ಧಾರವಾಡದ ಎಎಸ್‌ಪಿ ಆಗಿದ್ದ ನಾರಾಯಣ.ವಿ.ಭರಮನಿ ಅವರ ಮೇಲೆ ಕೈಎತ್ತಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಾರಾಯಣ ಅವರಿಗೆ ಸಾರ್ವಜನಿಕವಾಗಿ ಸಿಎಂ ಕೈಎತ್ತಿದ್ದು, ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ಕೋರಿ ಭೀಮಪ್ಪ ಗಡಾದ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಜಾ ಮಾಡಿದೆ.
ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶನಕ್ಕೆ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ವೇದಿಕೆ ಮೇಲೆಯೇ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರ ಮೇಲೆ ಕೈ ಎತ್ತಿದ್ದರು. ಅವರನ್ನು ಹೇಗೆ ಒಳಗೆ ಬಿಟ್ಟಿದ್ದೀರಿ ಎಂದು ವೇದಿಕೆ ಮೇಲೆಯೇ ಎಎಸ್‌ಪಿ ನಾರಾಯಣ ಅವರನ್ನು ಕರೆದು ಹೊಡೆಯಲು ಕೈ ಎತ್ತಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ಕೋರಿ ಭೀಮಪ್ಪ ಗಡಾದ ಎನ್ನುವರು ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದು, ಇದನ್ನು ಇಂದು (ಡಿಸೆಂಬರ್ 10) ಪರಿಶೀಲನೆ ಮಾಡಿದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ಭೀಮಪ್ಪ ಗಡಾದ ಸಲ್ಲಿಸಿದ್ದ ಖಾಸಗಿ ದೂರು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಜುಗರಕ್ಕೀಡಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಬರಮನಿ ಅವರನ್ನು ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತರ ಮೂಲಕ ಮನವೊಲಿಸಿದ್ದರು. ಅಲ್ಲದೇ ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಇದರೊಂದಿಗೆ ನಾರಾಯಣ ಬರಮನಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.





