ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರು ಬದಲಿಸಿ, ‘ವಿಬಿ ಜಿ ರಾಮ್ ಜಿ’ ಕಾಯ್ದೆ ರೂಪಿಸಿರುವ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸೆಡ್ಡು ಹೊಡೆದಿದೆ. ಕರ್ನಾಟಕದಲ್ಲಿರುವ ಎಲ್ಲ ಗ್ರಾಮ ಪಂಚಾಯತಿಗಳಿಗೂ ಮಹಾತ್ಮ ಗಾಂಧಿ ಹೆಸರು ಇಡುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್ ನಡೆಸಿದ ‘ಮನರೇಗಾ ಬಚಾವೋ’ ಆಂದೋಲನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. “ಮಹಾತ್ಮಗಾಂಧಿ ಹೆಸರು ಕೇಳಿದರೆ ಇವರಿಗೆ ಆಗಲ್ಲ. ದುರುದ್ದೇಶದಿಂದ ಮನರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜಿ ರಾಮ್ ಜಿ’ ಜಾರಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಮನರೇಗಾ ಕಾಯ್ದೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ಆದರೆ, ಇಲ್ಲಿ ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. RSS ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನು ಬಿಜೆಪಿಯವರು ರದ್ದು ಮಾಡಿದ್ದಾರೆ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ” ಎಂದಿದ್ದಾರೆ.
“ಆರ್ ಎಸ್ ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ ಸಿದ್ಧಾಂತ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.




