ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಈ ಬಾರಿಯ ರಾಜ್ಯ ಬಜೆಟ್ ಬಗ್ಗೆ ಬೀದರ್ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಹಾಗೂ ಸಂಘಟನೆಗಳಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
₹200 ಕೋಟಿ ಅನುದಾನದ ಐತಿಹಾಸಿಕ ಘೋಷಣೆ: ರಹೀಂ ಖಾನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17ನೇ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಅಭಿವೃದ್ಧಿಯ ಮಹಾಪೂರವೇ ಹರಿದುಬಂದಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬೀದರ್ ನಗರಕ್ಕೆ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ 2.0 ಅಡಿಯಲ್ಲಿ ಮೂಲಸೌಕರ್ಯ, ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ₹200 ಕೋಟಿ ವಿಶೇಷ ಅನುದಾನ ಘೋಷಿಸಲಾಗಿದೆ. ಇದಲ್ಲದೆ ಬೀದರ್ ಪಶುವೈದ್ಯಕೀಯ ಕಾಲೇಜಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಿಟಿ ಸ್ಕ್ಯಾನ್ ಕೇಂದ್ರ ಸ್ಥಾಪನೆ ಹಾಗೂ ಬೀದರ್‌ನಲ್ಲಿ ಶ್ವಾನ ಜನ್ಮ ನಿಯಂತ್ರಣ ತರಬೇತಿ ಕೇಂದ್ರ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಹಜ್ ಯಾತ್ರಿಕರ ಅನುಕೂಲಕ್ಕಾಗಿ ಕಲಬುರಗಿ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಹೊಸ ಹಜ್ ಭವನಗಳ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಈ ಅನುದಾನಗಳನ್ನು ಪ್ರಾಮಾಣಿಕವಾಗಿ ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ₹1500 ಕೋಟಿ: ಖಂಡ್ರೆ ಸ್ವಾಗತ
ರಾಜ್ಯ ಬಜೆಟ್‌ನಲ್ಲಿ ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ₹1500 ಕೋಟಿ ಘೋಷಿಸಿರುವುದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ಬಜೆಟ್‌ನಲ್ಲಿ ಪರಿಸರ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿಗೆ ಮಹತ್ವದ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿರತೆಗಳ ಹೆಚ್ಚುತ್ತಿರುವ ಹಾವಳಿ ಹಿನ್ನೆಲೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ₹5 ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಹಾಗೂ ಅರಣ್ಯ ಇಲಾಖೆಯ ಸುಮಾರು 2,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮಗಳು ಸ್ವಾಗತಾರ್ಹವೆಂದು ಖಂಡ್ರೆ ಹೇಳಿದರು.
ರಾಜ್ಯವನ್ನು ಆರ್ಥಿಕ ದುರಂತಕ್ಕೆ ತಳ್ಳುವ ಬಜೆಟ್: ಭಗವಂತ ಖೂಬಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ರಾಜ್ಯವನ್ನು ಆರ್ಥಿಕ ದುರಂತದತ್ತ ತಳ್ಳುವಂತಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ₹4.39 ಲಕ್ಷ ಕೋಟಿ ಸಾಲ ಮಾಡಿಕೊಂಡಿದೆ. ಆದರೆ ಈ ಸಾಲದಿಂದ ಆದಾಯ ತರುವ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಅವರು ಆರೋಪಿಸಿದರು.
ಬೀದರ್ ಜಿಲ್ಲೆಗೆ ಯಾವುದೇ ಪ್ರಮುಖ ಅನುದಾನ ನೀಡಿಲ್ಲ. ಬೀದರ್–ಔರಾದ–ನಾಂದೇಡ ರೈಲು ಮಾರ್ಗ ಹಾಗೂ ಸಿಪೇಟ್ ಕಾಲೇಜು ನಿರ್ಮಾಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಅಭಿವೃದ್ಧಿಗೆ ಸಚಿವರು ಸಮರ್ಪಕ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಖಾಲಿ ಚೊಂಬಿನಂತಿರುವ ಬಜೆಟ್: ಶಾಸಕ ಪ್ರಭು ಚವ್ಹಾಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನರ ನಿರೀಕ್ಷೆಗಳನ್ನು ಈಡೇರಿಸದ ಖಾಲಿ ಚೊಂಬಿನಂತಿದೆ ಎಂದು ಔರಾದ ಶಾಸಕ ಪ್ರಭು ಬಿ.ಚವ್ಹಾಣ ಟೀಕಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ರಸ್ತೆ, ಸೇತುವೆ, ನೀರಾವರಿ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ಘೋಷಿಸಿಲ್ಲ. ಪ್ರವಾಸೋದ್ಯಮ, ಕೈಗಾರಿಕೆ ಮತ್ತು ನೀರಾವರಿ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡದೇ ಸರ್ಕಾರ ಜನರ ನಿರೀಕ್ಷೆಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಅಭಿವೃದ್ಧಿ ಪಥದತ್ತ ಒಯ್ಯುವ ಬಜೆಟ್: ಬಸವರಾಜ ಜಾಬಶೆಟ್ಟಿ
ಮುಖ್ಯಮಂತ್ರಿ ಮಂಡಿಸಿದ ಬಜೆಟ್ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.
