“ರಾಷ್ಟ್ರ-ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದಕ್ಕಿಂತ ಮತ್ತೊಂದು ಮುಂದೆ ಓಡಲು ನೋಡುತ್ತಿವೆ. ಮೊದಲ ಮತ್ತು ಎರಡನೇ ಜಗತ್ತಿನ ರಾಷ್ಟ್ರಗಳಂತೆ ನಾವಾಗಬೇಕು ಎಂಬ ಉಪಭೋಗ ಸಂಸ್ಕೃತಿಯನ್ನು 3ನೇ ಜಗತ್ತಿನ ರಾಷ್ಟ್ರಗಳ ಸರ್ಕಾರಗಳು ಜನರಲ್ಲಿ ತುಂಬುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ವಿನಾಶದತ್ತ ಕೊಂಡೊಯ್ಯುತ್ತಿವೆ” ಎಂದು ಪರಿಸರ ಚಿಂತಕ ಕೆ.ಪಿ ಸುರೇಶ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೂರ್ಣಚಂದ್ರ ಕನ್ನಡ ಆಧ್ಯಯನ ಕೇಂದ್ರ ಮತ್ತು ಉಳುಮೆ ಪ್ರತಿಷ್ಠಾನ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. “ಸರ್ಕಾರಗಳು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದನ್ನು ಎದುರಿಸಲಿ, ನಾನಾ ಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಿದೆ ಎನ್ನುತ್ತಿವೆ. ಆದರೆ, ಅವೆಲ್ಲವೂ ಕಡತಗಳಲ್ಲಿಯೇ ಉಳಿದಿವೆ. ಕ್ಲೈಮೇಟ್ ಚೇಂಜ್ ಎಂಬುದು ಮೋಸ, ಸ್ಕಾಮ್ ಎಂದು ಕೆಲವು ಆಳುವವರು ಕರೆಯುತ್ತಾರೆ. ಇಂತಹ ಆಳುವವರಿಂದ ಪರಿಸರ ಕುರಿತಾದ ಕಾಳಜಿ ಹೇಗೆ ಸಾಧ್ಯ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಭಾರತ ವರ್ಷಕ್ಕೆ 3 ಬಿಲಿಯನ್ ಟನ್‌ಗಳನ್ನು (ತಲಾ 2 ಟನ್) ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಿದೆ. ಹಸಿರುಮನೆ ಅನಿಲ ಬಿಡುಗಡೆಯಲ್ಲಿ ಭಾರತವು ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ಚೀನಾ 27% ಹಸಿರು ಮನೆ ಅನಿಲವನ್ನು ಹೊರಸೂಸಿತ್ತಿದ್ದರೆ, ಅಮೆರಿಕ 11% ಮತ್ತು ಭಾರತ 6.6%ರಷ್ಟು ಹೊರಹಾಕುತ್ತಿದೆ” ಎಂದು ವಿವರಿಸಿದರು.
“2030ರ ವೇಳೆಗೆ ಭಾರತವು 6 ಬಿಲಿಯನ್ ಇಂಗಾಲವನ್ನು ಹೊರಸೂಸಬಹುದು. ಭಾರತದಲ್ಲಿ ಇಂಧನ ಉತ್ಪಾದನೆಯಲ್ಲಿ ಬಳಸಲಾಗುವ 60% ಪಳೆಯುಳಿಕೆ ಇಂಧನದಲ್ಲಿ 50% ಕಲ್ಲಿದ್ದಲು ಬಳಕೆಯಾಗುತ್ತಿದೆ. ಜೊತೆಗೆ, ಸೆಮೆಂಟ್ ಮತ್ತು ಉಕ್ಕು ರೀತಿಯ ಕೈಗಾರಿಕಾ ಕ್ಷೇತ್ರವು 25% ಹಸಿರು ಮನೆ ಅನಿಲವನ್ನು ಹೋರಸೂಸುತ್ತದೆ. ಪರಿಸರ ಸ್ನೇಹಿ ವಿದ್ಯುತ್ ಹೆಸರಿನಲ್ಲಿ ನ್ಯೂಕ್ಲಿಯರ್ ಬಳಸಲಾಗುತ್ತಿದೆ. ಆದರೆ, ಅದು ಸಿಡಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.
