ವಿಧಾನಸಭೆ ಸಚಿವಾಲಯದಲ್ಲಿ ಆಡಳಿತ ಸುಧಾರಣೆ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದ ಸಭಾಧ್ಯಕ್ಷ ಯು ಟಿ ಖಾದರ್ ಈಗ ತಮ್ಮ ಪೀಠದ (ಕುರ್ಚಿ) ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ಬೆಂಗಳೂರಿನ ವಿಧಾನಸೌಧದ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೂ ಪೀಠ ಸಿದ್ಧಪಡಿಸುವಂತೆ ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ ಮೇರೆಗೆ ಸಭಾಧ್ಯಕ್ಷರ ಪೀಠ(ಕುರ್ಚಿ) ಮತ್ತು ಅದರ ಮುಂದಿರುವ ಟೇಬಲ್ ಸಿದ್ಧವಾಗಿದೆ. ಇದನ್ನು ಸಿದ್ಧಪಡಿಸಲು ಬರೋಬ್ಬರಿ ₹42.93 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ಹಾಗೆಯೇ ವಿಧಾನ ಪರಿಷತ್ ಸಭಾಪತಿ ಪೀಠದ ಹಳೇ ಪ್ರೈವುಡ್, ಪ್ರೇಮ್, ಕೂಷನ್ ಬದಲಾಯಿಸಲು ₹1.98 ಲಕ್ಷ ವ್ಯಯಿಸಲಾಗಿದೆ. ಇದೆಲ್ಲ ಮಾಹಿತಿ ಭೀಮಪ್ಪ ಗಡಾದ ಅವರು ಆರ್‌ಟಿಐ ಅಡಿ ಸಂಗ್ರಹಿಸಿ ಬಹಿರಂಗ ಪಡಿಸಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಭೀಮಪ್ಪ ಗಡಾದ, “ರಾಜ್ಯ ಸರ್ಕಾರ ಜನರ ತೆರಿಗೆ ಹಣ ಪೋಲು ಮಾಡಿದೆ. 2012ರಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರಪತಿಗಳ ವಿಶ್ರಾಂತಿಗಾಗಿ ₹36.60 ಲಕ್ಷ ವೆಚ್ಚದಲ್ಲಿ ತಯಾರಿಸಿದ್ದ ಪೀಠೋಪಕರಣಗಳ ದಾಖಲೆ ಮುರಿದಿದೆ” ಎಂದು ಆರೋಪಿಸಿದ್ದಾರೆ.
“ರಾಜ್ಯದ ಹೆಸರಾಂತ ಚಿತ್ರ ಕಲಾವಿದರಿಂದ 8×5 ಉದ್ದಗಲದ ಅಳತೆಯಲ್ಲಿ ಏಳು ಮಹಾನ್ ನಾಯಕರ ಭಾವಚಿತ್ರಗಳನ್ನು ಸಿದ್ಧಪಡಿಸಲು ಸರ್ಕಾರವು 2023ರ ಫೆ.22ರಂದು ₹13.34 ಲಕ್ಷ ನೀಡಿತ್ತು. ಸುವರ್ಣ ವಿಧಾನಸೌಧದಲ್ಲಿ ಮಹಾನ್ ನಾಯಕರು, ಗಣ್ಯರ 11 ಚಿತ್ರಗಳನ್ನು ಅಳವಡಿಸಲು ಮತ್ತು ಅನುಭವ ಮಂಟಪದ ತೈಲವರ್ಣದ ಚಿತ್ರ ಸಿದ್ಧಪಡಿಸಲು ₹67.67 ಲಕ್ಷ ವ್ಯಯಿಸಿ, ತೆರಿಗೆ ಹಣ ವ್ಯರ್ಥ ಮಾಡಲಾಗಿದೆ” ಎಂದು ದೂರಿದ್ದಾರೆ.
“ಸಿದ್ಧವಾದ ಚಿತ್ರಗಳ ಪರಿಶೀಲನೆಗೆ ಬಂದಿದ್ದ ಚಿತ್ರ ಕಲಾ ಪರಿಷತ್ತಿನ ನುರಿತ ತಜ್ಞರ ತಂಡ, ಇಲ್ಲಿ ಅಳವಡಿಸಿದ ಭಾವಚಿತ್ರಗಳ ಚಹರೆಗಳಲ್ಲಿ ಹೋಲಿಕೆ ಇಲ್ಲ ಎಂದಿತ್ತು. ಇವುಗಳ ಬದಲಿಗೆ ತೈಲವರ್ಣದ ಚಿತ್ರ ತಯಾರಿಸುವಂತೆ ವರದಿ ನೀಡಿದ ಹಿನ್ನೆಲೆಯಲ್ಲಿ 2024ರ ಅ.25ರಂದು ಸರ್ಕಾರ ಮತ್ತೆ ₹28.49 ಲಕ್ಷ ನೀಡಿದೆ. ಇಷ್ಟಕ್ಕೆ ಸುಮ್ಮನಾಗದೆ ಸೌಧದಲ್ಲಿ ಅನುಭವ ಮಂಟಪದ ಚಿತ್ರಪಟ ಅಳವಡಿಸಿ, ಗಾಂಧೀಜಿ ಕಲಾಕೃತಿ ಹಸ್ತಾಂತರಿಸಲು 2025ರ ಫೆ.4ರಂದು ₹25.84 ಲಕ್ಷ ಬಿಡುಗಡೆ ಮಾಡಿದೆ” ಎಂದು ಆರೋಪಿಸಿದ್ದಾರೆ.





