ಆ್ಯಂಬುಲೆನ್ಸ್ ಮತ್ತು ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಯೋಜನೆಯ ಉದ್ಘಾಟನೆಗೆ ಸಂಬಂಧಿಸಿದಂತೆ ಉರ್ದು ಭಾಷೆಯಲ್ಲಿ ಸರ್ಕಾರ ಜಾಹೀರಾತು ನೀಡಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಆ ಜಾಹೀರಾತನ್ನು ಸರ್ಕಾರ ನೀಡಿಲ್ಲವೆಂದು ಕಾಂಗ್ರೆಸ್ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಜಾಹೀರಾತು ನೀಡದರೆ ತಪ್ಪೇನು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಇದನ್ನು ಓಲೈಕೆಯ ರಾಜಕಾರಣವೆಂದು ಬಿಜೆಪಿ ಆರೋಪಿಸಿದೆ. ಆದರೆ, ಬಿಜೆಪಿಯೂ ಅಧಿಕಾರದಲ್ಲಿದ್ದಾಗ ಉರ್ದು ಜಾಹೀರಾತು ನೀಡಿತ್ತು ಎಂಬುದನ್ನು ಬಿಜೆಪಿಗರು ಮರೆತಿದ್ದಾರೆಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಮತ್ತು ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆಯನ್ನು ಉದ್ಘಾಟಿಸುವ ಕಾರ್ಯಕ್ರಮ ಆಯೋಜಿಸಿತ್ತು. ಈ ಯೋಜನೆಯ ಪ್ರಯೋಜನವು ರಾಜ್ಯದಲ್ಲಿರುವ ಎಲ್ಲ ಭಾಷೆಯವರಿಗೂ ದೊರೆಯಬೇಕು ಎಂಬ ಕಾರಣಕ್ಕೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಕ್ರಮವನ್ನು ಬಿಜೆಪಿ ಮತ್ತು ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
“ಸರ್ಕಾರಿ ಕಾರ್ಯಕ್ರಮದ ಜಾಹೀರಾತನ್ನು ಉರ್ದು, ಹಿಂದಿಯಲ್ಲಿ ಮುದ್ರಿಸುವ ಅಗತ್ಯವೇನಿತ್ತು. ಕಾರ್ಯಕ್ರಮಕ್ಕೆ ಯಾರು ಉರ್ದು & ಹಿಂದಿ ಭಾಷಿಕರನ್ನು ಆಹ್ವಾನಿಸಿರಲಿಲ್ಲ. ಭಾಷೆ ಬಳಸುವ ಸಮುದಾಯಗಳು ಕಾರ್ಯಕ್ರಮದ ಭಾಗವೇನಲ್ಲ, ಅನಗತ್ಯವಾಗಿ ಉರ್ದು ಮತ್ತು ಹಿಂದಿ ಬಳಸಿದ್ದೇಕೆ” ಎಂದು ಕನ್ನಡಪರ ಸಂಘಟನೆಗಳು ಪ್ರಶ್ನಿಸಿವೆ.
“ಕರ್ನಾಟಕದ ಆಡಳಿತ ಭಾಷೆ ಕನ್ನಡ ಎಂಬುದನ್ನು ಸರ್ಕಾರ ಮರೆತಂತಿದೆ. ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಕನ್ನಡ ಬಿಟ್ಟು ಉರ್ದು ಮತ್ತು ಹಿಂದಿಯಲ್ಲಿ ಮುದ್ರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿವೆ.
ಆದಾಗ್ಯೂ, ಉರ್ದು ಭಾಷೆ ಬಳಕೆಯನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, “ಉರ್ದು ಒಂದು ಭಾಷೆ ತಾನೆ? ಕನ್ನಡ ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಆಹ್ವಾನ ಮುದ್ರಿತವಾಗಿದ್ದರೆ ತಪ್ಪೇನು? ಉರ್ದು ಜನ ಇದ್ದಾರೆ, ಉರ್ದು ಪತ್ರಿಕೆಗಳಿವೆ, ಆ ಪತ್ರಿಕೆಗಳಿಗೂ ಜಾಹೀರಾತು ನೀಡಿದ್ದೇವೆ, ಉರ್ದು ಓದುವವರು ಬೆಂಗಳೂರು ಸೇರಿ ರಾಜ್ಯಾದ್ಯಂತ ಇದ್ದಾರೆ. ಎಲ್ಲರಿಗೂ ಯೋಜನೆಯಿಂದ ಪ್ರಯೋಜನವಾಗಬೇಕು” ಎಂದು ಹೇಳಿದ್ದಾರೆ.

ದಿನೇಶ್ ಗುಂಡೂರಾವ್ ಅವರ ಉತ್ತರವನ್ನು ಓಲೈಕೆ ರಾಜಕಾರಣವೆಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನು ವ್ಯಂಗ್ಯವಾಡಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ, “ಬಹುಶಃ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ, ಅಥವಾ ಉರ್ದುವೇ ಎಂದು ಅನುಮಾನ ಮೂಡಿದಂತಿದೆ. ಸರ್ಕಾರದ ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ ಹಾಕಿರುವುದು ಮಾತ್ರವಲ್ಲದೆ, ಇದನ್ನು ಉಡಾಫೆಯಿಂದ ಸಮರ್ಥಿಸಿರುವುದು ಸಚಿವರ ಬೇಜವಾಬ್ದಾರಿಯನ್ನು ತೋರಿಸಿದೆ. ಉರ್ದುವೂ ಒಂದು ಭಾಷೆ ತಾನೆ ಎಂದು ಇಲಾಖೆಯ ವತಿಯಿಂದ ಆಗಿರುವ ಪ್ರಮಾದವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಬಹುಶಃ ದಿನೇಶ್ ಗುಂಡೂರಾವ್ ಅವರಿಗೆ ಉರ್ದುವೂ ಒಂದು ಭಾಷೆ, ಕನ್ನಡವೂ ಒಂದು ಭಾಷೆ ಆಗಿರಬಹುದು. ಆದರೆ, ನಮಗೆ ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಅಸ್ಮಿತೆ, ನಮ್ಮ ತಾಯ್ನುಡಿ, ನಮ್ಮ ಬದುಕು. ಕನ್ನಡದ ಕುರಿತು ಯಾವುದೇ ಉಡಾಫೆಯ ಧೋರಣೆಯನ್ನು ನಾವು ಸಹಿಸಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.

ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಹಲವಾರು ಜಾಹೀರಾತುಗಳನ್ನು ಉರ್ದು ಭಾಷೆಯಲ್ಲಿ ನೀಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಆರೋಗ್ಯ ಯೋಜನೆ, ಕುಟುಂಬ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ನಾನಾ ಜಾಹೀರಾತುಗಳು ಉರ್ದು ಭಾಷೆಯಲ್ಲಿ ಪ್ರಕಟವಾಗಿದ್ದವು. ಆ ಜಾಹೀರಾತುಗಳು ಕೆಲವು ಚಿತ್ರಗಳು ಹೀಗಿವೆ;