ಮಹಿಳೆಯರು, ಯುವಕರು ಹಾಗೂ ರೈತರ ಹಿತಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಬೀದರ್ ಜಿಲ್ಲೆಗೂ ಅನೇಕ ಕೊಡುಗೆಗಳು ದೊರೆತಿದ್ದು ಬಜೆಟ್ ಸರ್ವರ ಏಳಿಗೆಗೆ ಸಹಕರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನುಡಿದಂತೆ ನಡೆಯದ ಸರ್ಕಾರ: ಜಲಾದೆ ಆಕ್ರೋಶ
1995ರ ನಂತರ ಸ್ಥಾಪನೆಯಾದ ಖಾಸಗಿ ಶಾಲೆ-ಕಾಲೇಜುಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಸರ್ಕಾರ ನುಡಿದಂತೆ ನಡೆದುಕೊಳ್ಳಲಿಲ್ಲ ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್‌ನಲ್ಲಿ ಈ ಕುರಿತು ಯಾವುದೇ ಘೋಷಣೆ ಇಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬ್ಬಂದಿಯನ್ನು ಸರ್ಕಾರ ವಂಚಿಸಿದೆ ಎಂದು ಆರೋಪಿಸಿದ ಅವರು ಈ ಕುರಿತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಚನ ವಿಶ್ವವಿದ್ಯಾಲಯಕ್ಕೆ ಭೂಮಿ: ಬಸವಾಭಿಮಾನಿಗಳಲ್ಲಿ ಹರ್ಷ
ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ 25 ಎಕರೆ ಜಮೀನು ಕೊಡುವುದಾಗಿ ಘೋಷಣೆ ಮಾಡಿರುವುದು ಬಸವಾನುಯಾಯಿಗಳಿಗೆ ಸಂತಸ ಉಂಟು ಮಾಡಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಪ್ರತಿಕ್ರಿಯಿಸಿದ್ದಾರೆ.
ವಚನಗಳು ಹುಟ್ಟಿದ ನೆಲದಲ್ಲೇ ವಚನ ವಿಶ್ವವಿದ್ಯಾಲಯ ಸ್ಥಾಪನೆ ಆಗುವುದರಿಂದ ವಿಶ್ವದ ಜನರಿಗೆ ವಚನ ಸಾಹಿತ್ಯದ ಅಧ್ಯಯನ ಹಾಗೂ ವಚನಗಳ ವ್ಯಾಪಕ ಪ್ರಸಾರಕ್ಕೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ವಚನ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸರ್ಕಾರದ ಗಮನ ಸೆಳೆದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಸಚಿವರಾದ ಈಶ್ವರ ಖಂಡ್ರೆ ಹಾಗೂ ಎಂ.ಬಿ.ಪಾಟೀಲ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಸಾಲದ ಬಜೆಟ್: ಸೋಮನಾಥ ಪಾಟೀಲ
ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಪಡೆದು ಮಂಡಿಸಿರುವ ಬಜೆಟ್ ಇದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಟೀಕಿಸಿದ್ದಾರೆ.
ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಹೊಸ ಕೈಗಾರಿಕೆಗಳು ಅಥವಾ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನ, ಮಹಿಳಾ ಪಾಲಿಟೆಕ್ನಿಕ್ ಹಾಗೂ ಕೃಷಿ ಮಹಾವಿದ್ಯಾಲಯದ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ.
ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ವಾಗತ
ಕರ್ನಾಟಕದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸುವ ಘೋಷಣೆಯನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷ ಸ್ವಾಗತಿಸಿದೆ.
ಈ ಕುರಿತು ಪಕ್ಷದ ರಾಜ್ಯ ಸಂಯೋಜಕ ಮಹೇಶ ಗೋರನಾಳಕರ್ ಸೇರಿದಂತೆ ವಿವಿಧ ಮುಖಂಡರು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೌದ್ಧ ಭಿಕ್ಷುಗಳಿಗೆ ಮಾಸಾಶನ ನೀಡುವುದು ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ವಸತಿ ಶಾಲೆಗಳನ್ನು ಸ್ಥಾಪಿಸುವ ಘೋಷಣೆಯನ್ನು ಅವರು ಸ್ವಾಗತಿಸಿದ್ದಾರೆ.
ವಚನ ವಿಶ್ವವಿದ್ಯಾಲಯಕ್ಕೆ 25 ಎಕರೆ ಜಮೀನು: ಸಿಎಂಗೆ ಭಾಲ್ಕಿ ಶ್ರೀಗಳ ಅಭಿನಂದನೆ
ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಆರಂಭಿಸಲು 25 ಎಕರೆ ಜಮೀನು ನೀಡುವ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಕಟ್ಟಡ ನಿರ್ಮಾಣದ ಜೊತೆಗೆ ವಚನ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎನ್ನುವುದು ಬಹುದಿನಗಳ ಕನಸಾಗಿತ್ತು ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ಈಚೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ವಚನ ವಿಶ್ವವಿದ್ಯಾಲಯ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು.
