ಧರ್ಮಸ್ಥಳದ ‘ಅನಾಮಧೇಯ’ ವ್ಯಕ್ತಿಯಿಂದ ಕೊನೆಗೂ ಎಸ್‌ಪಿಗೆ ದೂರು: 6 ಪುಟಗಳ ಪತ್ರದಲ್ಲಿರುವುದೇನು?

Date:

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವಕೀಲರ ಮೂಲಕ ಹೇಳಿಕೆ ನೀಡುತ್ತಿದ್ದ ಪಾಪ ಪ್ರಜ್ಞೆ ಕಾಡಿದ್ದ ಅನಾಮಧೇಯ ವ್ಯಕ್ತಿ ಜುಲೈ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದು ದೂರು ನೀಡಿರುವುದಾಗಿ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಎಸ್‌ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದ್ದು ವಿಚಾರಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎಸ್‌ಪಿಯವರಿಗೆ ಸಲ್ಲಿಸಿದ್ದೆನ್ನಲಾದ ಸುಮಾರು ಆರು ಪುಟಗಳ ದೂರನ್ನು ವಕೀಲರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆ ವ್ಯಕ್ತಿಯ ಹೆಸರನ್ನು ಇನ್ನೂ ಕೂಡ ಬಹಿರಂಗಗೊಳಿಸಿಲ್ಲವಾದರೂ, ‘ಆ’ ವ್ಯಕ್ತಿ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕ ಆಗಿದ್ದರು ಎಂದು ಖಾತ್ರಿಪಡಿಸಿದೆ. ಅಲ್ಲದೇ, ಅವರು 1995ರಿಂದ 2014ರ ಡಿಸೆಂಬರ್‌ ವರೆಗೆ ಉದ್ಯೋಗದಲ್ಲಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ. ನಾನು 11 ವರ್ಷಗಳ ಹಿಂದೆ ಧರ್ಮಸ್ಥಳವನ್ನು ರಾತ್ರೋರಾತ್ರಿ ತೊರೆದೆ; ನನ್ನ ಸಣ್ಣ ಕುಟುಂಬವನ್ನೂ ನನ್ನೊಡನೆ ಎಳೆದೊಯ್ದೆ. ನೆರೆ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಗೊಳಗಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ” ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಹೇಳುತ್ತಿರುವುದರ ಪುರಾವೆಯಾಗಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೃತದೇಹ ಹೂಳಿದ್ದ ಸ್ಥಳವೊಂದಕ್ಕೆ ರಹಸ್ಯವಾಗಿ ಹೋಗಿ ಕಳೇಬರವನ್ನು ಹೊರತೆಗೆದಿದ್ದೇನೆ” ಎಂದೂ ಕೂಡ ‘ಆ’ ವ್ಯಕ್ತಿಯು ವಕೀಲರ ಮೂಲಕ ಎಸ್‌ಪಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

“ಆರೋಪಿತರ ಹೆಸರುಗಳು ಮತ್ತು ಅಪರಾಧಗಳಲ್ಲಿ ಅವರ ನಿಖರ ಪಾತ್ರವನ್ನು ಪೊಲೀಸರಿಗೆ ತಿಳಿಸುವ ಮುನ್ನವೇ ನಾನು ಕೊಲೆಯಾದರೆ ಇಲ್ಲವೇ ಅಲಭ್ಯವಾಗಿ ಹೋದರೆ, ನಡೆದಿರುವ ಸತ್ಯವು ನನ್ನೊಡನೆಯೇ ನಾಶವಾಗದಿರಲೆಂದು ಮುಂದುವರೆದ ದೂರನ್ನು ನನ್ನ ಸಹಿ ಹಾಕಿ, ಸುಪ್ರೀಂ ಕೋರ್ಟಿನ ವಕೀಲರಾದ ಕೆ.ವಿ. ಧನಂಜಯ್ ರವರಿಗೆ ನೀಡಿರುತ್ತೇನೆ” ಎಂದು ಎಸ್‌ಪಿಯವರಿಗೆ ಸಲ್ಲಿಸಿರುವ ಆರು ಪುಟಗಳ ದೂರಿನ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.

