ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬಜೆಟ್ ಮಂಡಿಸಿದ್ದು, ಈ ಬಜೆಟ್ ಅನ್ನು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಟೀಕಿಸಿದೆ. “ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲಾಗಿದೆ. ಅಲೆಮಾರಿ ಸಮುದಾಯಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ” ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾ ಒಕ್ಕೂಟವು, “1% ಒಳಮೀಸಲಾತಿಯಂತೂ ಇಲ್ಲ. ಮುಖ್ಯಮಂತ್ರಿ ಈ ಹಿಂದೆ ಭರವಸೆ ಕೊಟ್ಟಂತೆ ಪ್ರತ್ಯೇಕ ನಿಗಮವೂ ಇಲ್ಲ, ಸಬಲೀಕರಣದ ವಿಶೇಷ ಪ್ಯಾಕೇಜೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ
“ವಾರ್ಷಿಕ ಬಜೆಟ್‌ನಲ್ಲಿ 4 ವಸತಿ ಶಾಲೆಗಳನ್ನು ಬಿಟ್ಟರೆ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ. ಬಲಾಢ್ಯ ಪರಿಶಿಷ್ಟ ಜಾತಿಗಳ ಲಾಬಿಗೆ ಮಣಿದು 49 ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ನ್ಯಾಯೋಚಿತ ಪಾಲನ್ನು ರಾಜ್ಯ ಸರ್ಕಾರ ನೀಡಿಲ್ಲ. ಪ್ರತಿಭಟನಾ ಸಮಾವೇಶ ನಡೆಸಿದರೂ ನಮ್ಮ ಅಹವಾಲನ್ನು ಸ್ವೀಕರಿಸಲು ಸರ್ಕಾರದ ಯಾವ ಪ್ರತಿನಿಧಿಯೂ ನಮ್ಮ ಬಳಿ ಸುಳಿಯಲ್ಲ” ಎಂದು ಹೇಳಿದೆ.
“ನಾವು ಅಕ್ಟೋಬರ್ 2ನೇ ತಾರೀಕು ದೆಹಲಿಗೆ ತೆರಳಿ ಜಂತರ್ ಮಂತರ್‌ನಲ್ಲಿ ಮತ್ತು ಎಐಸಿಸಿ ಕಛೇರಿಯ ಬಳಿ ಧರಣಿ ನಡೆಸಿದೆವು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರು ‘ಅಲೆಮಾರಿಗಳಿಗೆ ಶೇ1%, ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಭಿವೃದ್ಧಿಯ ವಿಶೇಷ ಪ್ಯಾಕೇಜನ್ನು ನೀಡಲು ನಮ್ಮ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ’ ಎಂದು ಭರವಸೆ ನೀಡಿ ದೆಹಲಿಯಿಂದ ನಮ್ಮನ್ನು ವಾಪಸ್ ಕರೆಯಿಸಿಕೊಂಡಿದ್ದರು. ನಂತರ ಅಕ್ಟೋಬರ್ 31ರಂದು ಅಲೆಮಾರಿ ಸಮುದಾಯಗಳ ಮುಖಂಡರನ್ನು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದು ಶೇ 1% ಮೀಸಲಾತಿಯನ್ನು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಭಿವೃದ್ಧಿಯ ವಿಶೇಷ ಪ್ಯಾಕೇಜನ್ನು ನೀಡುವ ಭರವಸೆಯನ್ನು ಸಭೆಯಲ್ಲಿ ನೀಡಿದ್ದರು. ಫೆಬ್ರವರಿ 05ರಂದು ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರು ಅಲೆಮಾರಿ ಸಮುದಾಯಗಳ ಪ್ರತಿನಿಧಿಗಳನ್ನು ಕರೆದು 2026-27ನೇ ಸಾಲಿನ ಅಯವ್ಯಯದಲ್ಲಿ ಅಲೆಮಾರಿ ಸಮುದಾಯಗಳಿಗೆ ನೀಡಬೇಕಿರುವ ಅಭಿವೃದ್ಧಿ ಯೋಜನೆಗಳನ್ನು ಕುರಿತು ಚರ್ಚಿಸಿದ್ದರು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಂದೀಪ್, ರಾಕೇಶ್ ಕುಮಾರ್, ವೆಂಕಟಯ್ಯ ಮತ್ತು ಇತರೆ ಅಧಿಕಾರಿಗಳು ಇದ್ದರು” ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಅಂದಿನ ಸಭೆಯಲ್ಲಿ ಇಟ್ಟ ಬೇಡಿಕೆಗಳನ್ನೂ ಉಲ್ಲೇಖಿಲಾಗಿದ್ದು, ಬೇಡಿಕೆಗಳು ಈ ಕೆಳಗಿನಂತಿವೆ.
- ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಅನುಸಾರ 49 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ `ಎ’ನಲ್ಲಿ ಇರಿಸಿ ಶೇ 1%ರಷ್ಟು ಮೀಸಲಾತಿಯನ್ನು ನೀಡಬೇಕು.
