ಬೆಂಗಳೂರು ವಿಶ್ವವಿದ್ಯಾಲಯದ ಶಾಸನಬದ್ಧ ಹುದ್ದೆಗಳ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯದ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ಷೇಪಿಸಿರುವ ಹತ್ತು ಮಂದಿ ದಲಿತ ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.
ಈ ಕುರಿತು ಕುಲಪತಿಯವರಿಗೆ ಪತ್ರ ಬರೆದಿರುವ ಪ್ರಾಧ್ಯಾಪಕರು ತಮಗಾಗಿರುವ ಅನ್ಯಾಯವನ್ನು ಪ್ರಾಸ್ತಾಪಿಸಿದ್ದಾರೆ. “ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಸುಮಾರು ವರ್ಷಗಳಿಂದ ದಲಿತ ಶಿಕ್ಷಕರು ತಮ್ಮ ಶೈಕ್ಷಣಿಕ ಜವಾಬ್ದಾರಿ ಹೊರತುಪಡಿಸಿ, ಹಲವಾರು ಆಡಳಿತ ಹುದ್ದೆಗಳ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಾ, ಆಡಳಿತ ವರ್ಗಕ್ಕೆ ಹೊರೆಯನ್ನು ಕಡಿಮೆಗೊಳಿಸಿ, ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಶಾಸನಬದ್ಧ ಹುದ್ದೆಗಳ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯದ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ನಾವು ಆಕ್ಷೇಪಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಿಎಸ್ ವಿರುದ್ಧ ಮಾನಹಾನಿ ಹೇಳಿಕೆ: ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಡಿಜಿಪಿಗೆ ‘ಒಡನಾಡಿ’ ಪತ್ರ
“ನಮಗೆ ನೀಡಿದ ಎಲ್ಲಾ ಹಚ್ಚುವರಿ ಜವಾಬ್ದಾರಿಯನ್ನು ಕೇವಲ ಉಸ್ತುವಾರಿ ಎಂದು ಆದೇಶ ನೀಡಿ, ಈ ಜವಾಬ್ದಾರಿಗಳಿಗೆ ಈ ಹಿಂದೆ ಅನುಸರಿಸಿದಂತೆ ಸಹಜವಾಗಿ ನಮ್ಮ ನಮ್ಮ ಖಾತೆಗಳಿಗೆ ಸಂದಾಯವಾಗಬೇಕಿದ್ದ EL ಅನ್ನು ತಪ್ಪಿಸುವ ವ್ಯವಸ್ಥೆ ನಡೆದಿದೆ. ಈ ಬಗ್ಗೆ ನಮ್ಮ ಹಿಂದಿನ ಮನವಿಗಳಿಗೆ ಆಡಳಿತ ವರ್ಗದಿಂದ ಯಾವುದೇ ರೀತಿಯ ಮನ್ನಣೆ ದೊರೆಯುತ್ತಿರುವುದಿಲ್ಲ. ಆದುದರಿಂದ ನಮ್ಮ ಬೇಡಿಕೆಗೆ ಕೂಡಲೇ ಪುರಸ್ಕಾರ ನೀಡದಿದ್ದಲ್ಲಿ ನಮ್ಮ ಜವಾಬ್ದಾರಿಗಳಿಗೆ ನಾವು ರಾಜೀನಾಮೆ ಸಲ್ಲಿಸಿದ್ದೇವೆಂದು ಭಾವಿಸಬಹುದಾಗಿದೆ” ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಿ.ಸೋಮಶೇಖರ್, ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರದ ಪ್ರೊ. ವಿಜಯಕುಮಾರ್ ಎಚ್ ದೊಡ್ಡಮನಿ, ವಿದ್ಯಾರ್ಥಿಗಳ ಕಲ್ಯಾಣ ನಿರ್ದೇಶಕ ಪ್ರೊ. ನಾಗೇಶ್ ಪಿ.ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಶದ ವಿಶೇಷಾಧಿಕಾರಿ ಪ್ರೊ. ಕೃಷ್ಣಮೂರ್ತಿ ಜಿ, PM-USHA ಸಂಯೋಜನಕರಾದ ಪ್ರೊ. ಸುದೇಶ್ ವಿ, ದೂರ ಮತ್ತು ಆನ್‌ಲೈನ್ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ. ಮುರಳೀಧರ ಬಿ.ಎಲ್, ಮಾಳವೀಯ ಶಿಕ್ಷಕರ ತರಬೇತಿ ಸಂಸ್ಥೆ ನಿರ್ದೇಶಕ ಪ್ರೊ. ಶಶಿಧರ್ ಎಂ., ಪ್ರಸಾರಾಂಗ ನಿರ್ದೇಶಕ ಪ್ರೊ. ರಮೇಶ, ಸಮಾನ ಅವಕಾಶ ಕೋಶದ ನಿರ್ದೇಶಕ ಡಾ. ಸುರೇಶ್ ಆರ್, ಬ್ರೈಲ್ ಸೆಂಟರ್ ನಿರ್ದೇಶಕ ಡಾ. ಕುಂಬಿನರಸಯ್ಯ ಎಸ್ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.





