- ಕಬ್ಬು ಬೆಳೆಗಾರರ ಪರವಾಗಿ ಸತತ 7 ಗಂಟೆ ಸಭೆ ನಡೆಸಿ ರೈತರ ಪರವಾಗಿ ರಾಜ್ಯ ಸರ್ಕಾರ ನಿರ್ಧಾರ
- DC ಜೊತೆಗಿನ ಒಪ್ಪಂದದಂತೆ 3,200 ರೂ. ಜೊತೆಗೆ 100 ರೂ. ಸೇರಿಸಿ 3,300 ರೂ. ಕೊಡಲು ತೀರ್ಮಾನ
ಕಬ್ಬು ಹೋರಾಟಗಾರರು ಪ್ರತಿ ಟನ್‌ಗೆ 3,500 ರೂ. (ಸಾರಿಗೆ ವೆಚ್ಚ ಬಿಟ್ಟು) ಕೊಡಲು ಆಗ್ರಹಿಸುತ್ತಿರುವ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಟನ್ ಕಬ್ಬಿಗೆ 3,300 ರೂ. ಕೊಡಲು ನಿರ್ಧರಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಮತ್ತು ರೈತ ಸಂಘಟನೆಗಳ ಪರವಾಗಿ ಶುಕ್ರವಾರ ಸತತ 7 ಗಂಟೆಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಅವರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದರು.
“ಸಕ್ಕರೆಗೆ ಎಮ್ಎಸ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್ಆರ್‌ಪಿ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ. ಹೀಗಿರುವಾಗ ಅವರಿಂದ ಆಗಿರುವ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೇಳಿದರೆ ಹೇಗೆ” ಎಂದು ಸಿದ್ದರಾಮಯ್ಯ ಅವರು ಸಭೆಯಲ್ಲಿ ರೈತ ಮುಖಂಡರಿಗೆ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್‌ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು.
“FRP ದರ ನಿಗದಿ ಮಾಡುವಾಗ ಕೇಂದ್ರ ಅವೈಜ್ಞಾನಿಕ ಕ್ರಮ ಅನುಸರಿಸಿದೆ. ಉತ್ಪಾದನಾ ವೆಚ್ಚ ಹಿಂದಿನ ವರ್ಷಗಳಿಗಿಂತ 4 ಸಾವಿರ ಕಡಿಮೆ ತೋರಿಸಿದ್ದಾರೆ. ಇದ್ಯಾವ ಲೆಕ್ಕಾಚಾರ” ಎಂದು ರೈತ ಮುಖಂಡರು ಪ್ರಶ್ನಿಸಿದರು.
ಅಕ್ಟೋಬರ್ 30ರಿಂದ ಬೆಳಗಾವಿ ರೈತರು ಕೇಂದ್ರ ಸರ್ಕಾರದ FRP ದರ ವಿರೋಧಿಸಿ ಇನ್ನೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದರು. ಇಂದಿನ ಸಭೆಯಲ್ಲಿ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50 ರೂ. ಸೇರಿಸಿ ರೈತರಿಗೆ ಪ್ರತಿ ಟನ್‌ಗೆ 3,300 ರೂ. ಕೊಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಪ್ರತಿಭಟನಾ ನಿರತ ರೈತ ಮುಖಂಡರ ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದರು. ಈ ವೇಳೆ 10.25 ಇಳುವರಿ ಇರುವ ಕಬ್ಬಿಗೆ 3,100 ರೂ, 11.25 ಇಳುವರಿ ಕಬ್ಬಿಗೆ 3,200 ರೂ. ಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದಕ್ಕೆ ರೈತರು ಒಪ್ಪಿರಲಿಲ್ಲ. ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಸಚಿವರನ್ನು ಮಾತುಕತೆಗೆ ಕಳುಹಿಸಿದ್ದರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ರೈತರ ಜೊತೆ ಸಂಧಾನ ನಡೆಸಿದ್ದರು. ಆದರೂ ರೈತರು ಒಪ್ಪಿರಲಿಲ್ಲ. ಬಳಿಕ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜೊತೆ ಚರ್ಚೆ ನಡೆಸುವ ಜೊತೆಗೆ ಸಮಸ್ಯೆ ಸೃಷ್ಟಿಸಿರುವ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದರು.
