ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದ್ದು, ಅದಾದ ಬೆನ್ನಲ್ಲೇ ಬೈರತಿ ಬಸವರಾಜ್ ಬಂಧನವಾಗಿದೆ.
ಫೆಬ್ರವರಿ 10ರಂದು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಬಂಧನ ಭೀತಿಯಲ್ಲಿದ್ದ ಬೈರತಿ ಬೆಂಗಳೂರಿನಿಂದ ರಾತ್ರೋರಾತ್ರಿ ಪರಾರಿಯಾಗಿದ್ದರು. ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಸಿಐಡಿ ಅಧಿಕಾರಿಗಳು ಮಹಾರಾಷ್ಟ್ರಕ್ಕೆ ತೆರಳಿ ಶೋಧ ನಡೆಸಿದ್ದರು. ಹಾಗೆಯೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಬೈರತಿ ಬಸವರಾಜ್ ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಈ ನಡುವೆ ಬೈರತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.
ಈ ಬೆಳವಣಿಗೆ ನಡೆಯುತ್ತಿದ್ದಂತೆ ಸಿಐಡಿ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ ಬೈರತಿ ಗುಜರಾತ್‌ನ ಅಹಮದಾಬಾದ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆಯೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸದ್ಯ ತಡರಾತ್ರಿಯೇ ಬೈರತಿ ಬಸವರಾಜ್ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರ (ಫೆ.13) ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣ: ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ
ಏನಿದು ಬಿಕ್ಲು ಶಿವು ಹತ್ಯೆ ಪ್ರಕರಣ?
2025ರ ಜುಲೈ 15ರಂದು ಬೆಂಗಳೂರಿನ ಭಾರತಿನಗರದ ಮನೆಯ ಬಳಿ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆಸ್ತಿ ವಿವಾದ ಮತ್ತು ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ತನಿಖೆಯ ವೇಳೆ ಸಿಐಡಿ ಪೊಲೀಸರಿಗೆ ಬಿಕ್ಲು ಶಿವನ ಮೊಬೈಲ್‌ನಲ್ಲಿ ಶಾಸಕರು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ಲಭ್ಯವಾಗಿದೆ. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕರು ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಸವರಾಜ್ 5ನೇ ಆರೋಪಿ (A5) ಆಗಿದ್ದು, ಕೊಲೆಯ ಸಂಚು ರೂಪಿಸಿದ ಪ್ರಮುಖ ವ್ಯಕ್ತಿ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಶಾಸಕರು ಬಂಧನ ಭೀತಿಯಿಂದ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು.