ಅನಾಮಧೇಯ ವ್ಯಕ್ತಿಯು ಎಸ್‌ಪಿಯವರಿಗೆ ಸಲ್ಲಿಸಿರುವ ಆರು ಪುಟಗಳ ದೂರು ಹೀಗಿದೆ:

ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ. ನಾನು ಕಂಡ ಕೊಲೆಗಳು, ಸ್ವೀಕರಿಸಿದ ಶವಗಳನ್ನು ಹೂತು ಹಾಕದಿದ್ದರೆ ಆ ಶವಗಳ ಜೊತೆಯಲ್ಲೇ ಮಣ್ಣು ಪಾಲಾಗಿಸುವ ನಿರಂತರ ಜೀವ ಬೆದರಿಕೆ ಮತ್ತು ಥಳಿತಗಳ ನೋವಿನ ನೆನಪಿನ ಹೊರೆಯನ್ನು ಇನ್ನೂ ಹೊರಲು ನನ್ನಿಂದ ಸಾಧ್ಯವಿಲ್ಲ. ಈ ಮೂಲಕ ನಾನು ಬಹಿರಂಗಪಡಿಸುತ್ತಿರುವ, ಕೊಲೆಯಾದ ಅನೇಕ ಪುರುಷರು ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಯುವತಿಯರು ಮತ್ತು ಮಹಿಳೆಯರ ಮಾಹಿತಿಯನ್ನು ತೀವ್ರಗತಿಯಲ್ಲಿ ತನಿಖೆಗೊಳಪಡಿಸಿ, ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುವಂತೆ ಕೋರುತ್ತಿದ್ದೇನೆ.

ನಾನು 11 ವರ್ಷಗಳ ಹಿಂದೆ ಧರ್ಮಸ್ಥಳವನ್ನು ರಾತ್ರೋರಾತ್ರಿ ತೊರೆದೆ; ನನ್ನ ಸಣ್ಣ ಕುಟುಂಬವನ್ನೂ ನನ್ನೊಡನೆ ಎಳೆದೊಯ್ದೆ. ನೆರೆ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಯಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ. ನಾನು ಹುಟ್ಟಿದ್ದು ಅತ್ಯಂತ ಕೆಳಗಿನದೆಂದು ಕರೆಯಲಾಗುವ ಜಾತಿಯಲ್ಲಿ. ನಾನು 1995 ರಿಂದ ಡಿಸೆಂಬರ್ 2014ರ ವರೆಗೆ ಧರ್ಮಸ್ಥಳ ದೇವಸ್ಥಾನದಡಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ, ನೇತ್ರಾವತಿ ನದಿಯ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೆಲಸವನ್ನು ನಿರ್ವಹಿಸುತ್ತಿದ್ದೆ. ನಿಯಮಿತ ಉದ್ಯೋಗವಾಗಿ ಪ್ರಾರಂಭವಾದದ್ದು ನಂತರದ ದಿನಗಳಲ್ಲಿ ಅತ್ಯಂತ ಭಯಾನಕ ಅಪರಾಧಗಳ ಸಾಕ್ಷ್ಯಗಳನ್ನು ಮರೆಮಾಚುವ ಕೆಲಸವಾಗಿ ಬದಲಾಯಿತು.

ನನ್ನ ಉದ್ಯೋಗದ ಆರಂಭದಲ್ಲಿ, ಮೃತದೇಹಗಳು ಕಾಣಿಸಿಕೊಳ್ಳುವುದನ್ನು ನಾನು ಗಮನಿಸಿದೆ. ಮೊದಲಿಗೆ ಇವು ಆತ್ಮಹತ್ಯೆ ಅಥವಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿದ ಮೃತ ದೇಹಗಳು ಎಂದು ನಾನು ಭಾವಿಸಿದ್ದೆ. ಅದರಲ್ಲಿ, ಮಹಿಳೆಯರ ಶವಗಳೇ ಹೆಚ್ಚಾಗಿದ್ದವು. ಅನೇಕ ಮಹಿಳಾ ಶವಗಳು ಬಟ್ಟೆ ಅಥವಾ ಒಳ ಉಡುಪುಗಳಿಲ್ಲದೆ ಕಂಡು ಬಂದವು. ಲೈಂಗಿಕ ಆಕ್ರಮಣ ಮತ್ತು ಹಿಂಸೆಯ ಸ್ಪಷ್ಟ ಲಕ್ಷಣಗಳನ್ನು ಕೆಲವು ಶವಗಳು ಹೊಂದಿದ್ದವು. ಆ ದೇಹಗಳ ಮೇಲೆ ಹಿಂಸೆಯನ್ನು ಸೂಚಿಸುವ ಗಾಯಗಳು ಅಥವಾ ಕತ್ತುಹಿಸುಕುವಿಕೆಯು ಕಂಡು ಬರುತ್ತಿದ್ದವು.

