ಬೇಸಿಗೆಯು ಕಠಿಣ ಪರಿಸ್ಥಿತಿಯನ್ನು ತಂದೊಡ್ಡುವ ಮುನ್ನವೇ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ. ಕುಡಿಯುವ ನೀರಿನ ಸವಾಲನ್ನು ಸಮರ್ಥವಾಗಿ ಎದುರಿಸಲು ಸಮರೋಪಾದಿಯಲ್ಲಿ ತಯಾರಿ ನಡೆಸುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದ್ಯತೆಯಾಗಿ ಪರಿಗಣಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಂದಿನ ಮೂರು ತಿಂಗಳು ಪ್ರತಿ ತಿಂಗಳಿನ 2ನೇ ಹಾಗೂ 4ನೇ ಸೋಮವಾರದಂದು ಪಂಚಾಯತ್ ಅಭಿವೃದ್ಧಿ ಅಧಿಕಾರಗಳ ಕುಡಿಯುವ ನೀರಿನ ಸಮಸ್ಯೆ ಕುರಿತ ವಸ್ತು ಸ್ಥಿತಿಯ ಬಗ್ಗೆ ಸಭೆ ನಡೆಸಬೇಕು ಹಾಗೂ ಆಯಾ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕೆಂಬುದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ 24/7 ನಿಯಂತ್ರಣ ಕೊಠಡಿಗಳನ್ನು ತೆರೆದು, ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಾನಿರ್ವಾಹಕ ಅಧಿಕಾರಿಗಳ ಮುಖಾಂತರ ಕ್ಷಿಪ ಕಾರ್ಯಪಡೆಯನ್ನು ರಚಿಸಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನೀರಿನ ಮೂಲಗಳ ಸುರಕ್ಷತೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹಾಗೂ ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಪರಿಶೀಲನೆ ನಡೆಸಿ, ಕೊಳವೆಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಹಾಗೂ ಕಲುಷಿತ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕೈಗೊಂಡು, ಕೊಳವೆಬಾವಿ ಸುತ್ತ ಕಾಂಕ್ರೀಟ್ ಕಟ್ಟೆಯನ್ನು ಕಟ್ಟಿ, ಕಲುಷಿತ ನೀರು ಕೊಳವೆಬಾವಿಗೆ ಸೇರದಂತೆ ಮುಂಜಾಗ್ರತೆ ವಹಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!





