ಧರ್ಮಸ್ಥಳದಲ್ಲಿ ಸಂಭವಿಸಿರುವ 74 ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ಜನವರಿಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ಎಸ್‌ಐಟಿ ತನಿಖೆಗೆ ಸೂಚಿಸಬೇಕು ಎಂದು ಆಗ್ರಹಿಸಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮಾವತಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ 74 ಅಸಹಜ ಸಾವು | ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್: ಮತ್ತೆ ಮೂಡಿದ ಭರವಸೆಯ ಕಿರಣ
ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಪೀಠವು ನಡೆಸಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎಸ್ ಬಾಲನ್ ವಾದ ಮಂಡಿಸಿದ್ದಾರೆ. ಬಾಲನ್ ವಾದ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು “ಎಲ್ಲಾ 74 ಪ್ರಕರಣಗಳ ತನಿಖೆ ಏನೇನಾಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಿ” ಎಂದು ಸರ್ಕಾರಕ್ಕೆ ಆದೇಶಿಸಿದೆ.
“74 ಅಸಹಜ ಸಾವು ಪ್ರಕರಣಗಳಲ್ಲಿ ಯುಡಿಆರ್ ದಾಖಲು ಮಾಡುವಾಗ ಸರಿಯಾಗಿ ನಿಯಮ ಪಾಲಿಸಿಲ್ಲ. ಹೆಣಗಳನ್ನು ಸುಟ್ಟು ಹಾಕಲಾಗಿದೆ. ಮರಣೋತ್ತರ ಪರೀಕ್ಷೆಯನ್ನೂ ನಡೆಸಿಲ್ಲ. ಶರಾವತಿ ಲಾಡ್ಜ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿಯೂ ಅಸಹಜ ಸಾವು ವರದಿ ದಾಖಲಿಸಿ ಹೆಣವನ್ನು ಸುಟ್ಟು ಹಾಕಿದ್ದಾರೆ. ಪೊಲೀಸರ ಮನವಿ ಮೇರೆಗೆ ಗ್ರಾಮ ಪಂಚಾಯತ್ ಎಲ್ಲಾ ಅಸಹಜವಾಗಿ ಸಾವನ್ನಪ್ಪಿದವರ ಶವಗಳನ್ನು ಸುಟ್ಟು ಹಾಕಿದೆ. ಆ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆ ಇದೆ” ಎಂದು ಬಾಲನ್ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.
“ಕೊಲೆ ಪ್ರಕರಣ ದಾಖಲಿಸದೆಯೇ ಯುಡಿಆರ್ ದಾಖಲಿಸಿದ್ದಾರೆ. ಶವದ ವಿಡಿಯೋ ಮಾಡಿಲ್ಲ, ಛಾಯಾಚಿತ್ರವೂ ತೆಗೆದಿಲ್ಲ. ಸಂಬಂಧಿಕರ ಪತ್ತೆಗೆ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ. ಶರಾವತಿ ಲಾಡ್ಜ್‌ನಲ್ಲಿ ನಡೆದ ಕೊಲೆ ಸಂಬಂಧ ಲಾಡ್ಜ್ ಮಾಲೀಕರನ್ನು ವಿಚಾರಣೆ ನಡೆಸಿಲ್ಲ. ಲಾಡ್ಜ್ ಮತ್ತು ನದಿ ಬದಿಯಲ್ಲಿ ಪದೇ ಪದೇ ಶವ ಪತ್ತೆಯಾದರೂ ಲಾಡ್ಜ್ ಮಾಲೀಕರು ಮತ್ತು ಶವ ಪತ್ತೆಯಾದ ಜಮೀನು ಮಾಲೀಕರಿಗೆ ಒಂದೇ ಒಂದು ನೋಟಿಸ್ ನೀಡಿಲ್ಲ” ಎಂದೂ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದಾರೆ.
ಎಲ್ಲಾ ವಾದ ಆಲಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ವಿಸ್ತೃತ ಆದೇಶ ಹೊರಡಿಸಿದ್ದಾರೆ. “ಶವ ಪತ್ತೆಯಾದಾಗ ಮರಣೋತ್ತರ ಪರೀಕ್ಷೆ ಮಾಡಿದ್ದೀರಾ? ನಾಪತ್ತೆಯಾದವರ ಪತ್ತೆಗೆ ಏನು ಕ್ರಮ ತೆಗೆದುಕೊಂಡಿದ್ದೀರಿ? ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಿ” ಎಂದು ಸರ್ಕಾರಕ್ಕೆ ಆದೇಶಿಸಿದ್ದಾರೆ.





