ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಾಧೀಶ ವಿಜಯ ಕುಮಾರ್ ರೈ ಬಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಕುಮಾರ್ ಅವರು ಈ ಹಿಂದೆ ರಾಜ್ಯಸಭಾ ಸಂಸದ ಮತ್ತು ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಆದೇಶ ಹೊರಡಿಸಿದ್ದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ನ್ಯಾಯಾಧೀಶ ವಿಜಯ ಕುಮಾರ್ ರೈ ಬಿ ಮತ್ತು ಅರ್ಜಿದಾರರಾದ ಹರ್ಷೇಂದ್ರ ಕುಮಾರ್ ಅವರ ಕುಟುಂಬದ ನಡುವಿನ ಸಂಬಂಧವನ್ನು ಪತ್ರಕರ್ತ ನವೀನ್ ಸೂರಿಂಜೆ ಅವರು ಪ್ರಶ್ನಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ: ಮುಂದುವರೆದ ಕಾರ್ಯಾಚರಣೆ, ಪಾಯಿಂಟ್ ನಂಬರ್ ಎಂಟರಲ್ಲಿ ಶೋಧ
ಬೆಂಗಳೂರಿನ 10ನೇ ಹೆಚ್ಚುವರಿ ನಗರ ಮತ್ತು ಸಿವಿಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಜಯ ಕುಮಾರ್ ರೈ ಬಿ ಅವರು ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಸಲ್ಲಿಸಿದ ಪ್ರಕರಣವನ್ನು ಪ್ರಧಾನ ನಗರ ಸಿವಿಲ್ ಸೆಷನ್ಸ್ ನ್ಯಾಯಾಧೀಶರ ಮುಂದೆ ಇರಿಸಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಲಯದ ಮೊರೆ ಹೋಗಿದ್ದ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು, ವಿಜಯ ಕುಮಾರ್ ಅವರು 1995ರಿಂದ 1998 ರವರೆಗೆ ಧರ್ಮಸ್ಥಳ ಆಡಳಿತ ಮಂಡಳಿ ನಡೆಸುತ್ತಿದ್ದ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಹಾಗೆಯೇ ಅರ್ಜಿದಾರರ ಕುಟುಂಬದ ಪರವಾಗಿ ಹಾಜರಾದ ಮತ್ತೊಬ್ಬ ಹಿರಿಯ ವಕೀಲರ ಅಡಿಯಲ್ಲಿ ಈ ನ್ಯಾಯಾಧೀಶರು ಕಾನೂನು ಅಭ್ಯಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಈ ಸಂಬಂಧ ವಕೀಲರಿಗೆ ಪತ್ರ ಬರೆದಿದ್ದರು.





