ಒಂದು ಕಡೆ ನರೇಂದ್ರ ಮೋದಿಯವರ ಅಭಿವೃದ್ಧಿ, ವಿಕಾಸ, ಇನ್ನೊಂದು ಕಡೆ ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯವನ್ನು ಗಮನಿಸಿ ಬಿಹಾರದ ಜನತೆ ಮುದ್ರೆಯನ್ನು ಒತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಿತೀಶ್ ಕುಮಾರ್ ಅವರು 20 ವರ್ಷಗಳ ಆಡಳಿತದ ಮೂಲಕ ಜನಮನದಲ್ಲಿದ್ದಾರೆ ಎಂದು ನುಡಿದರು. ಇದರಿಂದ ನಾವು (ಎನ್‍ಡಿಎ) 202 ಸೀಟುಗಳನ್ನು ಗೆದ್ದಿದ್ದೇವೆ” ಎಂದು ತಿಳಿಸಿದರು.
“ಕಾಂಗ್ರೆಸ್ಸಿನವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದಾರೆ. ಬುದ್ಧಿ ಭ್ರಮೆ ಆಗಿದೆ. ಇಡೀ ದೇಶದಲ್ಲಿ ಜನರು ಅವರನ್ನು ತಿರಸ್ಕರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಒಬ್ಬ ಅಪಕ್ವ ರಾಜಕಾರಣಿ” ಎಂದು ಟೀಕಿಸಿದರು.
“ದೇಶದಲ್ಲಿ ಧರ್ಮ ಮತ್ತು ಜಾತಿಗಳನ್ನು ಒಡೆಯುವುದರ ಮೂಲಕ ಜನರಲ್ಲಿ ವಿಷಬೀಜ ಬಿತ್ತಿ ಮತಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ಆಡಳಿತ ನಡೆಸುತ್ತ ಬಂತು. ಇದೀಗ ಜನತೆ ಇಂತಹ ಕಾಂಗ್ರೆಸ್ ಮತ್ತು ಅಪ್ರಬುದ್ಧ ರಾಜಕಾರಣಿಯನ್ನು ನಾಯಕನೆಂದು ಒಪುತ್ತಿಲ್ಲ. ಮತಗಳ್ಳತನ ಎಂಬುದು ಮಹಾನ್ ದೇಶದ್ರೋಹಿ ನಡವಳಿಕೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಾಂವಿಧಾನಿಕ ಸಂಸ್ಥೆಯಾದ ಚುನಾವಣೆ ಆಯೋಗವು 79 ವರ್ಷಗಳಲ್ಲಿ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಿದೆ. ಇದೇ ಕಾರಣಕ್ಕೆ 60 ವರ್ಷ ಕಾಂಗ್ರೆಸ್ಸಿನವರು ಆಡಳಿತ ಮಾಡಲು ಸಾಧ್ಯವಾಗಿದೆ” ಎಂದು ತಿಳಿಸಿದರು.





