ಪದ್ಮ ಅವರು ಒಂದು ವಿಶಿಷ್ಟ ಚಳುವಳಿಯ, ವಿಶೇಷ ಕುಟುಂಬದಲ್ಲಿ ಅರಳಿದ ಕಲ್ಲು ಹೂವು. ದಲಿತ ಸಮುದಾಯದಲ್ಲಿ ಹುಟ್ಟಿದ ಪದ್ಮ ಅವರ ಬದುಕು ಎಂದಿಗೂ ಚಾಲೆಂಜಿಂಗ್ ಆಗಿಯೇ ಇತ್ತು. ಅಸ್ಪೃಶ್ಯತೆ ವಿರುದ್ಧದ ಸಂಘರ್ಷದಲ್ಲೇ ಬೆಳೆದವರು. ವ್ಯತಿರಿಕ್ತ ವಾತಾವರಣದಲ್ಲಿಯೂ ತಮಗೆ ನೀಡಲಾಗುತ್ತಿದ್ದ ಕೆಲಸಗಳನ್ನು ಬದ್ದತೆಯಿಂದ ಮಾಡುತ್ತಿದ್ದವರು” ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಅಧ್ಯಕ್ಷ ನೂರ್ ಶ್ರೀಧರ್ ಹೇಳಿದರು.
ಹೋರಾಟಗಾರ್ತಿ ಪದ್ಮ ಅವರ ‘ಸ್ಮರಣಾ ಸಭೆ’ಯಲ್ಲಿ ಅವರು ಮಾತನಾಡಿದರು. “ಪದ್ಮ ಅವರು ಬಹಳ ಮೃದು ಮನಸ್ಸನ್ನು ಹೊಂದಿದ್ದರು. ಅಂತೆಯೇ, ಅಂದುಕೊಂಡಿದ್ದನ್ನು ಮಾಡಿ ಮುಗಿಸಬೇಕೆಂಬ ಗಟ್ಟಿಗಿತ್ತಿಯೂ ಆಗಿದ್ದರು. ವಿಮರ್ಶೆಗಳನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ತಪ್ಪನ್ನು ತಿದ್ದಬೇಕು, ಸಂಘಟನೆ ಮತ್ತು ಕೆಲಸಗಳು ಎಂದಿಗೂ ಹಳಿತಪ್ಪಬಾರದೆಂದು ಎಚ್ಚರಿಕೆಯಿಂದ ವಿಮರ್ಶಿಸುತ್ತಿದ್ದರು” ಎಂದು ನೆನೆದರು.
“ಪದ್ಮ ಅವರು ಅನಾರೋಗ್ಯದ ನಡುವೆಯೂ ಹೋರಾಟದ ಹಾದಿಯಲ್ಲಿ ಓಡಿದವರು. ಆಂಧ್ರದಿಂದ ಕರ್ನಾಟಕಕ್ಕೆ ಬಂದು – ಕನ್ನಡ ಓದು, ಬರಹ, ಅನುವಾದ ಎಲ್ಲವನ್ನೂ ಕಲಿತು ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ತೆರೆಮರೆಯಲ್ಲಿಯೇ ಚಳುವಳಿಗಾಗಿ ಅಚಲವಾಗಿ ದುಡಿದರು. ಭೂಮಿ ವಸತಿ ಹಕ್ಕು ವಂಚಿತರ ಹೋರಾಟದಲ್ಲಿ ಬಹಳಷ್ಟು ಕೆಲಸ ಮಾಡಿದರು. ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗಲೂ, ಮತ್ತೊಬ್ಬರಿಗೆ ಹೊರೆಯಾಗದಂತೆ ಎಲ್ಲವನ್ನೂ ನಿಭಾಯಿಸಿದವರು” ಎಂದು ನೆನಪಿಸಿಕೊಂಡರು.

ಸಭೆಯಲ್ಲಿ ಮಾತನಾಡಿದ ಸಿರಿಮನೆ ನಾಗರಾಜ್, “ಪದ್ಮ ಅವರಿಗೆ ಕ್ರಾಂತಿ ಕುರಿತು ಅಚಲವಾದ ನಂಬಿಕೆ ಮತ್ತು ಬದ್ದತೆ ಇತ್ತು. ಕ್ರಾಂತಿಗಾಗಿ ಕಡೆಯ ದಿನಗಳವರೆಗೂ ತಾವು ದುಡಿಯಬೇಕೆಂಬ ದಿಟ್ಟತೆ ಹೊಂದಿದ್ದರು. ಸಮೂಹದ ನಿರ್ಧಾರದೊಂದಿಗೆ ಕೆಲಸ ಮಾಡುವ ಬದ್ದತೆ ಇತ್ತು. ಸಂಘಟನೆ ದೃಢ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅವುಗಳ ಅನುಷ್ಠಾನಕ್ಕಾಗಿ ದುಡಿಯಬೇಕೆಂದು ತೀವ್ರವಾಗಿ ತೊಡಗಿಸಿಕೊಂಡಿದ್ದರು” ಎಂದು ಹೇಳಿದರು.
“ಕಲಿಯುವ ಗುಣ ಅವರಿಗೆ ರಕ್ತಗತವಾಗಿತ್ತು. ನಿರಂತರ ಓದು ಅವರ ಪ್ರಬುದ್ಧತೆಯನ್ನು ಹೆಚ್ಚಿಸಿತ್ತು. ದಣಿವನ್ನು ಮೀರಿ ಸಂಘಟನಾ ಕೆಲಸ ಮಾಡುತ್ತಿದ್ದರು” ಎಂದು ತಿಳಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಪದ್ಮಾ ಕುಟುಂಬದ ಸದಸ್ಯರಾದ ಅಣ್ಣ ದಿವಾಕರ್, ತಂಗಿ ಅರುಣಾ, ಮಗಳು ಜ್ಯೋತಿ, ಅಳಿಯರಾದ ಕೈದಾಳ್ ಕೃಷ್ಣಮೂರ್ತಿ, ರೈತ ಸಂಘದ ವೀರಸಂಗಯ್ಯ, ಚಿಂತಕರಾದ ಶಿವಸುಂದರ್, ನಗರಿ ಬಾಬಯ್ಯ, ಅಮ್ಜದ್ ಪಾಷಾ, ಕೆ. ಎಲ್. ಅಶೋಕ್, ಡಾ. ಹುಲಿಕುಂಟೆ ಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.




