ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಪಿ ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಚಿಕ್ಕಮಗಳೂರಿನ ಎಚ್.ಆರ್ ಹೂವಪ್ಪ ಗೌಡ ಅವರು ಎಂ.ಪಿ ಕುಮಾರಸ್ವಾಮಿ ವಿರುದ್ಧ ಚೆಕ್‌ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟು 1.38 ಕೋಟಿ ರೂ.ಗಳನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯವು 2023ರ ಫೆಬ್ರವರಿ 13ರಂದು ತೀರ್ಪು ನೀಡಿತ್ತು.
ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಅರ್ಜಿಯನ್ನು ವಜಾಗೊಳಿಸಿದೆ. ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪುನಲ್ಲಿ; ಪ್ರತ್ಯೇಕ ಪ್ರಕರಣಗಳಲ್ಲಿ 47.30 ಲಕ್ಷ ರೂ., 2.75 ಲಕ್ಷ ರೂ., 2.25 ಲಕ್ಷ ರೂ., 2.75 ಲಕ್ಷ ರೂ., 30.25 ಲಕ್ಷ ರೂ., 2.75 ಲಕ್ಷ ರೂ., 2.30 ಲಕ್ಷ ರೂ. ಹಾಗೂ 48.30 ಲಕ್ಷ ರೂ. ಸೇರಿ ಒಟ್ಟು 1.38 ಕೋಟಿ ರೂ.ಗಳನ್ನು ಕುಮಾರಸ್ವಾಮಿ ಪಾವತಿಸಬೇಕು. ಈ ಪೈಕಿ ಪ್ರತಿ ಪ್ರಕರಣದಲ್ಲಿ ತಲಾ 5,000 ರೂ.ಗಳಂತೆ ಸರ್ಕಾರಕ್ಕೆ ವೆಚ್ಚದ ರೂಪದಲ್ಲಿ ಒಟ್ಟು 40,000 ರೂ.ಗಳನ್ನು ಪಾವತಿ ಮಾಡಬೇಕು. ಉಳಿದ 1,38,25,000 ರೂ.ಗಳನ್ನು ದೂರುದಾರ ಹೂವಪ್ಪ ಗೌಡ ಅವರಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು.
ಈ ಲೇಖನ ಓದಿದ್ದೀರಾ?: ಡಿಜಿಟಲ್ ಚಕ್ರವ್ಯೂಹ: ಅಲ್ಗಾರಿದಂಗಳು ಮಿದುಳನ್ನೇ ‘ಹೈಜಾಕ್’ ಮಾಡುತ್ತವೆ ಎಚ್ಚರ!
ಪ್ರಕರಣದ ಹಿನ್ನೆಲೆ;
ದೂರುದಾರ ಹೂವಪ್ಪ ಗೌಡ ಮತ್ತು ಕುಮಾರಸ್ವಾಮಿ ಪರಿಚಿತರಾಗಿದ್ದಾರೆ. 2017ರ ವರ್ಷದಲ್ಲಿ ವಿಭಿನ್ನ ದಿನಾಂಕಗಳಲ್ಲಿ ಕುಮಾರಸ್ವಾಮಿ ಅವರು ವೈಯಕ್ತಿಕ ತುರ್ತಿಗಾಗಿ ಹೂವಪ್ಪ ಅವರಿಂದ 1,66,70,000 ರೂ. ಸಾಲ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ 80 ಲಕ್ಷ, 85 ಲಕ್ಷ ಹಾಗೂ 1.7 ಲಕ್ಷ ರೂ.ಗಳ ಪ್ರತ್ಯೇಕ ಚೆಕ್‌ಗಳನ್ನು ಹೂವಪ್ಪ ಅವರಿಗೆ ಕುಮಾರಸ್ವಾಮಿ ನೀಡಿದ್ದರು.
ನಿರ್ದಿಷ್ಟ ದಿನಾಂಕದಂದು ನಗದು ಮಾಡಲು ಚೆಕ್‌ಗಳನ್ನು ಬ್ಯಾಂಕ್‌ಗೆ ಕೊಂಡೊಯ್ದಾಗ, ಆ ಚೆಕ್‌ಗಳು ಬೌನ್ಸ್ ಆಗಿದ್ದವು. ಹೀಗಾಗಿ, ಹೂವಪ್ಪ ಗೌಡರು ಕುಮಾರಸ್ವಾಮಿ ಅವರಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಹಣ ಹಿಂದಿರುಗಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಹಣ ಹಿಂದಿರುಗಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೂವಪ್ಪ ಗೌಡ ಅವರು ಕುಮಾರಸ್ವಾಮಿ ಅವರ ವಿರುದ್ಧ 2018ರಲ್ಲಿ ಮೂರು ಖಾಸಗಿ ದೂರು ದಾಖಲಿಸಿದ್ದರು. ಆಗ, 1.4 ಕೋಟಿ ರೂ.ಗಳನ್ನು ಪಾವತಿಸಿದ ಕುಮಾರಸ್ವಾಮಿ, ಉಳಿದ ಹಣವನ್ನು 2018ರ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಪಾವತಿಸುವುದಾಗಿ ಹೇಳಿದ್ದರು. ಆದ್ದರಿಂದ, ಹೂವಪ್ಪ ಗೌಡ ತಾವು ದಾಖಲಿಸಿದ್ದ ದಾವೆಗಳನ್ನು ಹಿಂಪಡೆದಿದ್ದರು ಎಂದು ಹೇಳಲಾಗಿದೆ.
ಈ ನಡುವೆ, ಮತ್ತೆ ಹೂವಪ್ಪ ಅವರನ್ನು ಸಂಪರ್ಕಿಸಿದ್ದ ಕುಮಾರಸ್ವಾಮಿ ತುರ್ತು ಅಗತ್ಯಕ್ಕಾಗಿ 2% ಬಡ್ಡಿದರದಲ್ಲಿ 68 ಲಕ್ಷ ರೂ. ಸಾಲ ಪಡೆದಿದ್ದರು. ಈ ಸಾಲ ಮತ್ತು ಹಿಂದಿನ ಬಾಕಿ 26.70 ಲಕ್ಷ ರೂ.ಗಳನ್ನು ಒಟ್ಟಿಗೆ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಹಣ ಕೊಡದ ಕುಮಾರಸ್ವಾಮಿ, 47.30 ಲಕ್ಷ ರೂ., 2.75 ಲಕ್ಷ ರೂ., 2.25 ಲಕ್ಷ ರೂ., 2.75 ಲಕ್ಷ ರೂ., 30.25 ಲಕ್ಷ ರೂ., 2.75 ಲಕ್ಷ ರೂ., 2.30 ಲಕ್ಷ ರೂ. ಹಾಗೂ 48.30 ಲಕ್ಷ ರೂ.ಗಳ ಪ್ರತ್ಯೇಕ ಎಂಟು ಚೆಕ್‌ಗಳನ್ನು ನೀಡಿದ್ದರು. ಆ ಚೆಕ್‌ಗಳೂ ಬೌನ್ಸ್ ಆಗಿದ್ದ ಹಿನ್ನೆಲೆ, ಕುಮಾರಸ್ವಾಮಿ ವಿರುದ್ಧ ಹೂವಪ್ಪ ಗೌಡ ಅವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.