WhatsApp Image 2025 07 03 at 11.11.12 PM 1

1998ರ ಸುಮಾರಿಗೆ, ನನ್ನ ಮೇಲ್ವಿಚಾರಕರು ಈ ದೇಹಗಳನ್ನು ಪೊಲೀಸರಿಗೆ ವರದಿ ಮಾಡುವ ಬದಲು, ನಾನು ಈ ದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ನಾನು ತಕ್ಷಣವೇ ನಿರಾಕರಿಸಿ, ಆ ಸಾವುಗಳನ್ನು ಪೊಲೀಸರಿಗೆ ತಿಳಿಸಬೇಕು ಎಂದು ಪ್ರತಿಕ್ರಿಯಿಸಿದಾಗ, ತೀವ್ರವಾಗಿ ಥಳಿಸಲ್ಪಟ್ಟೆ. ನಾನೇನಾದರೂ ಅವರ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದರೆ ಅಥವಾ ಅದರ ಬಗ್ಗೆ ಯಾರಿಗಾದರೂ ತಿಳಿಸಿದರೆ, ‘ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ’, ‘ನಿನ್ನ ದೇಹವೂ ಉಳಿದ ಶವಗಳಂತೆ ಹೂತಲ್ಪಡುತ್ತದೆ’ ಮತ್ತು ‘ನಿನ್ನ ಕುಟುಂಬದವರೆಲ್ಲರನ್ನೂ ಬಲಿ ಮಾಡುತ್ತೇವೆ’ ಎಂದು ಬೆದರಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ, ಆ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು ಹಿಂಜರಿದೊಡನೆಯೇ ‘ಕಣ್ಮರೆಯಾದ’ ಎಂದು ಅವರು ಹೇಳುತ್ತಿದ್ದರು. ಅವರ ಬೆದರಿಕೆಯಲ್ಲಿ ಸಂಶಯವೇ ಇರಲಿಲ್ಲ- ‘ಪಾಲಿಸು ಇಲ್ಲವೇ ಕುಟುಂಬ ಸಮೇತವಾಗಿ ತುಂಡು ತುಂಡಾಗಿ ಕತ್ತರಿಸಲ್ಪಡು’ ಎಂದಾಗಿತ್ತು.

ಮೃತದೇಹಗಳಿರುವ ನಿರ್ದಿಷ್ಟ ಸ್ಥಳಗಳಿಗೆ ಮೇಲ್ವಿಚಾರಕರು ನನ್ನನ್ನು ಕರೆಯುತ್ತಿದ್ದರು. ಅನೇಕ ಬಾರಿ, ಈ ದೇಹಗಳು ಅಪ್ರಾಪ್ತ ಹೆಣ್ಣು ಮಕ್ಕಳು / ಮಹಿಳೆಯರದಾಗಿದ್ದವು. ಒಳ ಉಡುಪು ಇರದ, ಹರಿದ ಬಟ್ಟೆ ಮತ್ತು ಅವರ ಖಾಸಗಿ ಭಾಗಗಳಿಗೆ ಆಗಿದ್ದ ಗಾಯಗಳು ಅವರ ಮೇಲೆ ಕ್ರೂರ ಲೈಂಗಿಕ ಆಕ್ರಮಣವನ್ನು ಸೂಚಿಸುತ್ತಿದ್ದವು. ಕೆಲವು ದೇಹಗಳ ಮೇಲೆ ಆ್ಯಸಿಡ್‌ನಿಂದ ಸುಟ್ಟ ಗುರುತುಗಳೂ ಸಹ ಇರುತ್ತಿದ್ದವು.

