ದರೋಡೆ ಮಾಡುವವರಿಗೆ ಕರ್ನಾಟಕ ಒಂದು ರೀತಿ ಸ್ವರ್ಗವಾಗಿದೆ. ಒಂದು ಕಡೆ ಕಾಂಗ್ರೆಸ್ಸಿಗರಿಂದ ಹಗಲುದರೋಡೆ, ಇಲ್ಲಿ ಡಕಾಯಿತರಿಂದ ರೋಡಲ್ಲೇ ಹಗಲು ದರೋಡೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿ, “ಬ್ರಾಂಡ್ ಬೆಂಗಳೂರಿನ ಮತ್ತೊಂದು ಅವತಾರ ಬೆಂಗಳೂರು ದರೋಡೆಗಳ ನಗರ ಆಗುತ್ತಿದೆ. ಬೆಂಗಳೂರಿನಲ್ಲಿ 7 ನಿಮಿಷದಲ್ಲಿ 7 ಕೋಟಿ ಮೊತ್ತದ ದರೋಡೆ ನಡೆದಿದೆ. ಇದು ಕರ್ನಾಟಕ ಸರಕಾರದ ಹೊಸ ಸ್ಕೀಂ; ಇದು 5 ಗ್ಯಾರಂಟಿಗಳಂತಿದೆ. 7 ನಿಮಿಷದಲ್ಲಿ 7 ಕೋಟಿ ಪಡೆಯುವುದು ಹೇಗೆಂದು ಸರಕಾರವು ಜನರಿಗೆ ತೋರಿಸಿದೆ” ಎಂದು ಲೇವಡಿ ಮಾಡಿದರು.
“ಜನರು ಭಯಭೀತರಾಗಿದ್ದು, ಬ್ಯಾಂಕ್‍ಗಳ ಬಳಿ ಹೋಗಲು ಆತಂಕಪಡುತ್ತಿದ್ದಾರೆ. ಹಾಡಹಗಲಲ್ಲೇ ಇದು ಸಾಧ್ಯವೇ? ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿ.ಸಿ.ಟಿವಿ ಕ್ಯಾಮೆರಾಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಜನ ಪೊಲೀಸರಿದ್ದಾರೆ. ಕಮೀಷನರ್ ಕಚೇರಿ, ಮನೆ, ಡಿ.ಜಿ. ಕಚೇರಿ, ಮನೆ ಇಲ್ಲೇ ಇದೆ. ಮುಖ್ಯಮಂತ್ರಿಗಳ ಮನೆ, ಸ್ಪೆಷಲ್ ವ್ಯಕ್ತಿ, ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮನೆ ಕೂಡ ಇಲ್ಲೇ ಇದೆ” ಎಂದರು.
“ಒಂದು ಕಡೆ ಕಾಂಗ್ರೆಸ್ಸಿನವರ ಹಗಲುದರೋಡೆ, ಇಲ್ಲಿ ಡಕಾಯಿತರಿಂದ ರೋಡಲ್ಲೇ ಹಗಲು ದರೋಡೆ. ಇದು ಕಾಕತಾಳೀಯ ಎಂಬಂತಿದೆ. ಡಿ.ಕೆ.ಶಿವಕುಮಾರ್ ಟನೆಲ್ ರಸ್ತೆಯ ಪಾಯಿಂಟ್‍ನಲ್ಲೇ ಇದಾಗಿದೆ. ಅದೂ ಕಾಕತಾಳೀಯ ಅನಿಸುತ್ತದೆ. ದರೋಡೆ ಮಾಡುವವರಿಗೆ ಕರ್ನಾಟಕ ಒಂದು ರೀತಿ ಸ್ವರ್ಗವಾಗಿದೆ” ಎಂದು ಕಿಡಿ ಕಾರಿದರು.
“ಬೀದರ್, ಮಂಗಳೂರು ಬಳಿಕ ಈಗ ಬೆಂಗಳೂರಿಗೆ ಬಂದಿದೆ. ಅಲ್ಲಿ ಕೈಚಳಕ ತೋರಿಸುವುದೇನು? ಎಂಬಂತೆ ರಾಜಧಾನಿ ಬೆಂಗಳೂರಿನಲ್ಲಿ ಕೈಚಳಕ ತೋರಿಸಿದ್ದಾರೆ. ಸರಕಾರ ಸತ್ತು ಹೋಗಿದೆ ಎಂದು ಜನರು ತಿಳಿದುಕೊಂಡಿದ್ದಾರೆ. ಸರಕಾರ, ಪೊಲೀಸರ ಭಯ ಇದ್ದಿದ್ದರೆ, ದರೋಡೆ ಮಾಡಿದರೆ ಗುಂಡು ಹಾಕುವ, ಶಿಕ್ಷೆಯ ಭಯ ಇದ್ದಲ್ಲಿ ಹೀಗೆ ಮಾಡುತ್ತಿರಲಿಲ್ಲ” ಎಂದು ವಿಶ್ಲೇಷಿಸಿದರು.
“ಕುರ್ಚಿ ಗಲಾಟೆಗಾಗಿ ಮಂತ್ರಿಗಳು, ಮುಖ್ಯಮಂತ್ರಿ ಎಲ್ಲರೂ ದೆಹಲಿ ಕಡೆ ಮುಖ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿದೆ; ಸತ್ತು ಹೋಗಿದೆ. 24 ಗಂಟೆಯಲ್ಲಿ ಬಂಧಿಸಬೇಕು; ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ. ಆಗಲೇ ದರೋಡೆ ಆಗಿ 24 ಗಂಟೆ ಮುಗಿದು 26 ಗಂಟೆ ಆಗಿದೆ. ಸುಳಿವೆಲ್ಲ ಸಿಕ್ಕಿದ್ದರೆ ಯಾಕೆ ಬಂಧಿಸಿಲ್ಲ” ಎಂದು ಪ್ರಶ್ನಿಸಿದರು.