“ಕೃಷಿ ಕ್ಷೇತ್ರದಲ್ಲಿಯೂ ಹಸಿರು ಮನೆ ಅನಿಲ ಹೊರಸೂಸುವಿಕೆಯು 2005ರಿಂದ 2014ರ ವೇಳೆಗೆ 25%ರಷ್ಟು ಹೆಚ್ಚಾಗಿದೆ. ದೆಹಲಿಯ ವಾಯು ಮಾಲಿನ್ಯಕ್ಕೆ ಮಜಾಬ್, ಹರಿಯಾಣ ಹಾಗೂಉತ್ಯರಪ್ರದೇಶದ ರೈತರುಸುಡುವ ಹುಲ್ಲಿನಿಂದಬರುವ ಇಂಗಾಲದ್ದೇ ಪ್ರಮುಖ ಪಾಲು ಇದೆ” ಎಂದರು.
“ಸರ್ಕಾರಗಳು ಸೌರ ಶಕ್ತಿ ಬಳಕೆಯ ಹೆಚ್ವಳಕ್ಕಾಗಿ ನ್ಯಾಷನಲ್ ಸೋಲಾರ್ ಮಿಷನ್, ಇಂಧನ ಉಳಿತಾಯಕ್ಕೆ ನ್ಯಾಷನಲ್‌ಮಿಷನ್ ಫಾರ್ ಎನ್‌ಹ್ಯಾನ್ಸ್ಡ್ ಎನೆರ್ಜಿ ಎಫಿಷಿಯನ್ಸಿ, ಪರಿಸರ ಸ್ನೇಹಿ ನಗರ ಯೋಜನೆ, ನೀರು ಉಳಿತಾಯಕ್ಕೆ ನ್ಯಾಷನಲ್ ವಾಟರ್ ಮಿಷನ್, ಅರಣ್ಯ ಭೂಮಿ ಹೆಚ್ಚಳಕ್ಕಾಗಿ ನ್ಯಾಷನಲ್ ಮಿಷನ್ ಫಾರ್ ಗ್ರೀನ್ ಇಂಡಿಯಾ, ಸುಸ್ಥಿರ ಕೃಷಿ ಅನುಷ್ಠಾನಕ್ಕಾಗಿ ನ್ಯಾಷನ್ಲ್ ಮಿಷನ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್, ಪರಿಸರಕ್ಕಾಗಿ ಜೀವನಶೈಲಿಯಂತಹ ಯೋಜನೆಗಳನ್ನು ರೂಪಿಸಿವೆ. ಆದರೆ, ಈ ಯಾವುದೇ ಯೋಜನೆಗಳು, ಮಿಷನ್‌ಗಳು ಜಾರಿಯಾಗಿಲ್ಲ. ಉದ್ದೇಶಿತ ಗುರಿ ಸಾಧಿಸುವುದಿರಲಿ, ಆ ಹಾದಿಯಲ್ಲಿ ಕೆಲಸಗಳೇ ಆರಂಭವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತು ಹವಾಮಾನ ಬದಲಾವಣೆಯಿಂದ ಭಾರತದಲ್ಲಿ ರೈತರು ಅತೀ ಹೆಚ್ಚು ತೊಂದರೆ ಎದುರಿಸುತ್ತಿದ್ದಾರೆ. ಇಂಗಾಲದ ಪರಿಣಾಮದಿಂದಾಗಿ ವಾರ್ಷಿಕ 21%ನಿಂದ50%ರಷ್ಟು ಮೆಕ್ಕೆಜೋಳ ಬೆಳ ನಷ್ಟವಾಗಿದೆ. ಅಂತೆಯೇ, ಶೇಂಗಾ 13%-19%, ಜೋಳ 7%ನಿಂದ 9% ಬೆಳೆ ನಷ್ಟವಾಗಿದೆ” ಎಂದು ವಿವರಿಸಿದ್ದಾರೆ.
“ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಸರ್ಕಾರಗಳು ತ್ವರಿತ ಕಾರ್ಯೋನ್ಮುಖರಾಗಬೇಕು. ಆದರೆ, ಸರ್ಕಾರವು ನಿರ್ಲಕ್ಷ್ಯ ಧೋರಣೆ ತಳೆದಿದೆ. ಭಾರತದಲ್ಲಿ ಹವಾಮಾನ ವೈಪರೀತ್ಯ ತಡೆಗೆ ನೂರಾರು ಕೋಟಿ ರೂ. ಅಗತ್ಯವೆಂದು ಸರ್ಕಾರ ವಿಶ್ವಬ್ಯಾಂಕ್‌ನಲ್ಲಿ ವಾದಿಸುತ್ತಿದೆ. ಆದರೆ, ಕೊಟ್ಟ ಹಣವನ್ನು ಏನು ಮಾಡಿದಿರಿ ಎಂಬುದಕ್ಕೆ ಯಾವುದೇಲೆಕ್ಕ, ಪುರಾವೆಗಳಿಲ್ಲ. ಸರ್ಕಾರದ ಪೊಳ್ಳು ವಾದಗಳು ಹೇಗಿವೆಂದರೆ, ಸರ್ಕಾರದ ಯಾವುದೇ ಮಾತನ್ನು ನಂಬಲು ಸಾಧ್ಯವೇ ಇಲ್ಲ” ಎಂದಿದ್ದಾರೆ.
“ಹಮಾವಾನ ಬದಲಾವಣೆಯಿಂದ ಕೃಷಿ ಕ್ಷೇತ್ರ ತೀವ್ರ ಪರಿಣಾಮ ಎದುರಿಸುತ್ತಿದೆ. ಭಾರೀಪ್ರಮಾಣದ ಬೆಳೆನಷ್ಟಕ್ಕೆ ಗುರಿಯಾಗುತ್ತಿದೆ. ಆದರೂ, ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ನಿರಂತರ ಕಡಿತ ಮಾಡುತ್ತಿದೆ. 2025-2026ರ ಬಜೆಟ್‌ನಲ್ಲಿ 5,025 ಕೋಟಿ ರೂ. ಕಡಿತ ಮಾಡಿದೆ. ಇದು ಕೃಷಿ ಕ್ಷೇತ್ರವನ್ನು ಮತ್ತಷ್ಟು ಜರ್ಜರಿತಗೊಳಿಸಿದೆ” ಎಂದರು.
“ಮೆಟ್ರೋಗೆ 9 ಪಟ್ಟು ಅನುದಾನ ಹೆಚ್ಚಾಗಿದೆ. ಆದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುದಾನವನ್ನು ಕಡಿತ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆ ಕುರಿತು ಅಧ್ಯಯನಗಳು ನಡೆದಿವೆ. ಆದರೆ, ಪ್ರಮುಖ ವರದಿಗಳು, ಮಾನದಂಡಗಳು ಇಂದಿಗೂ ಘೋಷಣೆಯಾಗಿಲ್ಲ” ಎಂದು ದೂರಿದರು.
ಈ ಲೇಖನ ಓದಿದ್ದೀರಾ?: ಕಾಗದದಲ್ಲೇ ಉಳಿದಿದೆ ಬದಲಿ’ಬಾಬರಿ’ಮಸೀದಿ ನಿರ್ಮಾಣ
ಕಾರ್ಯಕ್ರಮದಲ್ಲಿ ಮಾತನಾಡಿದ ಉಳುಮೆ ಪ್ರತಿಷ್ಠಾನದ ಸಂಸ್ಥಾಪಕ ಅವಿನಾಶ್ ಟಿಜಿಎಸ್, “ಸೂರ್ಯನ ಮೇಲ್ಮೈನಲ್ಲಿ 5,500° ಶಾಖವಿದೆ. ಆ ಪ್ರಮಾಣದ ಬಿಸಿಲನ್ನು ಓಝೋನ್ ಸೇರಿದಂತೆ ನಾನಾ ರೀತಿಯ ಪದರಗಳು ತಡೆದು, ಭೂಮಿಗೆ ತೀರಾ ಕಡಿಮೆ ಶಾಖ ಬರುವಂತೆ ಮಾಡುತ್ತಿವೆ. ಒಂದು ವೇಳೆ, ಆ ಪದರಗಳು ಹಾನಿಗೊಂಡರೆ, ಭೂಮಿ ಮೇಲೆ ಪ್ರಾಣಿ ಸಂಕಲ ಬದುಕುವುದೇ ಕಷ್ಟವಿದೆ. ಜೀವಿಗಳು ಬದುಕಲು ಸರಾಸರಿ 30° ತಾಪಮಾನ ಬೇಕು. ಅದಕ್ಕಿಂತ ಹೆಚ್ಚಿನ ಶಾಖವನ್ನು ಸಹಿಸಲು ಸಾಧ್ಯವಿಲ್ಲ. ಆದರೆ, ಈಗಾಗಲೇ ಹಲವೆಡೆ 40° ತಾಪಮಾನ ದಾಟಿದೆ. ಕೆಲವೇ ವರ್ಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲೂ ತಾಪಮಾನವು 40° ದಾಟಲಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು” ಎಂದು ತಿಳಿಸಿದರು.