ನನ್ನನ್ನು ಬಹಳವಾಗಿ ಕಾಡಿರುವ ಘಟನೆಯೊಂದಿದೆ; 2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ನನ್ನನ್ನು ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡೆನು. ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಆದರೆ, ಅವಳ ಲಂಗ ಮತ್ತು ಒಳ ಉಡುಪುಗಳು ಇರಲಿಲ್ಲ. ಅವಳ ದೇಹವು ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳನ್ನು ಹೊಂದಿತ್ತು. ಅವಳ ಕುತ್ತಿಗೆಯ ಮೇಲೆ ಕತ್ತು ಹಿಸುಕಿರುವ ಗುರುತುಗಳು ಇದ್ದವು. ನನಗೆ ಗುಂಡಿ ಅಗೆಯಲು ಮತ್ತು ಅವಳ ಶಾಲಾ ಬ್ಯಾಗ್‌ನೊಂದಿಗೆ ಅವಳನ್ನು ಹೂಳಲು ನಿರ್ದೇಶಿಸಿದರು. ಆ ಸನ್ನಿವೇಶವು ಇಂದಿಗೂ ಮಾಸಿಲ್ಲ.

WhatsApp Image 2025 07 03 at 11.11.12 PM

ಮತ್ತೊಂದು ಮರೆಯಲಾಗದ ಘಟನೆಯು 20ರ ಹರೆಯದ ಮಹಿಳೆಯ ಮೃತದೇಹದ್ದಾಗಿತ್ತು. ಆಕೆಯ ಮುಖ ಆ್ಯಸಿಡ್‌ನಿಂದ ಸುಡಲಾಗಿತ್ತು. ಆ ದೇಹವನ್ನು ದಿನಪತ್ರಿಕೆಯಿಂದ ಮುಚ್ಚಲಾಗಿತ್ತು. ಆಕೆಯ ದೇಹವನ್ನು ಹೂಳದೆ, ಆಕೆಯ ಪಾದರಕ್ಷೆ ಮತ್ತು ಅವಳ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಅವಳೊಂದಿಗೆ ಸುಡಲು ನನಗೆ ಮೇಲ್ವಿಚಾರಕರು ಸೂಚಿಸಿದರು.

ಧರ್ಮಸ್ಥಳ ಪ್ರದೇಶದಲ್ಲಿ ಭಿಕ್ಷಾಟನೆಗೆ ಬಂದ ಬಡ ಮತ್ತು ನಿರ್ಗತಿಕ ಪುರುಷರು ವ್ಯವಸ್ಥಿತವಾಗಿ ಕೊಲೆಯಾದ ಅನೇಕ ಘಟನೆಗಳಿಗೆ ನಾನು ಸಾಕ್ಷಿಯಾದೆ. ಅವರನ್ನು ಕೊಲ್ಲುವ ವಿಧಾನವು ಅತ್ಯಂತ ಕ್ರೂರವಾಗಿತ್ತು. ಅವರನ್ನು ಕೊಠಡಿಯ ಕುರ್ಚಿಗಳಿಗೆ ಕಟ್ಟಲಾಗುತ್ತಿತ್ತು ಮತ್ತು ಟವಲ್‌ಗಳನ್ನು ಬಳಸಿ ಹಿಂದಿನಿಂದ ಹಿಡಿದು ಉಸಿರುಗಟ್ಟಿಸಲಾಗುತ್ತಿತ್ತು. ಈ ಕೊಲೆಗಳು ನನ್ನ ಸಮ್ಮುಖದಲ್ಲೇ ನಡೆದವು. ದೂರದ ಅರಣ್ಯ ಪ್ರದೇಶಗಳಲ್ಲಿ ಈ ದೇಹಗಳನ್ನು ಹೂತು ಹಾಕಲು ನನಗೆ ನಿರ್ದೇಶನ ನೀಡುತ್ತಿದ್ದರು.

ನನ್ನ ಉದ್ಯೋಗಾವಧಿಯಲ್ಲಿ, ಧರ್ಮಸ್ಥಳ ಪ್ರದೇಶದಾದ್ಯಂತ ಹಲವಾರು ಸ್ಥಳಗಳಲ್ಲಿ ಮೃತದೇಹಗಳನ್ನು ಹೂತು ಹಾಕಿರುತ್ತೇನೆ. ಕೆಲವೊಮ್ಮೆ, ನಿರ್ದೇಶಿಸಿದಂತೆ ಮೃತದೇಹಗಳನ್ನು ಡೀಸೆಲ್ ಬಳಸಿ ಸುಟ್ಟು ಹಾಕಿರುತ್ತೇನೆ. ಯಾವುದೇ ಕುರುಹು ಸಿಗದಂತೆ ಸುಟ್ಟು ಹಾಕಬೇಕೆಂದು ನಿರ್ದೇಶಿಸುತ್ತಿದ್ದರು. ಈ ರೀತಿ ವಿಲೇವಾರಿಯಾದ ಮೃತ ದೇಹಗಳು ನೂರಾರು.

