“ಒಂದು ದೇಶದ ನಾಗರಿಕನ ಹಕ್ಕುಗಳನ್ನು ಕಿತ್ತುಕೊಳ್ಳುವುದೆಂದರೆ ಆತನನ್ನು ಕೊಂದಂತೆಯೇ. ಹಕ್ಕಿಲ್ಲದ ವ್ಯಕ್ತಿ ಜೀವಂತ ನಾಗರಿಕನಲ್ಲ. SIR ಹೆಸರಿನಲ್ಲಿ ಇಂದು ಮತದ ಹಕ್ಕನ್ನು ಕಸಿದುಕೊಂಡು ಸರ್ಕಾರ ನಡೆಸುತ್ತಿರುವುದು ರಕ್ತರಹಿತ ನರಮೇಧವಲ್ಲದೆ ಮತ್ತೇನಲ್ಲ” ಎಂದು ಖ್ಯಾತ ಆರ್ಥಿಕ ಹಾಗೂ ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ʼಎದ್ದೇಳು ಕರ್ನಾಟಕʼ ಆಯೋಜಿಸಿದ್ದ, ಚುನಾವಣಾ ಆಯೋಗ ದೇಶವ್ಯಾಪಿ ಮಾಡಲು ಹೊರಟಿರುವ SIR ಪ್ರಕ್ರಿಯೆಯನ್ನು ವಿರೋಧಿಸಿ ನಡೆಯುತ್ತಿರುವ ಮಂಥನಾ ಸಮಾವೇಶದಲ್ಲಿ ಅವರು ಮಾತನಾಡಿದರು.
“ಈ ಹಿಂದೆ ಇಂಥದ್ದೊಂದು ದಿನ ಬರಬಹುದು ಎನ್ನುವ ಆತಂಕ ವ್ಯಕ್ತಪಡಿಸಿಕೊಳ್ಳುತ್ತಿದ್ದೆವು. ಆದರೆ ಇಂದು ಆ ಭೀತಿಯ ದಿನ ಬಂದು ನಿಂತಿದೆ, ಅದು ನಮ್ಮ ನಡುವೆಯೇ ಇದೆ. ಇಂದು ನಾವು ಯಾವ ರೀತಿಯ ಸವಾಲನ್ನು ಎದುರಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ದೇಶದ ಅಸ್ತಿತ್ವದ ಮೇಲೆ ಎರಡು ವಿಧದ ಅಪಾಯದ ತೂಗುಗತ್ತಿಗಳು ಹೊಯ್ದಾಡುತ್ತಿವೆ. ಆ ಪೈಕಿ ನಾಗರಿಕರೊಳಗಿನ ನಿರ್ಲಿಪ್ತತೆ ಅತ್ಯಂತ ಭಯಾನಕವಾದದ್ದು. ಅಕ್ರಮಗಳು, ಅಸಂವಿಧಾನಿಕ ಕ್ರಮಗಳು ನಡೆಯುತ್ತಿದ್ದರೂ ಜನರು ಪ್ರತಿಕ್ರಿಯಿಸುತ್ತಿಲ್ಲ. ಜನರ ಈ ಜಡತ್ವವೇ ಆಡಳಿತ ವರ್ಗಕ್ಕೆ ಸಿಕ್ಕಿರುವ ಅವಕಾಶ. ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವುದು ಅವರಿಗೆ ತಿಳಿದಿದೆ. ಆದ್ದರಿಂದಲೇ ಅವರು ನಮ್ಮ ಕಣ್ಣೆದುರೇ ಬಾಕಾದ್ದು ಮಾಡುತ್ತಿದ್ದಾರೆ. ನಮಗೆ ಕಾಳಜಿ ಇಲ್ಲ ಎಂಬ ವಿಶ್ವಾಸದಿಂದಲೇ ಅವರು ಸುಮ್ಮನೆ ಕೈಚಳಕಗಳನ್ನು ಮುಂದುವರಿಸುತ್ತಿದ್ದಾರೆ” ಎಂದು ತೀವ್ರವಾಗಿ ಟೀಕಿಸಿದರು.
“ತುಂಬಿದ ನ್ಯಾಯಾಲಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗೆ ಚಪ್ಪಲಿ ಎಸೆಯಲ್ಪಟ್ಟಾಗ 140 ಕೋಟಿ ಜನರಲ್ಲಿ ಎಷ್ಟು ಮಂದಿ ರಸ್ತೆಗಿಳಿದು ಅದಕ್ಕೆ ವಿರೋಧ ವ್ಯಕ್ತಪಡಿಸಿದರು? ನಾವು ಅದನ್ನು ದೊಡ್ಡ ವಿಷಯವೆಂದು ಕರೆಯಲೇ ಇಲ್ಲ. ಇದರ ಮೂಲಕ ನಾವು ನೀಡಿದ ಸಂದೇಶ ಏನು? ಮಣಿಪುರ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಹೊತ್ತಿ ಉರಿಯುತ್ತಲೇ ಇದೆ. ʼಅದು ಭಾರತದ ಭಾಗವೇ?ʼ ಎಂದು ಪ್ರಶ್ನಿಸಿಕೊಳ್ಳುವ ಮಟ್ಟಿಗೆ ಅಸಂವೇದನಶೀಲತೆ ನಮ್ಮೊಳಗೆ ಬೇರೂರಿದೆ. ಯುವಕರ ನಿರುದ್ಯೋಗ ಇತಿಹಾಸದಲ್ಲೇ ಗರಿಷ್ಠ ಮಟ್ಟ ತಲುಪಿದ್ದರೂ, ದೇಶದ ಒಟ್ಟು ನಿರುದ್ಯೋಗ ಜಗತ್ತಿನ ಪಟ್ಟಿಯಲ್ಲಿ ಮೇಲೆ ನಿಂತಿದ್ದರೂ, ಮನೆಮನೆಗಳ ಸಾಲ ಗಗನಕ್ಕೇರಿದ್ದರೂ, ಕುಟುಂಬಗಳ ಉಳಿತಾಯ ಕುಸಿದಿದ್ದರೂ ಜನರು ಕಾಳಜಿ ತೋರದಿರುವುದು ಆಡಳಿತಕ್ಕೆ ತಪ್ಪು ಸಂದೇಶ ನೀಡುತ್ತಿರುವಂತೆಯಲ್ಲವೇ?” ಎಂದು ವಿಷಾದ ವ್ಯಕ್ತಪಡಿಸಿದರು.
