ್ಧತೆ!
ಕಳೆದ ಕೆಲವು ವಾರಗಳಿಂದ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಹೀಗಾಗಿ, ತಮ್ಮ ಶಿಕ್ಷಣದ ಹಕ್ಕನ್ನು ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ಈ ಹೋರಾಟವನ್ನು ತೀವ್ರಗೊಳಿಸಿ, ತರಗತಿ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಸರ್ಕಾರಕ್ಕೆ ಒಂದು ಸ್ಪಷ್ಟ ಸಂದೇಶ ಕಳುಹಿಸಲು ಸಜ್ಜಾಗಿದ್ದಾರೆ. ಖಾಸಗಿ – ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಅಸಮಾನತೆಗೆ ಕಾರಣವಾಗಿರುವ ರಾಜ್ಯ ಸರ್ಕಾರವನ್ನು AIDSO ರಾಜ್ಯ ಸಮಿತಿ ಖಂಡಿಸುತ್ತದೆ ಎಂದು AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