2014ರ ಹೊತ್ತಿಗೆ, ನಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆಯು ಅಸಹನೀಯವಾಗಿತ್ತು. ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಯೂ ಲೈಂಗಿಕ ಕಿರುಕುಳಕ್ಕೊಳಗಾದಾಗ ನಾವೆಲ್ಲರೂ ಅಲ್ಲಿಂದ ಕೂಡಲೇ ತಪ್ಪಿಸಿಕೊಳ್ಳಬೇಕೆಂದು ಅರಿತೆವು. ಇಲ್ಲವಾದಲ್ಲಿ, ಅಲ್ಲೇ ಅಂತ್ಯ ಕಾಣುವ ಭಯ ಜೋರಾಯಿತು.

WhatsApp Image 2025 07 03 at 11.11.11 PM 2

ಡಿಸೆಂಬರ್ 2014ರಲ್ಲಿ, ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಸುಳಿವು ಯಾರಿಗೂ ಸಿಗದಂತೆ ಖಚಿತಪಡಿಸಿಕೊಂಡೆ. ಅಂದಿನಿಂದ ಈವರೆಗೆ, ನೆರೆ ರಾಜ್ಯವೊಂದರಲ್ಲಿ ಜೀವ ಭಯದಿಂದ ತಲೆಮರೆಸಿಕೊಂಡು ವಾಸಿಸುತ್ತಿದ್ದೇವೆ. ನಿವಾಸಗಳನ್ನೂ ಬದಲಾಯಿಸುತ್ತಿದ್ದೇವೆ. ಆದರೆ, ಮಾನಸಿಕ ಪಾಪ ಪ್ರಜ್ಞೆಯ ಹೊರೆಯಲ್ಲಿಯೇ ಇನ್ನೂ ಬದುಕುತ್ತಿದ್ದೇನೆ.

ಆದರೆ, ನನ್ನ ಆತ್ಮಸಾಕ್ಷಿಯು ಇನ್ನೂ ಮೌನ ಮುಂದುವರೆಸಲು ಅನುಮತಿಸುತ್ತಿಲ್ಲ. ಮಣ್ಣಾಗಿ ಹೋದ ಅವರೆಲ್ಲರೂ ಯಾರೆಂದು ಮತ್ತು ಅವರ ಅತ್ಯಾಚಾರ ಹಾಗೂ ಕೊಲೆಗೆ ಕಾರಣಕರ್ತರು ಯಾರೆಂದು ಇನ್ನಾದರೂ ಎಲ್ಲರಿಗೂ ಗೊತ್ತಾಗಬೇಕೆಂದು ನಿರ್ಧರಿಸಿರುವೆ. ನನ್ನ ಬದುಕಿಗೆ ಅಂಟಿರುವ ಅಪಾಯದ ಹೊರತಾಗಿಯೂ ನಾನು ಮಾತನಾಡಲೇಬೇಕೆಂದು ತೀರ್ಮಾನಿಸಿರುವೆ.

ನಾನು ಹೇಳುತ್ತಿರುವುದರ ಪುರಾವೆಯಾಗಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೃತ ದೇಹ ಹೂಳಿದ್ದ ಸ್ಥಳವೊಂದಕ್ಕೆ ರಹಸ್ಯವಾಗಿ ಹೋಗಿ ಕಳೇಬರವನ್ನು ಹೊರತೆಗೆದಿದ್ದೇನೆ. ಈ ಸ್ಥಳದ ವಿವರವನ್ನು ತನಿಖಾಧಿಕಾರಿಗೆ ನೀಡಲು ಸಿದ್ಧನಿರುವೆ. ಈ ಕಳೇಬರದ ಛಾಯಾಚಿತ್ರ ಮತ್ತು ಕಳೇಬರವನ್ನೇ ಈ ದೂರಿನೊಂದಿಗೆ ಸಲ್ಲಿಸುತ್ತಿದ್ದೇನೆ.

