ಧರ್ಮಸ್ಥಳದಲ್ಲಿ ವ್ಯಕ್ತಿಯೊಬ್ಬರು ತಾನು ಹೂತಿದ್ದ ನೂರಾರು ಕಳೇಬರಗಳನ್ನು ತೆಗೆಯುತ್ತೇನೆಂದು ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಶೇಷ ತನಿಖಾ ತಂಡ ಹಾಗೂ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಎರಡನೇ ದಿನ ಅಗೆತ ಕಾರ್ಯ ಮುಂದುವರೆದಿದೆ. ಎಸ್‌ಐಟಿ ಅಧಿಕಾರಿ ಅನುಚೇತ್ ಸೇರಿದಂತೆ ಹಲವಾರು ಅಧಿಕಾರಿಗಳು ಸ್ಥಳದಲ್ಲಿ ನಿಂತು ಅಗೆತ ಕಾರ್ಯವನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಧರ್ಮಸ್ಥಳದ ಅಸಹಜ ಸಾವುಗಳಿಗೆ ಸಂಬಂಧಿಸಿದ ದೇಹಗಳನ್ನು ತಾನೇ 15 ವರ್ಷಗಳ ಹಿಂದೆ ಮಣ್ಣುಮಾಡಿದ್ದಾಗಿ ಹೇಳಿಕೊಂಡ ʼವ್ಯಕ್ತಿಯೊಬ್ಬರುʼ ತೋರಿಸಿದ ಜಾಗದಲ್ಲಿ ನಿನ್ನೆಯಿಂದ ಅಗೆತ ಶುರುವಾಗಿದೆ. ನಿನ್ನೆ ಯಾವುದೇ ದೇಹದ ಮೂಳೆ ತಲೆಬುರುಡೆಗಳು ಸಿಕ್ಕಿರಲಿಲ್ಲ. ಈ ವರೆಗೆ ತಾನು ದೇಹಗಳನ್ನು ಹೂತಿರುವ 20ಕ್ಕೂ ಹೆಚ್ಚು ಜಾಗಗಳನ್ನು ವ್ಯಕ್ತಿಯು ಎಸ್‌ಐಟಿ ತಂಡಕ್ಕೆ ತೋರಿಸಿದ್ದು ಅವುಗಳಿಗೆ ನಂಬರ್ ನೀಡಿ ಗುರುತು ಮಾಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಎರಡನೇ ದಿನಾದ ಇಂದು ಅಗೆಯುತ್ತಿರುವ ಜಾಗದಿಂದಲೇ ಆ ವ್ಯಕ್ತಿಯು ತಲೆಬುರುಡೆಯೊಂದನ್ನು ಎತ್ತಿಕೊಂಡು ಹೋಗಿ ಪೊಲೀಸರ ಎದುರು ಹಾಜರುಪಡಿಸಿದ್ಧಾರೆ ಎನ್ನಲಾಗಿದೆ. ಅಲ್ಲದೆ ಅದೇ ಜಾಗದಲ್ಲಿ ಇನ್ನೂ ಐದಾರು ಹೆಣ್ಣುಮಕ್ಕಳ ದೇಹಗಳನ್ನು ಹೂಳಲಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಕಾರಣದಿಂದ ಇಂದು ಬೆಳಿಗ್ಗೆ 8 ಗಂಟೆಯಿಂದಲೇ ನಡೆಯುತ್ತಿರುವ ಅಗೆತ ಬಹಳ ಕುತೂಹಲ ಹುಟ್ಟಿಸಿದೆ.
ನಿನ್ನೆ ಇಡೀ ದಿನ ಒಂದು ಜಾಗದಲ್ಲಿ ಅಗೆತ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಜೆಸಿಬಿ ಯಂತ್ರಗಳನ್ನು ಸಹ ತರಿಸಿ ಅಗೆಸಿಲಾಗಿತ್ತು. ಆದರೆ ಯಾವುದೇ ಕಳೇಬರದ ಅವಶೇಷಗಳು ಸಿಕ್ಕಿರಲಿಲ್ಲ. ʼವ್ಯಕ್ತಿʼಯು ಗುರುತು ಮಾಡಿರುವ ಎಲ್ಲ ಕಡೆಗಳಲ್ಲಿ ಎಸ್‌ಐಟಿ ಅಗೆತವನ್ನು ಅಗೆತವನ್ನು ನಡೆಸಲಿದ್ದು ಇಡೀ ರಾಜ್ಯವೇ ಇತ್ತ ಕುತೂಹಲದಿಂದ ಏನು ನಡೆಯುತ್ತದೆ ಎಂದು ಇದಿರು ನೋಡುತ್ತಿದೆ. ಇನ್ನು ಅಗೆತ ನಡೆಯುತ್ತಿರುವ ಜಾಗದ ಸುತ್ತಮುತ್ತ ಸ್ಥಳೀಯರು, ಹೊರ ಊರುಗಳ ಜನರು ಸಾವಿರಾರು ಸಂಖ್ಯೆಯಲ್ಲಿ ನೆರೆದು ದೂರದಿಂದಲೇ ವೀಕ್ಷಿಸುತ್ತಿದ್ದಾರೆ.





