ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವ ಆರಂಭಗೊಂಡಿದೆ. ಸಿಡಿಮದ್ದು ಪ್ರದರ್ಶನ ಮೂಲಕ ಕನ್ನಡ ಅಭಿಮಾನಿಗಳು ರಾತ್ರಿವಿಡಿ ಕುಣಿದು ಕುಪ್ಪಳಿಸಿದ್ದಾರೆ.
ಇದೇ ಮೊದಲ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸಿಡಿ ಮದ್ದಿನ ಪ್ರದರ್ಶನ ಹಮ್ಮಿಕೊಂಡಿದ್ದರು. ಸರಿಯಾಗಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಸಿಡಿದ ಸಿಡಿ ಮದ್ದುಗಳು ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು.
“ಕರ್ನಾಟಕ ರಾಜ್ಯೋತ್ಸವಕ್ಕೆ ಜಯವಾಗಲಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಜಯವಾಗಲಿ, ಯಾರಪ್ಪಂದ ಏನೈತಿ – ಬೆಳಗಾವಿ ನಮ್ಮದೈತಿ, ಪ್ರಾಣ ಕೊಟ್ಟೇವು – ಬೆಳಗಾವಿ ಬಿಡೆವು..” ಸೇರಿ ಮುಂತಾದ ಘೋಷಣೆಗಳನ್ನು ಮೊಳಗಿಸಿ ನೆರೆದಿದ್ದ ಜನರು ಸಂಭ್ರಮಿಸಿದರು.
ಕೈಯಲ್ಲಿ ಕೆಂಪು – ಹಳದಿ ಬಾವುಟಗಳನ್ನು ಹಿಡಿದು ಬೆಳಗಾವಿ ಎಂದೆಂದಿಗೂ ಕನ್ನಡಿಗರ ಸಾಮ್ರಾಜ್ಯ ಎಂದು ಕೂಗಿ ಕೂಗಿ ಹೇಳಿದರು. ರಾತ್ರಿ 1 ಗಂಟೆವರೆಗೂ ಜನರು ಚೆನ್ನಮ್ಮ ವೃತ್ತದಿಂದ ಕದಲಲಿಲ್ಲ. ಕನ್ನಡ ಡಿಜೆ ಹಾಡುಗಳಿಗೆ ಹುಚ್ಚೆದ್ದು ಕುಣಿದರು. ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
”ಶನಿವಾರದ ಮೆರವಣಿಗೆ ಎಷ್ಟೊಂದು ಅದ್ಧೂರಿ ಆಗಿರಲಿದೆ ಎನ್ನುವುದಕ್ಕೆ ಮಧ್ಯರಾತ್ರಿಯ ಸಂಭ್ರಮವೇ ಸಾಕ್ಷಿ. ಸುಮಾರು 8 ಲಕ್ಷ ಜನರು ಸೇರಲಿದ್ದಾರೆ. ಇದು ಒಂದು ಎಚ್ಚರಿಕೆಯ ಸಂದೇಶ ಕೂಡ ಆಗಲಿದೆ. ಇನ್ಮುಂದೆ ಗುಂಡಾಗಿರಿಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ನಾಳೆ ಕರಾಳ ದಿನಕ್ಕೆ ಅವಕಾಶ ಕೊಟ್ಟರೆ ದೊಡ್ಡ ಕ್ರಾಂತಿ ಆಗುವುದು ನಿಶ್ಚಿತ. ಏನಾದರೂ ಅನಾಹುತ ಉಂಟಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಆಗುತ್ತದೆ” ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಂದು ಎಚ್ಚರಿಸಿದ್ದಾರೆ.