ಧರ್ಮಸ್ಥಳ ಪ್ರದೇಶದಾದ್ಯಂತ ನನ್ನ ಜೀವ ಉಳಿಸಿಕೊಳ್ಳಲು, ಅನಿವಾರ್ಯವಾಗಿ ಮತ್ತು ರಹಸ್ಯವಾಗಿ ಮೃತದೇಹಗಳನ್ನು ಹೂತು ಹಾಕಿರುವ ಸ್ಥಳಗಳನ್ನು ತನಿಖಾಧಿಕಾರಿಗೆ ತೋರಿಸಲು ನಾನು ಸಿದ್ಧನಿರುವೆ. ನಾನು ಹೂತಿಟ್ಟ ಶವಗಳ ಅವಶೇಷಗಳನ್ನು ಪೊಲೀಸ್ ಸಮ್ಮುಖದಲ್ಲಿ ಹೊರತೆಗೆಯಲು ಸಿದ್ಧನಿರುವೆ.

ಈ ದೂರಿನಲ್ಲಿ ಹೇಳಿರುವ ಆರೋಪಿತರು ಧರ್ಮಸ್ಥಳ ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟವರು ಮತ್ತು ಇತರೆ ಸಿಬ್ಬಂದಿಗಳು. ಮೃತದೇಹಗಳನ್ನು ಹೂತು ಹಾಕುವಂತೆ ನಿರ್ದೇಶನ ನೀಡಿ ನನಗೆ ನಿರಂತರ ಜೀವ ಬೆದರಿಕೆ ಮತ್ತು ಹಿಂಸೆಯನ್ನು ನೀಡುತ್ತಿದ್ದವರು ಇವರೇ. ಆದರೆ, ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಈ ದೂರಿನಲ್ಲಿಯೇ ಬಹಿರಂಗಪಡಿಸಲು ನನಗೆ ಸಾಧ್ಯವಿರುವುದಿಲ್ಲ. ನಾನು ಹೆಸರಿಸುವ ಕೆಲವು ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಗಳಾಗಿದ್ದು, ಅವರನ್ನು ವಿರೋಧಿಸುವವರನ್ನು ತೊಡೆದುಹಾಕುವ ಪ್ರವೃತ್ತಿ ಹೊಂದಿರುವವರಾಗಿದ್ದಾರೆ. 2018ರ ಸಾಕ್ಷಿ ರಕ್ಷಣೆಯಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ದೊರೆತ ಕೂಡಲೇ, ಎಲ್ಲಾ ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಮತ್ತು ಅವರ ನಿರ್ದಿಷ್ಟ ಪಾತ್ರಗಳನ್ನು ಒಳಗೊಂಡಂತೆ ಸಂಪೂರ್ಣ ವಿವರವನ್ನು ಬಹಿರಂಗಗೊಳಿಸಲು ಸಿದ್ಧನಿರುವೆ.

WhatsApp Image 2025 07 03 at 11.11.11 PM 1

ಸುಳ್ಳು ಮಾಹಿತಿಯನ್ನು ಸಲ್ಲಿಸುವ ಪರಿಣಾಮಗಳ ಸಂಪೂರ್ಣ ಜ್ಞಾನದೊಂದಿಗೆ ನಾನು ಈ ದೂರನ್ನು ನೀಡುತ್ತಿದ್ದೇನೆ. ಮೇಲೆ ಹೇಳಿದ ವಿಚಾರವು ನನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿಯೇ ಹೇಳಿರುತ್ತೇನೆಂದು ದೃಢೀಕರಿಸುತ್ತೇನೆ. ನಾನು ಹೇಳಿರುವುದರ ಸತ್ಯಾಸತ್ಯತೆಯನ್ನು ಸ್ಥಾಪಿಸಲು ಪಾಲಿಗ್ರಾಫ್ ಅಥವಾ ಇನ್ಯಾವುದೇ ಪರೀಕ್ಷೆಗೆ ಒಳಪಡಲು ಸಿದ್ಧನಿದ್ದೇನೆ.

