ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಅಂಟಿಸಲಾಗಿರುವ ಗುಟ್ಕಾ ಮತ್ತು ತಂಬಾಕು ಜಾಹೀರಾತುಗಳನ್ನು ಯುವಜನರು ಕಿತ್ತುಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಳ್ಳಾರಿ ಜಿಲ್ಲೆಯ ವಿದ್ಯಾನಗರದಲ್ಲಿ ಯುವಕನೊಬ್ಬ ಜಾಹೀರಾತುಗಳನ್ನು ಹರಿದುಹಾಕುತ್ತಿರುವ ವಿಡಿಯೋ ಮೊದಲಿಗೆ ವೈರಲ್ ಆಯಿತು. ಆ ವಿಡಿಯೋ ಜೊತೆಗೆ, ಗುಟ್ಕಾ, ತಂಬಾಕು ಜಾಹೀರಾತುಗಳನ್ನು ಹರಿದೆಸೆಯುವ ಅಭಿಯಾನಕ್ಕೆ ಕರೆಕೊಡಲಾಯಿತು. ಇದೀಗ, ಅಭಿಯಾನವು ಉತ್ತರ ಕರ್ನಾಟಕದ ನಾನಾ ಭಾಗಗಳಿಗೆ ವಿಸ್ತರಿಸಿದೆ.
ಗುಟ್ಕಾ, ತಂಬಾಕುಗಳು ಜಾಹೀರಾತುಗಳನ್ನು ಸಾರಿಗೆ ಬಸ್‌ಗಳ ಮೇಲೆ ಅಂಟಿಸುವುದು ತಪ್ಪು. ಬಸ್‌ಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ಜಾಹೀರಾತುಗಳು ಅವರನ್ನು ಅನಾರೋಗ್ಯಕರ ಅಭ್ಯಾಸಗಳಿಗೆ ಉತ್ತೇಜಿಸುತ್ತವೆ ಎಂದು ಯುವಜನರು ಹೇಳಿದ್ದಾರೆ. ಈಗ, ಮುಧೋಳ, ಹುಬ್ಬಳ್ಳಿ ಸೇರಿದಂತೆ ನಾನಾ ಭಾಗಗಳಲ್ಲಿಯೂ ಯುವಜನರು ಬಸ್‌ಗಳ ಮೇಲಿನ ಗುಟ್ಕಾ, ತಂಬಾಕು ಜಾಹೀರಾತುಗಳನ್ನು ಕಿತ್ತುಹಾಕುತ್ತಿದ್ದು, ಅವುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Karnataka Youth is on 🔥
— Tathvam-asi (@tathvamasi6) January 24, 2026
Tearing all Gutka ads from KSRTC Public busses. https://t.co/o7DOJlAAWH pic.twitter.com/gnrLD0cqAh
“ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ‘ಬಾಡಿಗೆ ಜಾಹೀರಾತು’ ಪ್ರಕಟಿಸಿ, ಯುವಕರನ್ನು ದಾರಿ ತಪ್ಪಿಸುವ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ” ಎಂದು ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
Here’s another bus. Ghutka Advert covering entire Bus is removed. https://t.co/pljwW362k5 pic.twitter.com/unZouRubsY
— Tathvam-asi (@tathvamasi6) January 17, 2026
ಆರೋಗ್ಯಕ್ಕೆ ಹಾನಿಯಾಗುವ ಉತ್ಪನ್ನಗಳ ಜಾಹೀರಾತುಗಳನ್ನು ಕಿತ್ತುಹಾಕುವ ಯುವಜನರ ಅಭಿಯಾನವನ್ನು ಹಲವರು ಬೆಂಬಲಿಸಿದ್ದಾರೆ. ಈ ಅಭಿಯಾನವನ್ನು ಭಾರತದಾದ್ಯಂತ ಮಾಡಬೇಕು, ಉತ್ತಮ ಚಳುವಳಿ ಎಂದು ನೆಟ್ಟಿಗರು ಹೇಳಿದ್ದಾರೆ.
ಆದರೂ, ಕೆಲವರು, ‘ಉದ್ದೇಶ ಸರಿ ಇದೆ. ಆದರೆ, ವಿಧಾನ ತಪ್ಪು ಎಂದಿದ್ದಾರೆ. ಇನ್ನೂ ಕೆಲವರು ‘ಒಳ್ಳೆಯ ಕಾರಣಕ್ಕಾಗಿಯೂ ಸಹ ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸುವುದು ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು’ ಎಂದು ಎಚ್ಚರಿಸಿದ್ದಾರೆ.