ಈ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ನೀಡಿದ ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್ ಮತ್ತು ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಕಾರ್ ಬಜೆಟ್ : ಶೈಲೇಂದ್ರ ಬೆಲ್ದಾಳೆ ಟೀಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ದಿಕ್ಕು-ಗುರಿಯಿಲ್ಲದ ಸತ್ವಹೀನ ಬಜೆಟ್ ಆಗಿದ್ದು, ಬೀದರ್ ಜಿಲ್ಲೆಯ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಬೆಲ್ದಾಳೆ ಟೀಕಿಸಿದರು.
ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಿಸಿಲ್ಲ. ಕಾರಂಜಾ ಸಂತ್ರಸ್ತರಿಗೆ ಪರಿಹಾರ, ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿ ಕಾಲೇಜು ಸ್ಥಾಪನೆ ಹಾಗೂ ಬೀದರ್–ನಾಂದೇಡ್ ರೈಲ್ವೆ ಮಾರ್ಗಕ್ಕೆ ರಾಜ್ಯದ ಪಾಲು ಘೋಷಣೆ ಇಲ್ಲದಿರುವುದು ನಿರಾಶೆ ಮೂಡಿಸಿದೆ ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಹಣ ವ್ಯಯವಾಗುತ್ತಿರುವುದರಿಂದ ಹೊಸ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ. ಇದರಿಂದ ಈ ಬಜೆಟ್ ಬರೀ ಘೋಷಣೆಗಳಿಗೆ ಸೀಮಿತವಾಗಿದೆ ಎಂದು ಅವರು ಆರೋಪಿಸಿದರು.
ಬಜೆಟ್‌ಗೆ ದಲಿತ ವಿದ್ಯಾರ್ಥಿ ಪರಿಷತ್ ಸ್ವಾಗತ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 17ನೇ ರಾಜ್ಯ ಬಜೆಟ್‌ಗೆ ದಲಿತ ವಿದ್ಯಾರ್ಥಿ ಪರಿಷತ್ ಬೀದರ ಜಿಲ್ಲಾ ಸಮಿತಿ ಸ್ವಾಗತ ವ್ಯಕ್ತಪಡಿಸಿದೆ.
ಬಜೆಟ್‌ನಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ, ಬೌದ್ಧ ಭಿಕ್ಷುಗಳಿಗೆ ಮಾಸಾಶನ, ರೋಹಿತ್ ವೇಮೂಲಾ ಕಾನೂನು ಜಾರಿ ಹಾಗೂ ಆರ್‌ಟಿಇ ಮೂಲಕ ಪ್ರವೇಶ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪದವಿ ಪೂರ್ವದವರೆಗೆ ಉಚಿತ ಶಿಕ್ಷಣ ನೀಡುವ ಘೋಷಣೆಗಳನ್ನು ಪರಿಷತ್ ಶ್ಲಾಘಿಸಿದೆ. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಮಿತಿ ಹೆಚ್ಚಿಸಿರುವುದನ್ನೂ ಪರಿಷತ್ ಪ್ರಶಂಸಿಸಿದೆ ಎಂದು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲಾ ವಲಯಕ್ಕೂ ಆದ್ಯತೆ: ಪೂಜಾ ಬೆಲ್ಲೆ
ಪ್ರಸಕ್ತ ಸಾಲಿನ ಬಜೆಟ್ ಪ್ರತಿಯೊಂದು ವಲಯಕ್ಕೂ ಸಮಾನ ಆದ್ಯತೆ ನೀಡಿ, ಸಮೃದ್ಧ ಕರ್ನಾಟಕದ ನಿರ್ಮಾಣಕ್ಕಾಗಿ ₹4.48 ಲಕ್ಷ ಕೋಟಿ ಮೊತ್ತದ 2026-2027 ಸಾಲಿನ ಬೃಹತ್ ಬಜೆಟ್ ಮಂಡಿಸಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಮೂಲಭೂತ ಸೌಕರ್ಯಗಳಿಗೆ ವಿಶೇಷ ಒತ್ತು ನೀಡುವ ಜೊತೆಗೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಭರವಸೆ ಮೂಡಿಸುವಂತೆ ಮಾಡಿದೆ.
ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಬಂಪರ್ ಕೊಡುಗೆ, ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ. ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯಕ್ಕೆ 25 ಎಕರೆ ಜಾಗ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಮದನೂರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪೂಜಾ ಗುಂಡಪ್ಪ ಬೆಲ್ಲೆ ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಸ್ವಾಗತ
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರುವ ಘೋಷಣೆ ಮಾಡಿರುವುದನ್ನು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣದ ಕಾರಣ ಬಹಳಷ್ಟು ಮಕ್ಕಳು ಮೊಬೈಲ್‍ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ದಾರಿ ತಪ್ಪುತ್ತಿದ್ದಾರೆ. ಅನೇಕರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಹೀಗಾಗಿ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಕೈಗೊಂಡ ನಿರ್ಧಾರ ಅತ್ಯಂತ ಸೂಕ್ತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಬಜೆಟ್ | ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು?
ಒಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಕುರಿತು ಬೀದರ್ ಜಿಲ್ಲೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿದೆ.