ಮುಂದುವರೆದು, ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಹೂತು ಹಾಕಿರುವ ನೂರಾರು ಮೃತದೇಹಗಳು ವಿಧಿವತ್ತಾದ ಗೌರವ ಮತ್ತು ಅಂತ್ಯ ಸಂಸ್ಕಾರಗಳಿಂದ ವಂಚಿತವಾಗಿರುತ್ತವೆ. ಈಗ ಹೊರತೆಗೆಯುವ ಕಳೇಬರಗಳಿಗೆ ಗೌರವ ಪೂರಕ ಅಂತ್ಯ ಸಂಸ್ಕಾರವಾದಲ್ಲಿ ಆ ನೊಂದ ಆತ್ಮಗಳಿಗೆ ಶಾಂತಿ ಸಿಕ್ಕಿ ನನ್ನ ಪಾಪ ಪ್ರಜ್ಞೆಯೂ ಕಡಿಮೆ ಆಗುತ್ತದೆ ಎಂಬ ನಂಬಿಕೆ ನನ್ನದು. ಈ ಕಾರಣದಿಂದಾಗಿ, ನಾನು ಹೂತಿಟ್ಟ ನೂರಾರು ಶವಗಳನ್ನು ಹೊರ ತೆಗೆಯಲು ಕಾನೂನಿನ ಅನ್ವಯ ಅವಕಾಶ ಮಾಡಿಕೊಡಬೇಕಾಗಿ ವಿನಂತಿ.

ಈ ದೂರನ್ನು ಅತ್ಯಂತ ಗಂಭೀರತೆಯಿಂದ ಪರಿಗಣಿಸಲು ಮತ್ತು ಈ ಘೋರ ಅಪರಾಧಗಳನ್ನು ತನಿಖೆಗೊಳಪಡಿಸಿ, ಸಾವಿನಲ್ಲಿಯೂ ಘನತೆಯನ್ನು ನಿರಾಕರಿಸಲ್ಪಟ್ಟ ಲೆಕ್ಕವಿಲ್ಲದಷ್ಟು ಬಲಿಪಶುಗಳಿಗೆ ನ್ಯಾಯವನ್ನು ಒದಗಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ನಾನು ಪ್ರಾರ್ಥಿಸುತ್ತೇನೆ. ನನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ತಮ್ಮಲ್ಲಿ ನನ್ನ ಕಳಕಳಿಯ ಮನವಿ.

WhatsApp Image 2025 07 03 at 11.11.11 PM

ಈ ದೂರಿನ ಮುಂದುವರಿದ ಭಾಗವಾದ, ಆರೋಪಿತರ ಹೆಸರುಗಳು ಮತ್ತು ಅಪರಾಧಗಳಲ್ಲಿ ಅವರ ನಿಖರ ಪಾತ್ರವನ್ನು ಪೊಲೀಸರಿಗೆ ತಿಳಿಸುವ ಮುನ್ನವೇ ನಾನು ಕೊಲೆಯಾದರೆ ಇಲ್ಲವೇ ಅಲಭ್ಯವಾಗಿ ಹೋದರೆ, ನಡೆದಿರುವ ಸತ್ಯವು ನನ್ನೊಡನೆಯೇ ನಾಶವಾಗದಿರಲೆಂದು ಮುಂದುವರೆದ ದೂರನ್ನು ನನ್ನ ಸಹಿ ಹಾಕಿ, ಸುಪ್ರೀಂ ಕೋರ್ಟ್ ನ ವಕೀಲರಾದ ಕೆ.ವಿ. ಧನಂಜಯ್ ರವರಿಗೆ ನೀಡಿರುತ್ತೇನೆ ಎಂದು ವಿವರವಾಗಿ ಉಲ್ಲೇಖಿಸಿ ಆ ಅನಾಮಧೇಯ ವ್ಯಕ್ತಿಯು ತನ್ನ ಆಧಾರ್ ಕಾರ್ಡ್, ಧರ್ಮಸ್ಥಳ ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿ, ಧರ್ಮಸ್ಥಳದಲ್ಲಿ ನೋಂದಾಯಿಸಿದ ಮತದಾನದ ಗುರುತಿನ ಚೀಟಿ ಹಾಗೂ ಕಳೇಬರದ ಅವಶೇಷಗಳ ಫೋಟೋಗಳನ್ನು ನೀಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ವಕೀಲರು 3
ದೂರು ಸಲ್ಲಿಸಿರುವುದನ್ನು ದೃಢೀಕರಿಸಿರುವ ವಕೀಲರು
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...