ಸತ್ಯ, ಶಾಂತಿ, ಸೌಹಾರ್ದತೆ, ನ್ಯಾಯ-ನೀತಿಯ ಪ್ರತಿರೂಪವಾಗಿ ಬಾಳಿ ಬದುಕಿದ್ದ ಮಹಾತ್ಮಾ ಗಾಂಧಿಯವರ ಎದೆಗೆ ಗುಂಡಿಕ್ಕಿ ಕೊಂದ ಸಂತತಿಯವರೇ ಇಂದು ದೇಶದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಎದೆಗೆ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎಂದು ಘೋಷಿಸುತ್ತಿರುವುದು ಬಿಜೆಪಿಯ ಕೊಲೆಗಡುಕ ಸಂಸ್ಕೃತಿಯ ಮುಖವಾಡಕ್ಕೆ ಹಿಡಿದ ಕೈಗನ್ನಡಿ ಎಂದು ಎಐಸಿಸಿ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಎದೆಗೆ ಗುಂಡಿಟ್ಟು ಹೊಡೆಯುತ್ತೇವೆ ಎಂದು ಹೇಳುವ ಮೂಲಕ ಕೇರಳ ಬಿಜೆಪಿ ಮಾಧ್ಯಮ ವಕ್ತರ ಪಿಂಟು ಮಹಾದೇವನ್ ಕೊಲೆ ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿ ಬಿ ಕೆ ಹರಿಪ್ರಸಾದ್ ಅವರು ಎಕ್ಸ್ ತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ದೇಶದ ಕೋಟ್ಯಂತರ ಜನರ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಈಗಾಗಲೇ ಬಿಜೆಪಿಯ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ. ಈಗ ಪಕ್ಷದ ವಕ್ತಾರರೇ ಖಾಸಗಿ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿಯೇ ” ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ಮಾತಾಡಿದರೆ ಗುಂಡು ಹಾರಿಸುತ್ತೇವೆ” ಎಂದು ಹೇಳಿಕೆ ನೀಡುವುದು ರಾಹುಲ್ ಗಾಂಧಿಯವರ ವಿರುದ್ಧ ಗಂಭೀರವಾಗಿ ಭಾರಿ ಪಿತೂರಿ ನಡೆಸಿರುವುದು ಸ್ಪಷ್ಟವಾಗುತ್ತಿದೆ” ಎಂದಿದ್ದಾರೆ.
“ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕರು ಕೊಲೆಗೆ ಪ್ರಚೋದನೆ ನೀಡುವುದು ಬಾಯಿ ತಪ್ಪಿನಿಂದಲ್ಲ, ಬಿಜೆಪಿಯ ಉದ್ದೇಶ ಬಹಿರಂಗಗೊಂಡಿದೆ. ಇಂತಹ ಅಪಾಯವನ್ನು ದೇಶದ ಪ್ರತಿಯೊಬ್ಬ ನಾಯಕರು ಖಂಡಿಸಬೇಕಿದೆ. ದೇಶದ ವಿರೋಧ ಪಕ್ಷದ ನಾಯಕರನ್ನೇ ಬಹಿರಂಗವಾಗಿ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎನ್ನುವುದು ಬಿಜೆಪಿಯ ದ್ವೇಷಮಯ ರಾಜಕೀಯದ ಪರಮಾವಧಿ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಕೂಡಲೇ ಬಿಜೆಪಿ ಪಕ್ಷ ಕೊಲೆ ಹೇಳಿಕೆ ನೀಡಿರುವ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಲಿ” ಎಂದು ಆಗ್ರಹಿಸಿದ್ದಾರೆ.





