ಭಾರತವು ‘ರಾಜ್ಯಗಳ ಒಕ್ಕೂಟ’. “ರಾಜ್ಯಗಳು ಕೇಂದ್ರದ ಅಧೀನ ಸಂಸ್ಥೆಗಳಲ್ಲ ಅಥವಾ ಅದರ ಉಪ ಘಟಕಗಳಲ್ಲ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯಗಳು ಕೇಂದ್ರಕ್ಕೆ ಸಮಾನವಾಗಿವೆ ಮತ್ತು ಸ್ವತಂತ್ರವಾಗಿವೆ” ಎಂಬುದನ್ನು ಸುಪ್ರೀಂ ಕೋರ್ಟ್‌ನ ಬೊಮ್ಮಾಯಿ ಅವರ ಪೀಠವು ಸ್ಪಷ್ಟವಾಗಿ ಹೇಳಿದೆ. ಆದರೆ, ಕೇಂದ್ರವೇ ಶ್ರೇಷ್ಠ – ರಾಜ್ಯಗಳು ಅಧೀನ’ ಎಂಬ ಭಾವನೆಯನ್ನು ಬೆಳೆಸಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮಾಜವಾದಿ ಸಮಾಗಮ ಸಂಸ್ಥೆ ಆಯೋಜಿಸಿದ್ದ, ‘ದಕ್ಷಿಣ ಭಾರತದ ಸಮಾಜವಾದಿಗಳ ಸಮಾಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಮಸ್ಯೆಗಳು ಬಹಳಷ್ಟಿವೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವುದು, ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಬಂಧಗಳು ಹಾಗೂ ಕ್ಷೇತ್ರ ಪುನರ್‌ವಿಂಗಡಣೆ – ಈ ಪ್ರತಿ ವಿಷಯಗಳೂ ಸಾಕಷ್ಟು ಚರ್ಚೆಗೆ ಅರ್ಹವಾಗಿವೆ” ಎಂದರು.
“ರಾಜ್ಯಗಳ ಸ್ವಾಯತ್ತತೆಯ ಮೇಲೆ ಪ್ರತಿದಿನ ಆಕ್ರಮಣ ನಡೆಯುತ್ತಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷಗಳನ್ನು ಬೆದರಿಸಲಾಗುತ್ತಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಭಾರತದ ಸಂವಿಧಾನವು ಮೂಲತಃ ಒಂದು ಸಮಾಜವಾದಿ ದಾಖಲೆಯಾಗಿದೆ. ನೀವು ಸಂವಿಧಾನಾತ್ಮಕ ಪ್ರಜಾಪ್ರಭುತ್ವವಾದಿಯಾಗಿದ್ದರೆ, ನೀವು ಸಮಾಜವಾದಿಯೂ, ಗಾಂಧಿವಾದಿಯೂ ಆಗಿರುತ್ತೀರಿ. ಸಂವಿಧಾನದ ‘ರಾಜ್ಯ ನಿರ್ದೇಶಕ ತತ್ವಗಳನ್ನು’ ಓದಿದರೆ ಅದು ಯಾವ ರೀತಿಯ ಆಶಯಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಒಕ್ಕೂಟ ವ್ಯವಸ್ಥೆಯ ಮೂಲ ಉದ್ದೇಶವೇ ಅಧಿಕಾರ ಕೇಂದ್ರೀಕರಣವನ್ನು ವಿರೋಧಿಸುವುದಾಗಿದೆ” ಎಂದು ತಿಳಿಸಿದರು.
“ಆದರೂ, ಇಂತಹ ಧೋರಣೆಗಳು ಯಾಕೆ ಬೆಳೆಯುತ್ತಿವೆ. ರಾಜ್ಯಗಳ ಅಧಿಕಾರವನ್ನು ಏಕೆ ಕಸಿದುಕೊಳ್ಳಲಾಗುತ್ತಿದೆ? ಸಂವಿಧಾನದಲ್ಲಿ ದೋಷಗಳಿವೆಯೇ? ಸಂವಿಧಾನದ ಬಗ್ಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು: ‘ನಮ್ಮ ಸಂವಿಧಾನವು ಸುಸ್ಥಿತಿಯಲ್ಲಿದೆ ಮತ್ತು ನಮ್ಯವಾಗಿದೆ. ದೇಶವನ್ನು ಶಾಂತಿ ಮತ್ತು ಯುದ್ಧಕಾಲದಲ್ಲಿ ಒಗ್ಗೂಡಿಸಲು ಸಾಕಷ್ಟು ಬಲವಿದೆ. ಒಂದು ವೇಳೆ ಸಂವಿಧಾನದ ಅಡಿಯಲ್ಲಿ ವಿಷಯಗಳು ತಪ್ಪಾಗಿ ನಡೆದರೆ, ಅದಕ್ಕೆ ಸಂವಿಧಾನ ಕೆಟ್ಟದಾಗಿದೆ ಎಂದರ್ಥವಲ್ಲ, ಬದಲಾಗಿ ಅದನ್ನು ನಡೆಸುವವರು ಕೆಟ್ಟವರಾಗಿದ್ದಾರೆ ಎಂದೇ ಅರ್ಥ’ ಎಂದಿದ್ದರು. ಕಳೆದ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಕೇಂದ್ರೀಕೃತ ಅಧಿಕಾರವನ್ನು ದೇಶ ಎದುರಿಸುತ್ತಿದೆ. ಇದು ರಾಜ್ಯಗಳ ಸಾರ್ವಭೌಮತೆಯನ್ನು ನಾಶಮಾಡುತ್ತದೆ” ಎಂದರು.
“ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಅನುಚ್ಛೇದ 370 ಅನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಯಿತು. ಇದು ಮೊದಲ ಬಾರಿಗೆ ಪೂರ್ಣ ರಾಜ್ಯವನ್ನು ಕೇಂದ್ರಾಡಳಿತಕ್ಕೆ ಪರಿವರ್ತಿಸಿದ ಕೃತ್ಯ. ಇದನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದ್ದರೂ, ಈ ಕೃತ್ಯವು ಸಂವಿಧಾನದ 368ನೇ ವಿಧಿಯಲ್ಲಿ ಹೇಳಲಾಗಿರುವ ‘ಸಂಶೋಧನಾ ವಿಧಾನ’ವನ್ನು ಬೈಪಾಸ್ ಮಾಡಿದೆ ಎಂಬ ಪ್ರಶ್ನೆ ಇಂದಿಗೂ ಉಳಿದಿದೆ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ 371(ಜೆ) ಅನುಚ್ಛೇದ ಸೇರಿದಂತೆ ನಾನಾ ವಿಶೇಷ ಸೌಲಭ್ಯಗಳನ್ನು ರಾಷ್ಟ್ರಪತಿ ಆದೇಶದೊಂದಿಗೆ ರದ್ದುಪಡಿಸಬಹುದೇ” ಎಂದು ಪ್ರಶ್ನಿಸಿದರು.
“2019ರ ಚುನಾವಣೆ ನಂತರ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳನ್ನು ಕೆಡವಲಾಯಿತು. ಪಕ್ಷಾಂತರಗಳನ್ನು ಪ್ರೋತ್ಸಾಹಿಸಿ, ಪಕ್ಷಗಳನ್ನು ಒಡೆದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿ ಮಾಡಿಸಲಾಯಿತು. ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯನ್ನು ವರ್ಷಗಳ ಕಾಲ ತಡೆಯಲಾಯಿತು. ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಪೀಠವು ‘ಇದು ಒಕ್ಕೂಟ ವ್ಯವಸ್ಥೆ. ಇದನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಹಾನಿಕರ’ ಎಂದು ಹೇಳಿದರೂ ಕೇಂದ್ರ ಅದನ್ನು ನಿರ್ಲಕ್ಷಿಸಿ, ಅಧಿಕಾರ ಹೇರುತ್ತಿದೆ” ಎಂದು ದೂರಿದರು.
“ಜಿಎಸ್‌ಟಿ ವ್ಯವಸ್ಥೆಯು ಸಾಂವಿಧಾನಿಕವಾಗಿ ಮಾನ್ಯವಾದರೂ, ಅದರ ಅನುಷ್ಠಾನವು ರಾಜ್ಯಗಳ ಸ್ವಾಯತ್ತತೆಯನ್ನು ಕಸಿದುಕೊಂಡಿದೆ. ರಾಜ್ಯಗಳು ಯಾವುದಕ್ಕೆ ತೆರಿಗೆ ವಿಧಿಸಬೇಕು, ಎಷ್ಟು ವಿಧಿಸಬೇಕು ಎಂಬುದನ್ನು ನಿರ್ಧರಿಸುವ, ನಿಯಂತ್ರಿಸುವ ಅಧಿಕಾರವನ್ನು ಕಳೆದುಕೊಂಡಿವೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಸಂಭವಿಸಿದಾಗ, ನಷ್ಟ ಸರಿದೂಗಿಸಲು ರಾಜ್ಯವು ಸೆಸ್ ಏರಿಕೆ ಮಾಡಲು ಮುಂದಾದಾಗ, ಅನುಮತಿ ನಿರಾಕರಿಸಲಾಯಿತು. ಇದು, ಮಾನವೀಯ ಸಂಕಷ್ಟಕ್ಕೆ ಕಾರಣವಾಯಿತು” ಎಂದರು.
