ಶ್ರೀಸಾಮಾನ್ಯನ ನುಡಿಗಟ್ಟಿನಲ್ಲಿ ಭಕ್ತಿ ಮತ್ತು ಭಗವಂತನ ಪಾರಮ್ಯವನ್ನು ಗೇಯತೆಯ ಧ್ವನಿಯಲ್ಲಿ ಸಾರಿದ್ದು ದಾಸಸಾಹಿತ್ಯದ ಹಿರಿಮೆ. ಇಂತಹ ದಾಸಸಾಹಿತ್ಯದ 65 ಸಂಪುಟಗಳನ್ನು ತಮ್ಮ ನೇತೃತ್ವದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲಾಗುತ್ತಿದೆ. ಇವುಗಳ ಪೈಕಿ ಈಗಾಗಲೇ ಅರವತ್ತಕ್ಕೂ ಹೆಚ್ಚು ಸಂಪುಟಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನ ಪೀಠವು ಶನಿವಾರ ಇಲ್ಲಿನ ಕೇತೋಹಳ್ಳಿಯಲ್ಲಿ ಏರ್ಪಡಿಸಿದ್ದ, ಕನಕದಾಸ ಸಾಹಿತ್ಯದ ವೈಚಾರಿಕ ಅನುಸಂಧಾನದ ‘ತಲ್ಲಣಿಸದಿರು ಮನವೇ’ ವಿಚಾರ ಸಂಕಿರಣಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
“ಕನಕಸಾಸರು ವೈಚಾರಿಕವಾಗಿ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ, ವ್ಯಾಸರಾಯರ ಶಿಷ್ಯರಾಗಿ ಸಾಧನೆ ಮಾಡಿದವ ರಾಗಿದ್ದಾರೆ. ಭಾಷೆಯ ಬಳಕೆಯಲ್ಲಿ ದಾಸಸಾಹಿತ್ಯವು ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡಿದೆ. ಇದರಿಂದಾಗಿ ಸಾಮಾಜಿಕ ಪರಿವರ್ತನೆ ಸಾಧ್ಯವಾಯಿತು” ಎಂದು ಬಣ್ಣಿಸಿದರು.
“ಕನಕದಾಸರ ಸಾಹಿತ್ಯ ಕುರಿತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲೂ ಕಾರ್ಯಕ್ರಮಗಳು ನಡೆಯಬೇಕು. ಸಾಮಾಜಿಕ ತಾರತಮ್ಯವನ್ನು ಪ್ರಶ್ನಿಸಿದ ಇಂತಹ ಸಾಹಿತ್ಯವನ್ನು ಯುವಜನರು ಗಂಭೀರವಾಗಿ ಅಧ್ಯಯನ ಮಾಡುವಂತಹ ಬೌದ್ಧಿಕ ವಾತಾವರಣ ಸೃಷ್ಟಿಯಾಗಬೇಕು. ಸೇನಾಧಿಕಾರಿಯಾಗಿದ್ದ ಕನಕದಾಸರು ದಾಸಕೂಟಕ್ಕೆ ಬಂದು, ಶ್ರೀಕೃಷ್ಣ ಮತ್ತು ಆದಿಕೇಶವನ ಕಿಂಕರರಾಗಿದ್ದು ಒಂದು ದೊಡ್ಡ ಚಾರಿತ್ರಿಕ ಪಲ್ಲಟವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಉತ್ತರ ಕರ್ನಾಟಕವು ಮೂಲತಃ ಭಕ್ತಿಕವಿಗಳ, ಸಂತರ, ಯೋಗಿಗಳ ಮತ್ತು ಅವಧೂತರ ನೆಲವಾಗಿದೆ. ಪಂಪ, ರನ್ನ, ಬಸವಣ್ಣ, ಶಿಶುನಾಳ ಷರೀಫ, ಸಿದ್ಧೇಶ್ವರ ಸ್ವಾಮಿಗಳು, ಬೇಂದ್ರೆ, ಕಲಬುರ್ಗಿ, ಪುರಂದರದಾಸರು ಮತ್ತು ಕನಕದಾಸರು ಹೀಗೆ ಎಲ್ಲರೂ ಉತ್ತರ ಕರ್ನಾಟಕ ಪ್ರದೇಶದವರೇ ಆಗಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಕಾಗಿನೆಲೆ ಪೀಠದ ನಿರಂಜನಾಪುರಿ ಸ್ವಾಮೀಜಿ, ಕೇತೋಹಳ್ಳಿ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕವಿ ಚಂದ್ರಶೇಖರ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು.