- 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮದ ಸ್ಥಾಪನೆ ಮಾಡಬೇಕು
- ಕರ್ನಾಟಕ ಸರ್ಕಾರವು ರಾಜ್ಯದ 49 ಅಲೆಮಾರಿ ಸಮುದಾಯಗಳಿಗೆ 500 ಕೋಟಿಗಳನ್ನು ಮೀಸಲಾಗಿಟ್ಟು ಅಭಿವೃದ್ಧಿಯ ವಿಶೇಷ ಪ್ಯಾಕೇಜನ್ನು ರೂಪಿಸಬೇಕು.
- ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ತನ್ನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆಯ (Special Component Plan) ಒಟ್ಟು ಮೊತ್ತದಲ್ಲಿ ಶೇ5% ರಷ್ಟು ಹಣವನ್ನು 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ಮೀಸಲಾಗಿಡಬೇಕು.
- ವಸತಿ: ಪ್ರತಿ ಜಿಲ್ಲೆಗೆ 500 ಮನೆಗಳಂತೆ 31 ಜಿಲ್ಲೆಗಳಿಗೆ 15,500 ಮನೆಗಳನ್ನು ನಿರ್ಮಾಣ ಮಾಡಬೇಕು. ಇದನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಿ ಒಟ್ಟು 46,500 ಮನೆಗಳನ್ನು ಅಲೆಮಾರಿ ಸಮುದಾಯಗಳಿಗೆ ನಿರ್ಮಿಸಬೇಕು.
- ಭೂಒಡೆತನ ಯೋಜನೆ: ಅಲೆಮಾರಿ ಸಮುದಾಯಗಳಿಗೆ ಸರ್ಕಾರವು ಕೃಷಿಭೂಮಿಯನ್ನು ನೀಡಿ ಅವರಿಗೆ ನಿರ್ದಿಷ್ಟ ಆರ್ಥಿಕ ಮೂಲವನ್ನು ಕಲ್ಪಿಸಬೇಕು. ಭೂಒಡೆತನ ಯೋಜನೆಯಲ್ಲಿ ಪ್ರತಿ ಜಿಲ್ಲೆಗೆ 100 ಎಕರೆ ಕೃಷಿ ಜಮೀನನ್ನು ಅಲೆಮಾರಿ ಸಮುದಾಯಗಳಿಗೆ ಮೀಸಲಾಗಿಡಬೇಕು.
- ಶಿಕ್ಷಣ : ಅಲೆಮಾರಿ ಸಮುದಾಯಗಳ ಮಕ್ಕಳ ವಿದ್ಯಾಭ್ಯಾಸಕ್ಕೆ
ನವೋದಯ ವಿದ್ಯಾಲಯ’ ಮತ್ತುಮೊರಾರ್ಜಿ ವಸತಿ ಶಾಲೆ’ಗಳ ಮಾದರಿಯಲ್ಲಿ ಎರಡು ಜಿಲ್ಲೆಗ ಒಂದರಂತೆ ಒಟ್ಟು 15 ವಸತಿ ಶಾಲೆಗಳನ್ನು ನಿರ್ಮಾಣ ಮಾಡಬೇಕು. ಸರ್ಕಾರದ ವಸತಿ ನಿಲಯಗಳಲ್ಲಿ (ಹಾಸ್ಟೆಲ್) ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಶೇ 15%ರಷ್ಟು ಸ್ಥಾನಗಳನ್ನು ಉಚಿತವಾಗಿ ಕಲ್ಪಿಸಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯನ್ನು (ಪಿಎಚ್, ಡಿ ಅಥವಾ ತತ್ಸಮಾನ ಸಂಶೋಧನೆಗಾಗಿ) ಕೈಗೊಳ್ಳುವ ಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಪ್ರತಿ ತಿಂಗಳು ರೂ 25,000/-ಗಳ ಶಿಷ್ಯವೇತನವನ್ನು (Fellowship) ನೀಡಬೇಕು. ಇದಲ್ಲದೆ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ತೆರಳುವ ಅಲೆಮಾರಿ ಸಮುದಾಯಗಳ ಯುವಕರಿಗೆ ಸೂಕ್ತ ಹಣಕಾಸಿನ ನೆರವನ್ನು ನೀಡಬೇಕು. - ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳಿಗೆ ಸೇರಿದ ಹಲವು ಸಮುದಾಯಗಳ ಪಾರಂಪರಿಕ ಕೌಶಲ್ಯ ಮತ್ತು ಕಲೆಗಳನ್ನು ಆಧುನಿಕಗೊಳಿಸಲು ಈ ಸಮುದಾಯಗಳಿಗೆ ತರಬೇತಿ ನೀಡಬೇಕು. ಪ್ರತಿ ವ್ಯಕ್ತಿಗೆ 10 ಲಕ್ಷಗಳ ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡಬೇಕು. ಇದಲ್ಲದೆ, ಸ್ವಯಂಸಾರಥಿ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ನೀಡುವ ಅನುದಾನ ಹೆಚ್ಚಿಸಿ, ಜಿಲ್ಲೆಯೊಂದರಲ್ಲಿ ಅಲೆಮಾರಿ ಸಮುದಾಯಗಳಿಗೆ ಸೇರಿದ ಕನಿಷ್ಟ 100 ಜನರಿಗೆ ಸಾಲ ಸೌಲಭ್ಯಗಳು ಸಿಗುವಂತೆ ಮಾಡಬೇಕು.