ಗ್ರಾಮೀಣ ಉದ್ಯೋಗ ಖಾತರಿಗಾಗಿ ಇರುವ ಮನ್‌ರೇಗಾ ಯೋಜನೆಯ ವಾರ್ಷಿಕ ನಿಧಿ ಈ ಬಾರಿ ಕೇವಲ ಆರು ತಿಂಗಳಲ್ಲೇ ಖಾಲಿಯಾದುದನ್ನು ಉದಾಹರಿಸಿದ ಅವರು, “ಈ ಹಿಂದೆ ಎಂದೂ ಆಗದ ರೀತಿಯಲ್ಲಿ ಮನ್‌ರೇಗಾ ನಿಧಿ ಮಧ್ಯ ವರ್ಷದಲ್ಲಿ ಮುಗಿದಿದೆ. ಇದು ಗ್ರಾಮೀಣ ಭಾರತ ಭಾರೀ ಆರ್ಥಿಕ ಸಂಕಷ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ. ಇಂದು ಚುನಾವಣೆ ಸಮೀಪಿಸುತ್ತಿದ್ದಂತೆ ಸುಮಾರು 42 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಹಕ್ಕಿಲ್ಲದವರು ಜೀವಂತ ನಾಗರಿಕರಲ್ಲ; ಇದು ನರಮೇಧವಲ್ಲವೇ?. ಪ್ರಜಾಪ್ರಭುತ್ವದ ಮೂಲ ತತ್ವವೇ ತಲೆಕೆಳಗಾಗಿರುವ ಸ್ಥಿತಿಯಲ್ಲವೇ? ಡೆಮಾಕ್ರಸಿಯಲ್ಲಿ ಜನರು ಸರ್ಕಾರವನ್ನು ಆಯ್ಕೆ ಮಾಡುವುದು ಸಹಜ. ಆದರೆ ಈಗ ಸರ್ಕಾರವೇ ಜನರನ್ನು ಆಯ್ಕೆ ಮಾಡುತ್ತಿದೆ. ತನ್ನ ಪರವಾಗಿ ಮತ ಹಾಕುವವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿ, ವಿರೋಧಿಗಳನ್ನ ಹೊರದೂಡುವ ಕೆಲಸ ನಡೆಯುತ್ತಿದೆ. ಇದನ್ನು ಮತದಾರರ ಪಟ್ಟಿ ಶುದ್ಧೀಕರಣವೆಂದಲ್ಲ; ರಾಜಕೀಯ ಶುದ್ಧೀಕರಣವೆಂದು ಕರೆಯಬೇಕು” ಎಂದು ಕಿಡಿಕಾರಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವೋ ಅಥವಾ ಮತಗಳ್ಳತನವೋ?
“ಬಿಹಾರದಲ್ಲಿ ಸರ್ಕಾರ ತನ್ನ ಇಷ್ಟದ ಮತದಾರರನ್ನು ಆಯ್ಕೆ ಮಾಡುತ್ತಿದ್ದರೂ ಕೆಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಗೆಲ್ಲುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಇಂದು SIR ಹೆಸರಿನಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕೊಲೆ. ಇದನ್ನು ತಡೆಯದಿದ್ದರೆ 21ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ಕಳೆದುಹೋಗುವ ಪರಿಸ್ಥಿತಿ ಎದುರಾಗಬಹುದು. ನಾವು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಬೇಕು, ಅವುಗಳಲ್ಲಿ ಯಾರೂ ಹಸ್ತಕ್ಷೇಪ ಮಾಡದಂತೆ ಕಾವಲಿರಬೇಕು. ಇದು ನಮ್ಮ ಹಕ್ಕು, ನಮ್ಮ ಕರ್ತವ್ಯ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್, ಒಬಾಮಾ ಆಡಳಿತದ ಸಲಹೆಗಾರ ಹಾಗೂ ತಾಂತ್ರಿಕ ಸುರಕ್ಷಣಾ ತಜ್ಞ ಮಾಧವ ದೇಶಪಾಂಡೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ನ ಮುಖ್ಯಸ್ಥ ಹರೀಶ್ ನರಸಪ್ಪ, ಜಾಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಕುನ್ನಿ, ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾ ರಾವ್, ನಮ್ಮ ಓಟು, ನಮ್ಮ ಹಕ್ಕು ಅಭಿಯಾನದ ಮಾನವಿ, ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





