ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಟೀಕಿಸಿದ್ದ ಆರೋಪದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ನಿವಾಸಿ, ಆರ್‌ಎಸ್‌ಎಸ್ ಕಾರ್ಯಕರ್ತ ತೇಜಸ್ ಎ ಎಂಬಾತ ಮೂವರ ವಿರುದ್ಧವೂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
2025ರ ಅಕ್ಟೋಬರ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಶಾಲಾ-ಕಾಲೇಜುಗಳ ಮೈದಾನಗಳು ಸೇರಿದಂತೆ ಸರ್ಕಾರಿ ಆವರಣದಲ್ಲಿ ಅನುಮತಿ ಪಡೆಯದೆ ನಡೆಸುವ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು. ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು.
ಈ ಲೇಖನ ಓದಿದ್ದೀರಾ?: ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್ ಸರದಿ?
ಆ ಪತ್ರ ಮತ್ತು ಪೋಸ್ಟ್ ಆಧರಿಸಿ ದೂರು ನೀಡಿರುವ ಆರ್‌ಎಸ್‌ಎಸ್ ಕಾರ್ಯಕರ್ತ ತೇಜಸ್, “ಪ್ರಿಯಾಂಕ್ ಖರ್ಗೆ ಅವರ ಪೋಸ್ಟ್ ಮತ್ತು ಪತ್ರದಲ್ಲಿ ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಲಾಗಿದೆ. ಅಲ್ಲದೆ, ಅವರ ಪೋಸ್ಟ್‌ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್ ಕೂಡ ಅದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ನಡಪಾಡ್ ಕೂಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂಘದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ, ನನಗೆ ತೀವ್ರವಾಗಿ ನೋವಾಗಿದೆ. ಇಂತಹ ಹೇಳಿಕೆಗಳು ಸಂಘದ ಕುರಿತು ಸಾರ್ವಜನಿಕರಲ್ಲಿ ಕೆಟ್ಟು ಅಭಿಪ್ರಾಯಗಳನ್ನು ರೂಪಿಸುತ್ತವೆ” ಎಂದು ಆರೋಪಿಸಿದ್ದಾರೆ.
ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯವು ಮೂವರಿಗೂ ಬಿಎನ್‌ಎಸ್‌ಎಸ್‌ನ ಸೆಕ್ಷನ್ 223ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಯಲ್ಲಿ 14ಕ್ಕೆ ಮುಂದೂಡಿಸಿದ್ದು, ಅಂದು ಸಚಿವರು ವಿಚಾರಣೆಗೆ ಹಾಜರಾಗುಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.




