ಬಾಲಕಿಯ ಜೊತೆ ಅನುಚಿತ ವರ್ತನೆ ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಯಾದಗಿರಿಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಪ್ರತ್ಯಕ್ಷನಾಗಿದ್ದಾನೆ. ಫೆಬ್ರವರಿ 25ರಿಂದ ಕಾಣೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ ನಿನ್ನೆ (ಮಾರ್ಚ್ 04) ರಾತ್ರಿ ಶಹಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಈ ವೇಳೆ ಪೊಲೀಸರು ವಿಚಾರಣೆ ನಡಸಿ ಇಂದು(ಮಾರ್ಚ್ 05) ಮಧ್ಯಾಹ್ನ 3 ಗಂಟೆಗೆ ಬರುವಂತೆ ಕಳುಹಿಸಿಕೊಟ್ಟಿದ್ದರು. ಅದರಂತೆ ಮುತ್ಯಾ ಮತ್ತೆ ವಿಚಾರಣೆಗೆ ಹಾಜರಾಗಿದ್ದಾನೆ.
ನೋಟಿಸ್ ನೀಡಿ ಇಂದು (ಮಾರ್ಚ್ 05) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಅದರಂತೆ ಮುತ್ಯಾ ಹಾಜರಾದ ಬಳಿಕ ಮೆಡಿಕಲ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ಬಳಿಕ ಪ್ರಕರಣದ ತನಿಖಾಧಿಕಾರಿ ಶಹಾಪುರ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ್ ಶರಣಗೌಡ ನ್ಯಾಮಣ್ಣನವರ ನೇತೃತ್ವದಲ್ಲಿ ಮುತ್ಯಾ ಅವರನ್ನ ವಿಚಾರಣೆ ನಡೆಯಲಿದೆ. ಇನ್ನು ಒಂದು ವೇಳೆ ವಿಚಾರಣೆಗೆ ಸಹಕಾರ ನೀಡದಿದ್ದರೆ ಮುತ್ಯಾನನ್ನು ಬಂಧಿಸುವ ಸಾಧ್ಯತೆಗಳಿವೆ.
ಇದನ್ನು ಓದಿದ್ದೀರಾ? ಇರಾನ್‌ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ
ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುತ್ಯಾ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಈ ಪತ್ರದ ಬಳಿಕ ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ.
ಇನ್ನು ಪ್ರಕರಣ ಸಂಬಂಧ ಮುತ್ಯಾ ಯಾದಗಿರಿ ಜಿಲ್ಲಾ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸರ್ಕಾರಿ ಪರ ವಕೀಲರು ಆಕ್ಷೇಪ ಸಲ್ಲಿಸಿದ್ದಾರೆ. ಹೀಗಾಗಿ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ.





