ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡರೂ, ಅದು ಖಂಡಿತ ನ್ಯಾಯಾಲಯದ ಅಂಗಳಕ್ಕೆ ಹೋಗಲಿದೆ. ಅಲ್ಲಿ ಏನು ತೀರ್ಮಾನವಾಗುತ್ತದೋ ಗೊತ್ತಿಲ್ಲ. ಅದೊಂದು ದೀರ್ಘಕಾಲೀನ ಹೋರಾಟ.
ಸದ್ಯಕ್ಕೆ, RSS ಚಟುವಟಿಕೆಗಳನ್ನು ನಿಯಂತ್ರಿಸಲು ಸುಲಭದ ಮಾರ್ಗವಿದೆ. ಮೊದಲು ರಾಜ್ಯದ ಕಾಂಗ್ರೆಸ್ ನಾಯಕರು ಸ್ವಯಂಪ್ರೇರಣೆಯಿಂದ ತಮ್ಮ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಒಳಗೊಂಡಂತೆ ಸಂಘ ಪರಿವಾರದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಸಲಹೆ ನೀಡಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, “ಕಾಂಗ್ರೆಸ್ ನಾಯಕರು ಈ ಕ್ರಮ ಕೈಗೊಳ್ಳುವುದು ಸಾಧ್ಯವೇ? ಮಂಗಳೂರಿನ ಒಂದು ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡಮಟ್ಟದ ಎಬಿವಿಪಿ ಸಮ್ಮೇಳನ ನಡೆಯುತ್ತದೆ. ಅದರ ನಂತರ ಆ ಸಂಸ್ಥೆಯ ಒಡೆಯರು ವಿಧಾನ ಪರಿಷತ್ ಸದಸ್ಯರಾಗುತ್ತಾರೆ. ಕಲ್ಲಡ್ಕದ ಭಟ್ರ ಜೊತೆಯಲ್ಲಿಯೇ ಚಕ್ಕಂದವಾಡುತ್ತಾ ಶಾಸಕರು, ಸಚಿವರು, ಇನ್ನು ಏನೇನೋ ಆಗುತ್ತಾರೆ, ಚುನಾವಣೆ ಬಂದಾಗ ಹಿಂದಿನ ದಿನದವರೆಗೆ ಆರ್‌ಎಸ್‌ಎಸ್‌ನ ಬೈಠಕ್‌ನಲ್ಲಿದ್ದವರನ್ನು ರಾಜಮರ್ಯಾದೆಯಿಂದ ಕರೆತಂದು ಟಿಕೆಟ್ ಕೊಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಆರ್‌ಎಸ್‌ಎಸ್‌ಗೆ ಹೆದರುವವರು, ಅದರ ಜೊತೆ ಸಂಬಂಧ ಇಟ್ಟುಕೊಂಡವರು ಪಕ್ಷ ಬಿಟ್ಟು ತೊಲಗಿ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳು ರೋಮಾಂಚನವನ್ನುಂಟು ಮಾಡಿದ್ದವು. ಆದರೆ, ಸಂಘ ಪರಿವಾರದ ವಿರುದ್ದ ಮಾತನಾಡುತ್ತಿದ್ದ ನಮ್ಮಂತಹವರಿಗೆ ಕೊಲೆ-ಹಲ್ಲೆ ಬೆದರಿಕೆ, ತಂದೆ-ತಾಯಿ, ಅಕ್ಕ-ತಂಗಿ ಎನ್ನದೆ ಎಲ್ಲರ ಹೆಸರು ತೆಗೆದು ವಾಚಾಮಗೋಚರ ಬೈಗುಳ ಸುರಿಮಳೆ ಎಲ್ಲವೂ ನಡೆಯುತ್ತಲೇ ಇರುತ್ತದೆ. ಈಗ ನೋಡಿ ಸಚಿವ ಪ್ರಿಯಾಂಕ ಖರ್ಗೆಯವರು ಧೈರ್ಯ ಮಾಡಿ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ ತಪ್ಪಿಗೆ ಅವರು ಎಲ್ಲ ಬಗೆಯ ಬೆದರಿಕೆ, ಬೈಗುಳಗಳನ್ನು ಅನುಭವಿಸುವಂತಾಗಿದೆ. ಒಬ್ಬಿಬ್ಬರನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನ ಯಾವ ನಾಯಕರೂ ಖರ್ಗೆಯವರ ಪರವಾಗಿ ದನಿ ಎತ್ತುತ್ತಿಲ್ಲ. ಪ್ರಿಯಾಂಕ ಖರ್ಗೆಯವರು ಕೂಡಾ ತಮ್ಮ ಅಕ್ಕಪಕ್ಕದಲ್ಲಿ ಯಾರು ಇದ್ದಾರೆ ಎನ್ನುವುದನ್ನು ನೋಡಲು ಇದು ಸಕಾಲ. ನಾವಂತೂ ನಿಮ್ಮ ಜೊತೆಗೆ ಇರುತ್ತೇವೆ” ಎಂದು ಅಮಿನ್ ಮಟ್ಟು ಹೇಳಿದ್ದಾರೆ.