“ವಾತಾವರಣಕ್ಕೆ 40% ಆಮ್ಲಜನಕ ಸಸ್ಯಗಳಿಂದ ದೊರೆತರೆ, 60% ಆಮ್ಲಜನಕವು ಸಮುದ್ರದ ಪ್ಲಾಂಟಾನ್‌ಗಳಿಂದ ದೊರೆಯುತ್ತದೆ. ಸಮುದ್ರದ ಮೇಲ್ಮೈನಲ್ಲಿರುವ ಪ್ಲಾಂಟಾನ್ ರೀತಿಯ ಸೂಕ್ಷ್ಮ ಜೀವಿಗಳು ಬದುಕಲು ಗರುಷ್ಠ 20° ತಾಪಮಾನ ಇರಬೇಕು. ಅದನ್ನೂ ಮೀರಿದರೆ ಪ್ಲಾಂಟಾನ್ ಸೂಕ್ಷ್ಮಜೀವಿಗಳು ಸತ್ತುಹೋಗುತ್ತವೆ. ಪರಿಣಾಮ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ನಶಿಸುತ್ತದೆ” ಎಂದು ವಿವರಿಸಿದರು.
“ಹಲವು ಪ್ರಭೇದ ಮತ್ತು ತಳಿಯ ಸಸ್ಯಗಳು ನಿರ್ದಿಷ್ಟ ಪ್ರಮಾಣದ ತಾಪಮಾನದಲ್ಲಿ ಹೆಚ್ಚು ಇಳುವರಿ ಕೊಡುತ್ತವೆ. ಆದರೆ, ತಾಪಮಾನ ಹೆಚ್ಚಾದಂತೆ ಪತ್ರಹರಿತ್ತು ರಂಧ್ರಗಳು ಸಾಯುತ್ತವೆ. ದ್ಲುತಿಸಂಶ್ಲೇಷ ಕ್ರಿಯೆ ನಶಿಸುತ್ತದೆ. ಪರಿಣಾಮ ಬೆಳೆ ಇಳುವರಿಯೂ ಕಡಿಮೆಯಾಗುತ್ತದೆ” ಎಂದರು.
“ತಾಪಮಾನ ಹೆಚ್ಚಾದಂತೆ ಸಮುದ್ರದ ನೀರು ಹೆಚ್ಚಾಗಿ ಆವಿಯಾಗುತ್ತದೆ. ಪರಿಣಾಮ, ಮೋಡದ ಗಾತ್ರ ಹೆಚ್ಚಾಗುತ್ತದೆ. ಬೃಹತ್ ಮೋಡಗಳನ್ನು ಗಾಳಿಗೆ ಬಹುದೂರ ತಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮ, ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಪ್ರವಾಹಗಳು ಸಂಭಚಿಸುತ್ತವೆ. ಆದರೆ, ಉಳಿದ ಭಾಗಗಳು ಮಳೆ ಕಾಣದೆ, ಅನಾವೃಷ್ಟಿಗೆ ಸಿಲುಕುತ್ತವೆ” ಎಂದು ವಿವರಿಸಿದರು.
“ಮುಂದಿನ 100 ವರ್ಷಗಳಲ್ಲಿ ಭೂಮಿಯ ಮೇಲೆ ಜೀವಿಗಳು ಬದುಕಲಾಗದಷ್ಟು ತಾಪಮಾನ ಹೆಚ್ಚಾಗುತ್ತದೆ. ಇದು ಜೀವ ಸಂಕುಲದ ಅವನತಿಗೆ ಕಾರಣವಾಗುತ್ತದೆ. ಈಗಾಗಲೇ, ಸಹಿಸಲಾಗದಷ್ಟು ಬಿಸಿಲು/ತಾಪಮಾನ ಏರಿಕೆಯಾಗಿದೆ. ಪರಿಸರ ರಕ್ಷಣೆಗೆ ಒತ್ತುಕೊಡದಿದ್ದರೆ, ಅವನತಿ ಖಚಿತ” ಎಂದು ಎಚ್ಚರಿಸಿದರು.




