ರೌಡಿ ಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ರನ್ನು ಫೆ.21ರವರೆಗೆ ಸಿಐಡಿ ಕಸ್ಟಡಿಗೆ ನೀಡಿ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಬಳಿಕ ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಗಿತ್ತು. ಸಿಐಡಿ ಪೊಲೀಸರ ಪರ ಎಸ್ಪಿಪಿ ಅಶೋಕ್ ನಾಯ್ಕ್ ಈ ವೇಳೆ ಹಾಜರಿದ್ದರು. ಶಾಸಕರು ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಈ ಹಿಂದೆ ಸೂಚಿಸಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಜಡ್ಜ್ ನಿವಾಸದ ಬಳಿ ಎಸ್ಪಿಪಿ ಅಶೋಕ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಬೈರತಿ ಬಸವರಾಜ್ ಅವರ ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಲಾಗಿತ್ತು. ಪರೀಕ್ಷೆ ವೇಳೆ ಹೃದಯ ಸಂಬಂಧಿ ಕಾಯಿಲೆ ಇರುವುದು ಗೊತ್ತಾಗಿದ್ದ ಹಿನ್ನೆಲೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಬೌರಿಂಗ್ ವೈದ್ಯರು ತಿಳಿಸಿದ್ದರು. ವೈದ್ಯರ ವರದಿ ಆಧರಿಸಿ ಚಿಕಿತ್ಸೆಗೆ ನ್ಯಾಯಾಧೀಶರು ಕೂಡ ಸೂಚನೆ ನೀಡಿದ್ದರು. ಸದ್ಯ ಬೈರತಿ ಬಸವರಾಜ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಬಹುತೇಕ ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಬಂದಿದೆ. ಹಾಗಾಗಿ ನ್ಯಾ.ಶಿವಕುಮಾರ್ ಅವರ ಮುಂದೆ ಶಾಸಕರನ್ನು ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.





