ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಕೂಡ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಗೂ ಇಮೇಲ್ ಮೂಲಕ ದೂರು ತಲುಪಿದೆ. ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ ಗೃಹ ಇಲಾಖೆಗೆ ‘ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು’ ಫಾರ್ವರ್ಡ್ ಮಾಡಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
“ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ. ಈಗ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತನೋರ್ವ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ.
“ಕಳೆದ ಜೂನ್ 16ರ ಭಾನುವಾರಂದು ತನಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದಕ್ಕೆ ತೆರಳಿದ್ದೆ. ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆ ನೀಡಿ ಕರೆಸಿಕೊಂಡಿದ್ದರು. ಅವರ ಸಂದೇಶ ನಂಬಿಕೊಂಡು ಅಲ್ಲಿ ತೆರಳಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ, ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ. ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೆಡಿಎಸ್ ಕಾರ್ಯಕರ್ತ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಸಂತ್ರಸ್ತನ ವಿರುದ್ಧವೇ FIR ದಾಖಲು
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಯುವಕ ಪೊಲೀಸರ ಬಳಿ ನೀಡಿರುವ ದೂರಿನಲ್ಲಿ ಎಲ್ಲವನ್ನೂ ವಿವರಿಸಿದ್ದಾನೆ. ದೌರ್ಜನ್ಯಕ್ಕೆ ಒಳಗಾದ ಯುವಕನ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದಲ್ಲೂ ಗಾಯವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಹುಡುಗನಿಂದ ದೂರು ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಡಾ. ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಯುವಕನ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅರಕಲಗೂಡು ಮೂಲದ ಸಂತ್ರಸ್ತ ಯುವಕ ಬೆಂಗಳೂರಿನಲ್ಲಿ ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ. ಯುವಕ ಸುಳ್ಳು ಆರೋಪ ಮಾಡಿದ್ದು, ಹಣಕ್ಕಾಗಿ ಪೀಡಿಸಿ, ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಶಾಸಕರ ಆಪ್ತ ಶಿವಕುಮಾರ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.
‘5 ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ’ ಎಂದು ಯುವಕ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಐಪಿಸಿ ಸೆಕ್ಷನ್ 384, 506 ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.