ಶುಕ್ರವಾರ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳಿಂದ ಆಗಿರುವ ನಷ್ಟ ಮತ್ತು ಸಮಸ್ಯೆಗಳನ್ನೂ ಸಿಎಂ ಮುಂದೆ ವಿವರಿಸಿದ್ದಾರೆ. ಕೇಂದ್ರದಿಂದ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಬಳಿ ನಿಯೋಗ ಹೋಗಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಿಕವರಿ ರೇಟ್‌ನಿಂದ ಬೆಳೆಗಾರರಿಗೆ ಅನ್ಯಾಯ
ಕೇಂದ್ರ ಸರ್ಕಾರ ನಿರ್ಧರಿಸಿರುವ ಇಳುವರಿ ಪ್ರಮಾಣದಿಂದಲೇ (ರಿಕವರಿ ರೇಟ್) ರೈತರಿಗೆ ಅನ್ಯಾಯವಾಗುತ್ತಿದೆ. ಇಳುವರಿ ಪ್ರಮಾಣ ಎಂದರೆ ನಿರ್ದಿಷ್ಟ ತೂಕದ ಕಬ್ಬಿನ ಅರೆಯುವಿಕೆಯಿಂದ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣ. ಅಂದರೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕರೆ ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ.10 ಆಗುತ್ತದೆ. ಕೇಂದ್ರ ಸರ್ಕಾರವು 2025-26ನೇ ಸಾಲಿಗೆ ಟನ್ ಕಬ್ಬಿಗೆ ಎಫ್ಆರ್‌ಪಿ (₹3,550) ನಿಗದಿ ಪಡಿಸುವಾಗ ಇಳುವರಿ ಪ್ರಮಾಣದ ಮಿತಿ ಶೇ. 10.25 ಇರಬೇಕು ಎಂದು ಹೇಳಿದೆ. ಇದರ ಅರ್ಥ ಸಾವಿರ ಕೆ.ಜಿ ಕಬ್ಬು ಅರೆದಾಗ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕು. ಅದಕ್ಕಿಂತ ಕಡಿಮೆ ಸಕ್ಕರೆ ಉತ್ಪಾದನೆಯಾದರೆ ಟನ್ ಕಬ್ಬಿಗೆ ₹3,555 ದರ ಸಿಗುವುದಿಲ್ಲ.
ಆದರೆ, ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳು ಇಳುವರಿ ಪ್ರಮಾಣದ ಮಿತಿಯನ್ನೂ ಏರಿಸುವ ಮೂಲಕ ರೈತರಿಗೆ ಲಾಭ ಸಿಗದಂತೆ ಮಾಡಿವೆ. ಇದು ರೈತರನ್ನು ಕೆಂಗೆಡಿಸಿದೆ. ಈ ಅನ್ಯಾಯ ಸಹಿಸಲಾರದೇ ಈ ಬಾರಿ ರೈತರು ನಿರ್ಣಾಯಕ ಹೋರಾಟಕ್ಕೆ ಧುಮುಕಿದ್ದಾರೆ. ಪ್ರತಿ ಟನ್‌ಗೆ ₹3,500 ದರ ಕೊಡಲೇಬೇಕು (ಸಾರಿಗೆ ವೆಚ್ಚ ಬಿಟ್ಟು) ಹಾಗೂ ಇಳುವರಿ ಪ್ರಮಾಣದ (ರಿಕವರಿ ರೇಟ್) ಮಿತಿಯನ್ನೂ ಶೇ 9.5ಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯಿಂದ ಜಿಲ್ಲೆಗೆ ಪ್ರತ್ಯೇಕ ದರ
“ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ರಾಜ್ಯದಲ್ಲಿ ಕಳೆದ ವರ್ಷ 5.6 ಕೋಟಿ ಮೆ.ಟನ್ ಸಕ್ಕರೆ ಉತ್ಪಾದಿಸಲಾಗಿದ್ದು, ಈ ವರ್ಷ ಸುಮಾರು 6 ಕೋಟಿಗೂ ಹೆಚ್ಚು ಮೆ.ಟನ್ ಉತ್ಪಾದನೆ ಅಂದಾಜಿಸಲಾಗಿದೆ. ಇಂದಿನ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗುವಂತೆ ಕಟಾವು ಮತ್ತು ಸಾಗಾಟ ವೆಚ್ಚಕ್ಕೆ ಹೊರತುಪಡಿಸಿ, 11.25 ರಿಕವರಿ ಕಬ್ಬಿಗೆ 3,250 ರೂ. ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ 50 ರೂ. ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಬೆಳಗಾವಿ ಜಿಲ್ಲಾಧಿಕಾರಿ ಅವರು ಅಂತಿಮಗೊಳಿಸಿದ್ದ ದರಕ್ಕಿಂತ 100 ರೂ. ಹೆಚ್ಚಾಗಿದೆ. ಇದಕ್ಕೆ ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆ ಮಾಲಿಕರು ಒಪ್ಪಿಗೆ ಸೂಚಿಸಿದ್ದಾರೆ. ರಿಕವರಿ ದರಕ್ಕೆ ಅನುಗುಣವಾಗಿ ಜಿಲ್ಲೆಯಿಂದ ಜಿಲ್ಲೆಗೆ ಪ್ರತ್ಯೇಕ ದರ ನಿಗದಿಪಡಿಸಲಾಗುವುದು” ಎಂದು ಸಿಎಂ ಸಭೆ ಬಳಿಕ ಹೇಳಿದರು.
“ಸಕ್ಕರೆ ಎಂಎಸ್‌ಪಿ ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೇಂದ್ರಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಕರೆದುಕೊಂಡು ಹೋಗಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.
ಸದ್ಯಕ್ಕೆ ಸರ್ಕಾರದ ತೀರ್ಮಾನ ಒಪ್ಪದ ರೈತರು
ಬೆಳಗಾವಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಮುಖಂಡರು ಸದ್ಯಕ್ಕೆ ಸರ್ಕಾರದ ತೀರ್ಮಾನವನ್ನು ಒಪ್ಪಿಕೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ರೈತರು ಸಭೆ ನಡೆಸುತ್ತಿದ್ದು, ಅಂತಿಮ ತೀರ್ಮಾನವನ್ನು ಶನಿವಾರ ತಿಳಿಸುವ ಸಾಧ್ಯತೆ ಇದೆ.





