ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರು ಹುಟ್ಟಿದ ದಿನದ ಅಂಗವಾಗಿ ಜನವರಿ 29ರಂದು ಬೆಂಗಳೂರಿನಲ್ಲಿ ‘ಗೌರಿ ದಿನ’ ಕಾರ್ಯಕ್ರಮವನ್ನು ‘ಗೌರಿ ಮೀಡಿಯಾ ಟ್ರಸ್ಟ್’ ಅಯೋಜಿಸಿದೆ. ಕಾರ್ಯಕ್ರಮದಲ್ಲಿ ಲ್ಯಾಂಡ್‌ಲಾರ್ಡ್ ಸಿನಿಮಾ ಮೂಲಕ ರಾಜ್ಯದ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ ನಟ ದುನಿಯಾ ವಿಜಯ್ ಭಾಗಿಯಾಗಲಿದ್ದಾರೆ.
‘ನಾವೆಲ್ಲರೂ ಗೌರಿ’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ‘ಎಚ್.ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಜ.29ರ ಗುರುವಾರ ಸಂಜೆ 5ಯಿಂದ ಕಾರ್ಯಕ್ರಮ ನಡೆಯಲಿದೆ. ದುನಿಯಾ ವಿಜಯ್ ಜೊತೆಗೆ, ಗೌರಿ ಅವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್, ಹೋರಾಟಗಾರ ನೂರ್ ಶೀಧರ್, ಗೌರಿ ಮೀಡಿಯಾ ಟ್ರಸ್ಟ್‌ನ ನಗರಕೆರೆ ರಮೇಶ್, ರಾಜಲಕ್ಷ್ಮಿ ಅಂಕಲಗಿ, ಎ.ಎಸ್ ಪ್ರಭಾಕರ್ ಹಾಗೂ ಗುರು ಆಕೃತಿ ಅವರು ಭಾಗವಹಿಸಲಿದ್ದಾರೆ.
“ಗೌರಿ ಲಂಕೇಶ್ ಅವರು ಸಮಾಜದ ಶೋಷಿತರ ಪರವಾಗಿ ಸದಾ ಗಟ್ಟಿ ನಿಲುವು ತಳೆದು, ಆಳುವ ವರ್ಗಗಳ ಮತ್ತು ಮಾನವವಿರೋಧಿ ಸಿದ್ಧಾಂತಗಳ ವಿರುದ್ಧ ನೇರವಾಗಿ ಹೋರಾಡಿದ್ದರು. ಅಂತಹ ಧೈರ್ಯದ ಕಾರಣಕ್ಕಾಗಿಯೇ ಅವರನ್ನು ಮನುಷ್ಯ ವಿರೋಧಿ ಸಿದ್ಧಾಂತಿಗಳು ಹತ್ಯೆಗೈದರು. ಆದರೆ, ಅವರ ಆಶಯಗಳನ್ನು ಪತ್ರಕರ್ತರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ತಮ್ಮದೇ ರೀತಿಯಲ್ಲಿ ಮುಂದುವರೆಸುತ್ತಿದ್ದಾರೆ” ಎಂದು ಗೌರಿ ಮೀಡಿಯಾ ಟ್ರಸ್ಟ್ ಹೇಳಿದೆ.
“ಮಾನವವಿರೋಧಿ ಭಾವನೆಗಳ ವಿರುದ್ಧ ಸದಾ ಎಚ್ಚರಿಕೆಯಿಂದ ನಿಲ್ಲುತ್ತಿದ್ದ ಗೌರಿ ಲಂಕೇಶ್ ಆಶಯಗಳನ್ನು ಮುಂದುವರೆಸಲು ‘ನ್ಯಾಯಪಥ’ ಪತ್ರಿಕೆ ಮುಂದುವರೆದಿದೆ. ಗೌರಿ ಆಶಯಗಳನ್ನು ವಿವಿಧ ರೂಪಗಳಲ್ಲಿ ಮುಂದುವರೆಸುತ್ತಿರುವ ಎಲ್ಲರೂ ಜೊತೆಗೂಡಿ ಗೌರಿ ದಿನವನ್ನು ಆಚರಿಸಿ, ಹೋರಾಟದ ಕರೆ ನೀಡಬೇಕಿದೆ. ಜೀವವಿರೋಧಿ ಸಿದ್ಧಾಂತಗಳಿಗೆ ಎಚ್ಚರಿಕೆ ನೀಡಲು ಎಲ್ಲರೂ ಒಗ್ಗೂಡುವ ಅಗತ್ಯವಿದೆ” ಎಂದು ಟ್ರಸ್ಟ್ ಕರೆಕೊಟ್ಟಿದೆ.