“ರಾಜ್ಯಪಾಲರ ಹುದ್ದೆಯು ಬ್ರಿಟಿಷ್ ಕಾಲದ ಪರಂಪರೆಯಾಗಿದೆ. ರಾಜ್ಯ ಸರ್ಕಾರಗಳಿಗೆ ರಾಜ್ಯಪಾಲರನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಅವರು ಜನರ ಆಶಯದಂತೆ ರಾಜ್ಯಗಳ ಜನಪ್ರತಿನಿಧಿಗಳು ರೂಪಿಸಿ, ಅಂಗೀಕರಿಸಿದ ಮಸೂದೆಗಳನ್ನು ವರ್ಷಗಟ್ಟಲೆ ತಡೆಹಿಡಿಯುತ್ತಾರೆ. ಇದು, ಸಂವಿಧಾನಕ್ಕೆ ಮಾಡುವ ದ್ರೋಹ. ಹೀಗಾಗಿಯೇ, ಸುಪ್ರೀಂ ಕೋರ್ಟ್ ಸಮಯ ಮಿತಿ ನಿಗದಿಪಡಿಸಿದೆ. ಆದರೂ ಸಮಸ್ಯೆ ಮುಂದುವರೆದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಲೇಖನ ಓದಿದ್ದೀರಾ?: ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಆಗುತ್ತಿರುವುದೇನು; ‘ಪಾಲ್’ ಸಮುದಾಯದ ಪ್ರತಿಭಟನೆಯೇಕೆ?
“ಮನರೇಗಾ ಅವರನ್ನು ರದ್ದುಪಡಿಸಿ ಹೊಸ ಕಾಯ್ದೆ (ವಿಬಿ ಬಿ ರಾಮ್ ಜಿ) ತರಲಾಗಿದೆ. ಇದರಲ್ಲಿ ರಾಜ್ಯಗಳ ಮೇಲೆ 40% ಹೊರೆ ಹೇರಲಾಗಿದೆ. ಯೋಜನೆಯನ್ನು ಎಲ್ಲಿ ಅನುಷ್ಠಾನ ಮಾಡಬೇಕು ಎಂಬುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಇದು ರಾಜ್ಯ ಸರ್ಕಾರಗಳ ಕೈಗಳನ್ನು ಕಟ್ಟಿಹಾಕುತ್ತದೆ. ಕಾಯ್ದೆಯಲ್ಲಿ ಮಹಾತ್ಮಾ ಗಾಂಧಿಯ ಹೆಸರನ್ನು ತೆಗೆದುಹಾಕಿದ್ದು ಆಕ್ಷೇಪಾರ್ಹ. ಆದರೆ, ಗಾಂಧಿಯ ಆಲೋಚನೆಯನ್ನು ದಶಕಗಳಿಂದಲೇ ಕೊಂದುಹಾಕಲಾಗಿದೆ” ಎಂದರು.
“ಪ್ರತಿ ಹಂತದಲ್ಲೂ ಕೇಂದ್ರೀಕರಣದ ಪ್ರವೃತ್ತಿ ಬಹುಮುಖವಾಗಿ ನಡೆಯುತ್ತಿದೆ. ಆರ್ಥಿಕ ಏಕೀಕೃತ ಮಾರುಕಟ್ಟೆ, ಬಹುಸಂಖ್ಯಾತರ ಒತ್ತಡ, ತುರ್ತು ಸಂದರ್ಭಗಳಲ್ಲಿ ಕೇಂದ್ರಕ್ಕೆ ಅಧಿಕಾರ ಎಲ್ಲ ಕ್ಷೇತ್ರದಲ್ಲಿಯೇ ಕೇಂದ್ರ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಸಾಮಾಜಿಕ ನ್ಯಾಯದ ಆಲೋಚನೆ ಮರೆಯಾಗಿದೆ, ‘ಒಲಿಗಾರ್ಕ್’ಗಳು ನಾಯಕರಾಗಿದ್ದಾರೆ. ಆರ್ಥಿಕ ಅಸಮಾನತೆಯ ಬಗ್ಗೆ ಮಾತನಾಡಿದರೆ ಅವರನ್ನು ಅರ್ಬನ್ ನಕ್ಸಲರೆಂದು ಹಣೆಪಟ್ಟಿ ಕಟ್ಟುತ್ತಾರೆ. ಸಂವಿಧಾನದ ಮೌಲ್ಯಗಳಾದ ಘನತೆ, ಸಹೋದರತೆ, ಬಹುತ್ವಗಳ ಮರಳಿ ನಂಬಿಕೆ ಮೂಡಿಸಬೇಕು. ಬೇರೆ ಮಾರ್ಗವಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಹಿರಿಯ ಸಮಾಜವಾದಿ ಚಿಂತಕ ಹಾಗೂ ಮಾಜಿ ಹಣಕಾಸು ಸಚಿವರಾದ ಕೇರಳ ರಾಜ್ಯದ ಐಸಾಕ್ ಥಾಮಸ್, ತೆಲಂಗಾಣ ಶಾಸಕ ವಂಶಿಕೃಷ್ಣ, ಮಾಜಿ ಸಂಸದ ಥಂಪನ್ ಥಾಮಸ್, ಕಾರ್ಮಿಕ ಮುಖಂಡೆ ಗೀತಾ ರಾಮಕೃಷ್ಣನ್, ಮಾಜಿ ಸಂಸದ ಎಲ್.ಹನುಮಂತಯ್ಯ, ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಸುಂದರ್ ಉಪಸ್ಥಿತರಿದ್ದರು.




