ಮಾರ್ಚ್ 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರವಾಗಿ ತೀರ್ಮಾನ ಕೈಗೊಳ್ಳಬೇಕು. ಎಲ್ಲ ಸಚಿವರು ಒಳಮೀಸಲಾತಿ ಅನುಷ್ಠಾನಕ್ಕೆ ಒಮ್ಮತದಿಂದ ಸಹಕರಿಸಬೇಕು. ಅಂತೆಯೇ, ಎಲ್ಲ ಸಮುದಾಯಗಳೂ ಸಹಕಾರ ನೀಡಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ ಮನವಿ ಮಾಡಿದೆ.
ಒಳಮೀಸಲಾತಿ ವಿಚಾರವನ್ನು ಸರಿಯಾಗಿ ಬಗೆಹರಿಸಿ, ಸಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಹೋರಾಟ ಸಮಿತಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಕಳೆದ 35 ವರ್ಷಗಳಿಂದ ಒಳಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ನಿರಂತರವಾಗಿ ಹಲವು ರೀತಿಯ ಹೋರಾಟಗಳನ್ನು ಮಾಡುತ್ತಿದ್ದು, ನಮ್ಮ ಹೋರಾಟಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾಗಿ ತೀರ್ಪು ನೀಡಿತ್ತು. ತೀರ್ಪು ಬಂದು ಎರಡು ವರ್ಷಗಳಾದರೂ ಸಮಗ್ರವಾಗಿ ಒಳಮಿಸಲಾತಿ ಜಾರಿಮಾಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರಸಂದ್ರ ಮುನಿಯಪ್ಪ, “56,432 ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆಯೇ ಭರ್ತಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಹೋರಾಟದ ನಿಯೋಗವನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಒಂದು ಹುದ್ದೆಯನ್ನು ಒಳಮೀಸಲಾತಿ ಇಲ್ಲದೆಯೇ ಭರ್ತಿ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು. ಮಾರ್ಚ್ 13ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಹೋರಾಟಗಾರರ ನಿಯೋಗ DPAR ಸುತ್ತೋಲೆ, ರಾಜ್ಯಪಾಲರಿಂದ ಸಹಿಯಾದ ಕಾಯ್ದೆಯ ರಾಜ್ಯಪತ್ರ ಹೊರಡಿಸಲು ನಿಧಾನಗತಿ ಧೋರಣೆ ಅನುಸರಿಸುತ್ತಿರುವ ಕುರಿತು ಚರ್ಚಿಸಿದಾಗ, ಕೂಡಲೇ ರಾಜ್ಯಪತ್ರವನ್ನು ಹೊರಡಿಸುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್-ಅಮೆರಿಕ-ಇಸ್ರೇಲ್ ಯುದ್ಧ ಗೆದ್ದವರಾರು? ಲಾಭ ಪಡೆದವರಾರು?
“ಮಾರ್ಚ್ 27ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯು ಒಳಮೀಸಲಾತಿ ಪರವಾದ ತೀರ್ಮಾನವನ್ನು ತೆಗೆದುಕೊಳ್ಳಲು ಎಲ್ಲ ಸಮುದಾಯಗಳು ಸಹಕರಿಸಬೇಕು. ಒಳಮೀಸಲಾತಿ ಅಲ್ಲದೆಯೇ ಅಸ್ಪೃಷ್ಯ ಸಮುದಾಯಗಳ ಜ್ವಲಂತ ಸಮಸ್ಯೆಗಳಾದ ಭೂಮಿ ಹಕ್ಕು, ದೌರ್ಜನ್ಯ ತಡೆ, SCSP-TSP ಅನುದಾನದಲ್ಲಿ ಅನ್ಯಾಯದ ವಿರುದ್ದ ಸಂಘಟಿರಾಗಿ ಹೋರಾಟ ನಡೆಸುವ ಅನಿವಾರ್ಯ ಇದೆ. ಹಾಗಾಗಿ ರೋಸ್ಟರ್ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಕೂತು ಬಗೆಹರಿಸಿಕೊಂಡು ಒಳಮೀಸಲಾತಿಯನ್ನು ಜಾರಿಮಾಡಿಕೊಳ್ಳೋಣ” ಎಂದು ಮನವಿ ಮಾಡಿದ್ದಾರೆ.
“ಒಳಮೀಸಲಾತಿ ಹೋರಾಟ ಸಾಮಾಜಿಕ ನ್ಯಾಯದ ಹೋರಾಟವಾದ್ದರಿಂದ ಇದು ಯಾವುದೇ ಸಮುದಾಯದ ವಿರುದ್ಧದ ಹೋರಾಟ ಎಂದು ಯಾರೂ ಭಾವಿಸಬಾರದು” ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಬಣ್ಣ ಅರೋಲಿಕರ್,”ಮಾರ್ಚ್ 27ರಂದು ಒಳಮೀಸಲಾತಿಯನ್ನು ಎಲ್ಲ ಹಂತಗಳಲ್ಲೂ ಅನ್ವಯಿಸಿ ಆದೇಶ ಹೊರಡಿಸದಿದ್ದರೆ, ನಮ್ಮ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಳಮೀಸಲಾತಿ ಹೋರಾಟಗಾರರು ಸರ್ಕಾರಕ್ಕೆ ಎಲ್ಲ ರೀತಿಯಲ್ಲೂ ಎದುರುಗೊಳ್ಳುತ್ತೇವೆ. ಸಮುದಾಯದ ಭಾವನೆಗೆ ಬೆಲೆ ಕೊಟ್ಟು ಸಾಮಾಜಿಕ ನ್ಯಾಯ ಒದಗಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿ. ನರಸಪ್ಪ ಮಾತನಾಡಿ, “ಒಳಮೀಸಲಾತಿ ಹೋರಾಟವನ್ನು ಸರ್ಕಾರ ಕಡೆಗಣಿಸಿದ ಪಕ್ಷದಲ್ಲಿ ಸರ್ಕಾರ ತನ್ನ ಅಂತ್ಯವನ್ನು ಕಾಣಲಿದೆ” ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ ಗುರುಮೂರ್ತಿ, ಫರ್ನಾಂಡಿಸ್ ಇಪ್ಪಳಗಾಂವ್, ಮುಂತಾದವರು ಹಾಜರಿದ್ದರು.