- ಸಂಸ್ಕೃತಿ, ಕಲೆಗಳ ರಕ್ಷಣೆ: ಅಲೆಮಾರಿ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ
ಅಲೆಮಾರಿ ಸಮುದಾಯಗಳ ಭಾಷೆ, ಕಲೆ ಮತ್ತು ಸಂಸ್ಕೃತಿ ಅಕಾಡೆಮಿ’ಯನ್ನು, ಅಲೆಮಾರಿ ಸಮುದಾಯಗಳ ಅಧ್ಯಯನಕ್ಕಾಗಿಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಬೇಕು. - `ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಆಯೋಗ’ವನ್ನು ರಾಜ್ಯದಲ್ಲಿ ಸ್ಥಾಪಿಸಬೇಕು. ಅಲೆಮಾರಿ ಮತ್ತು ವಿಮುಕ್ತ ಸಮುದಾಗಳಿಗೆ ಸೇರಿದ ವ್ಯಕ್ತಿಗಳು ಈ ಆಯೋಗಕ್ಕೆ ಅಧ್ಯಕ್ಷ ಮತ್ತು ಪದಾಧಿಕಾರಿಗಳಾಗಬೇಕು.
“ಹತ್ತು ಬೇಡಿಕೆಗಳನ್ನು ನಾವು ಮಾನ್ಯ ಮುಖ್ಯಮಂತ್ರಿಗಳ ಮತ್ತು ಸಮಾಜ ಕಲ್ಯಾಣ ಸಚಿವರ ಬಜೆಟ್‌ಪೂರ್ವ ಸಭೆಯಲ್ಲಿ ಮಂಡಿಸಿದ್ದೆವು. ಈ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರು ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಮಾರ್ಚ್ 6ರಂದು ಮಂಡಿಸಿದ ಅಯವ್ಯಯದಲ್ಲಿ ನಮ್ಮ ಯಾವ ಬೇಡಿಕೆಗಳನ್ನೂ ಈಡೇರಿಸದೆ ಅಲೆಮಾರಿಗಳಿಗೆ ಸರ್ಕಾರ ಅನ್ಯಾಯವೆಸಗಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಒಳಮೀಸಲಾತಿ: ಅಲೆಮಾರಿ ಸಮುದಾಯ ಸಮಸ್ಯೆ ಪರಿಹಾರಕ್ಕೆ ಅ.31ರಂದು ಸಭೆ
“ನಮ್ಮ ಹಕ್ಕುಗಳಿಗಾಗಿನ ಹೋರಾಟವು ನಿಲ್ಲುವುದಿಲ್ಲ. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ನಿಮ್ಮನ್ನು ಚುನಾವಣೆಗಳಲ್ಲಿ ಗೆಲ್ಲಿಸಲು ಬೇಕಾದ ಸಂಖ್ಯೆ ನಮ್ಮಲ್ಲಿ ಇಲ್ಲದೇ ಇರಬಹುದು. ಆದರೆ ನೀವು ಮಾಡುತ್ತಿರುವ ಬಲಾಢ್ಯರ ಪರವಾದ ರಾಜಕಾರಣವನ್ನು ನಾವು ರಾಜ್ಯದ ಜನರ ಮುಂದೆ ಬಯಲುಗೊಳಿಸುವ ಶಕ್ತಿ ನಮಗಿದೆ. ಒಳಮೀಸಲಾತಿಯಲ್ಲಿ ಸರಿಯಾದ ಪಾಲನ್ನು ಪಡೆಯಲು ನಾವು ಬೀದಿ ಹೋರಾಟಗಳನ್ನು ಮುಂದುವರೆಸುತ್ತೇವೆ” ಎಂದು ಎಚ್ಚರಿಕೆ ನೀಡಿದೆ.
“ಹಾಗೆಯೇ ನ್ಯಾಯಾಲಯದಲ್ಲಿ ನಮ್ಮ ನ್ಯಾಯಬದ್ಧ ಹಕ್ಕಿಗಾಗಿ ಹೋರಡುತ್ತಲೇ ಇರುತ್ತೇವೆ. ರಾಜ್ಯದಲ್ಲಿನ ನ್ಯಾಯಪ್ರಜ್ಞೆಯುಳ್ಳ ಜನ ನಮ್ಮ ಸಹಾಯಕ್ಕೆ ಬರುತ್ತಾರೆ ಎಂಬ ವಿಶ್ವಾಸದಲ್ಲಿ ನಮ್ಮ ಹೋರಟವನ್ನು ಮುಂದುವರೆಸುತ್ತೇವೆ. ಹಾಗೆಯೇ ಎಲ್ಲಾ ಪಕ್ಷದಲ್ಲಿರುವ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಶಾಸಕರು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳ ಪರ ದನಿ ಎತ್ತಬೇಕು” ಎಂದು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಮನವಿ ಮಾಡಿದೆ.





