ರಾಜ್ಯದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ ಖುಲಾಸೆಯಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯದ ಪ್ರಕ್ರಿಯೆ ಹಿಂಸೆಯ ಅನುಭವಿಸಿದ ಸಂತ್ರಸ್ತರ ಪರ ನಿಲ್ಲದಿರುವುದು ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆಯಾಗಿಸಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಅವರು, “ಮುರುಘಾ ಮಠದ ಶಿವಮೂರ್ತಿ ಶರಣ ಸ್ವಾಮಿಗೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ ಖುಲಾಸೆ, ಇದೇ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿಚಾರಣೆಗೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ನೀಡಿದ ತಡೆ, ಧರ್ಮಸ್ಥಳದಲ್ಲಿ ಆರೋಪಿತರ ವಿರುದ್ಧ ವಿಚಾರಣೆಗೆ ನೋಟಿಸ್ ಕೂಡ ನೀಡದೇ, ಬದಲಿಗೆ ದೂರುಕೊಟ್ಟವರ ಮೇಲೆಯೇ ಆರೋಪಪಟ್ಟಿ ಸಲ್ಲಿಸಿರುವುದು ಆಘಾತಕಾರಿ ಮತ್ತು ನ್ಯಾಯವ್ಯವಸ್ಥೆಯ ಮೂಲ ತತ್ವಗಳಿಗೆ ವಿರುದ್ಧ” ಎಂದು ಆರೋಪಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ಹೇಳಿಕೆಯನ್ನೇ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಹೇಳುವ ನ್ಯಾಯ ವ್ಯವಸ್ಥೆಯಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿರುವುದು ಪ್ರಶ್ನಾರ್ಹ ಸಂಗತಿಗಳು. ಮುರುಘಾ ಮಠದ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕಿಯರಲ್ಲಿ ಒಬ್ಬಳು ಆತ್ಮಹತ್ಯೆ ಪ್ರಯತ್ನ ಮಾಡಿರುವುದು ಸಹ ವರದಿಯಾಗಿದೆ. ಲೈಂಗಿಕ ದೌರ್ಜನ್ಯಗಳಿಗೆ ಒಳಗಾದವರು ಅನುಭವಿಸುವ ನೋವು ಮತ್ತು ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಇದೊಂದು ಉದಾಹರಣೆ ಸಾಕು. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬಾಲಕಿಯರು ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಸರಕಾರದ ನಡೆ ಏನೆಂಬುದರ ಮಾಹಿತಿಗಳಿಲ್ಲ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ತಿರುಪತಿ ದೇವಾದಿದೇವ ತಿಮ್ಮಪ್ಪನಿಗೇ ನಾಮ ಹಾಕುವ ಧೂರ್ತರು!
ಅದೇ ರೀತಿ ಪೋಕ್ಸೊ ಕೇಸ್ ಆರೋಪಿಯಾಗಿರುವ ಯಡಿಯೂರಪ್ಪ ವಿರುದ್ಧ ಮಗಳಿಗಾದ ಅನ್ಯಾಯವನ್ನು ಪ್ರಶ್ನಿಸಿ ಹೋರಾಡುತ್ತಿದ್ದ ಮಹಿಳೆ ಹಠಾತ್ ಮರಣಹೊಂದುತ್ತಾರೆ. ಇಲ್ಲಿ ನ್ಯಾಯದ ಪರ ನಿಲ್ಲಬೇಕಿದ್ದ ರಾಜ್ಯ ಸರ್ಕಾರದ ಗೃಹ ಮಂತ್ರಿಗಳು ಸಂತ್ರಸ್ತರನ್ನೇ ದೂಷಿಸಿದ್ದೂ ವರದಿಯಾಗಿದೆ. ಸಮಾಜದಲ್ಲಿ ಪ್ರಬಲ ರಾಜಕೀಯ ಹಿನ್ನಲೆ ಇರುವ ಅಥವಾ ಬಲಾಢ್ಯರ ವಿರುದ್ಧ ಕಾನೂನು ಹೋರಾಟ ಮಾಡುವುದು ಸುಲಭದ ದಾರಿಯಲ್ಲ. ಆದಾಗ್ಯೂ ಹಲವು ಹೆಣ್ಣು ಮಕ್ಕಳು ತಮಗಾದ ಅನ್ಯಾಯವನ್ನು ಪ್ರಶ್ನಿಸಿ ಎದುರು ನಿಂತಾಗ ರಾಜ್ಯ ಸರ್ಕಾರ, ರಾಜ್ಯದ ಕಾನೂನು ವ್ಯವಸ್ಥೆ ಅವರ ಜೊತೆ ನಿಲ್ಲಬೇಕು. ಅನ್ಯಾಯದ ವಿರುದ್ಧದ ಹೋರಾಟ ವೈಯಕ್ತಿಕ ಹೋರಾಟವೆಂದು ಸರ್ಕಾರ ಸುಮ್ಮನಾದರೆ ಮುಂದೊಂದು ದಿನ ಜನತೆಯ /ಮಹಿಳೆಯರ ಪಾಲಿಗೆ ಸುರಕ್ಷತೆಯ ದಿನಗಳೇ ಇಲ್ಲವಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ಎರಡು ಪ್ರಕರಣಗಳ ಮೇಲ್ಮಟ್ಟದ ಕಾನೂನು ಹೋರಾಟಕ್ಕೆ ಅಗತ್ಯ ನೆರವನ್ನು ನೀಡಿ ಮೇಲ್ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು ಮತ್ತು ಅತ್ಯಾಚಾರ ಸಂತ್ರಸ್ಥರಿಗೆ ರಕ್ಷಣೆಯನ್ನು ನೀಡಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.





