“ಈ ದಿನ.ಕಾಮ್ ಹಮ್ಮಿಕೊಂಡ ಸಮಾವೇಶಕ್ಕೆ ಬಂದಿರುವುದು ಸಂತಸ ತಂದಿದೆ. ‘ರಾಜಧಾನಿ ಕೇಂದ್ರಿತ ಪತ್ರಿಕೆಯಲ್ಲ, ನಮ್ಮದು ಕರ್ನಾಟಕ ಕೇಂದ್ರಿತ ಪತ್ರಿಕೆ’ ಎಂಬ ಅರ್ಥಗರ್ಭೀತವಾದ ಸ್ಲೋಗನ್ ಹಾಕಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳನ್ನು ಕೇಳುವುದಕ್ಕೆ ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಈ ದಿನ.ಕಾಮ್ ಕಲಬುರಗಿಯಲ್ಲಿ ಆಯೋಜಿಸಿದ್ದ ಓದುಗರ ಸಮಾವೇಶ ಹಾಗೂ ಕಲ್ಯಾಣ ಕರ್ನಾಟಕದ ಚರಿತ್ರೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ದಿನ,ಕಾಮ್ ಈ ರೀತಿ ಸಮಾವೇಶ ಮಾಡಿರುವುದಕ್ಕೆ ಸಂತೋಷ್ ಪಡುವುದಾ? ಅಥವಾ ಈ ಭಾಗದಲ್ಲಿರುವ ಜನರು ಹೇಳಿಕೊಳ್ಳುವ ಆತಂಕಗಳ ಬಗ್ಗೆ ಯೋಚನೆ ಮಾಡೋದಾ? ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವುದು ನಿಜ” ಎಂದು ಹೇಳಿದರು.
“ಕಲ್ಯಾಣ ಕರ್ನಾಟಕ ಭಾಗದ ಜನರ ಮಾತುಗಳನ್ನು ಕೇಳುವುದಕ್ಕೆ, ಅವರ ಸಮಸ್ಯೆಗಳನ್ನು ಕೇಳುವುದಕ್ಕೆ ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದಾರೆ. ಈ ದಿನ ಸುಮ್ಮನೆ ಒಂದು ಪತ್ರಿಕೆಯನ್ನು ಹುಟ್ಟು ಹಾಕಬೇಕು ಎಂದು ಹುಟ್ಟಿದ ಪತ್ರಿಕೆಯಲ್ಲ. ಅಥವಾ ಯಾವುದೋ ಪಕ್ಷದವರು ನಮ್ಮ ಮುಖವಾಣಿ ಇರಲಿ ಎಂದು ಆರಂಭ ಮಾಡಿದ ಪತ್ರಿಕೆಯಲ್ಲ. ಹಲವು ಸಂಘಟನೆಗಳನ್ನ, ಹಲವು ಹೋರಾಟಗಳನ್ನ, ಸಾಮಾಜಿಕ ನ್ಯಾಯಕ್ಕಾಗಿ ಮಾತನಾಡುತ್ತಿದ್ದ/ ಹೋರಾಡುತ್ತಿದ್ದ ಮನಸ್ಸುಗಳಿಂದ ಕಟ್ಟಲ್ಪಟ್ಟ ಪತ್ರಿಕೆಯೇ ಈ ದಿನ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

“ಇವತ್ತಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳು ಜನಪರವಾಗಿವೇಯೇ? ಎಂಬುದನ್ನ ನೋಡಿದರೆ, ಈತರಹದ ಒಂದು ಬೆಳವಣಿಗೆ, ಈ ಪತ್ರಿಕೆಯ ರೀಚ್, ಕೆಲವೇ ದಿನಗಳಲ್ಲಿ ಜನರಿಂದ ಗಳಿಸಿಕೊಂಡಿರುವ ನಂಬಿಕೆ ಶ್ಲಾಘನೀಯ. ಈ ದಿನ ಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬರುತ್ತಿದೆ” ಎಂದರು.
“ಈ ದಿನ ಪತ್ರಿಕೆ ಮತ್ತು ಅದರ ಒಡನಾಡಿಗಳು ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಆಗುವ ಅನ್ಯಾಯಗಳನ್ನ ಪ್ರತಿಭಟಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂದು ನಂಬುತ್ತೇನೆ” ಎಂದು ತಿಳಿಸಿದರು.
“ಈಗಿನ ದಿನಗಳಲ್ಲಿ ಸುಳ್ಳುಗಳ ಮಹಾಪೂರವೇ ನಡೆಯುತ್ತಿದೆ. ಮಾಧ್ಯಮಗಳು ಎಂದರೆ ಸುಳ್ಳುಗಳು. ಎಂತಹ ಸುಳ್ಳರು ಹುಟ್ಟುಕೊಂಡಿದ್ದಾರೆಂದರೆ ಅವರು ಪ್ರಧಾನಿ ಕೂಡ ಆಗಿದ್ದಾರೆ. ನವೆಂಬರ್ 25ರಂದು ಮಹಾಪ್ರಭುಗಳು ಬಾವುಟವನ್ನು ಹಾರಿಸುತ್ತಿದ್ದರು. ಅವರ ಪಕ್ಕದಲ್ಲಿಯೇ ನೊಂದಣಿಯಾಗದೇ ಇರುವ ಆರ್ ಎಸ್ ಎಸ್ ಸಂಘದ ಮುಖಂಡರು ಸೇರಿಕೊಂಡು ಬಾವುಟವನ್ನು ನೋಡುತ್ತಿದ್ದರು. ನಾನು ಮತ ಹಾಕದೇ ಇದ್ದರೂ ಅವರು ನಮ್ಮ ದೇಶದ ಪ್ರಧಾನಿ. ಪ್ರಧಾನಿಗಳನ್ನ ನೋಡುವಾಗ ಅವರಿಗೆ ಧರ್ಮದ ಮೇಲಿರುವ ಭಕ್ತಿ, ಪ್ರೀತಿ ನೋಡಿದೆ. ಭಕ್ತಿಯಲ್ಲಿದ್ದ ಅವರ ಕೈಗಳು ನಡುಗುತ್ತಿದ್ದವು. ಅವರ ನಂಬಿಕೆಯ ಆಳ ಅಷ್ಟಿರಬಹುದು ಎಂದುಕೊಂಡೆ. ಆಮೇಲೆ ಯೋಚನೆ ಮಾಡಿದೆ. ಈ ವ್ಯಕ್ತಿ ಭಾರತದ ದೇಶದ ಧ್ವಜಕ್ಕೆ ಯಾವತ್ತಾದರೂ ಈ ರೀತಿ ಭಾವುಕರಾಗಿರೋದು ನೋಡಿದೀನಾ? ಸಂವಿಧಾನದ ಬಗ್ಗೆ ಹೊಗಳಿ ಮೋದಿ ಅವರು ಮಾತಾಡುತ್ತಾರೆ. ಗಾಂಧಿ, ಅಂಬೇಡ್ಕರ್ ಅವರನ್ನು ಹೊಗಳಿದ್ದಾರೆ. ಆದರೆ, ಅವರು ಮಾತಾಡೊದೊಂದು ಮಾಡೋದೊಂದು…” ಎಂದು ಟೀಕಿಸಿದರು.
“ನನಗೆ ಯಾರೋ ಒಬ್ಬರು ಸತ್ಯ ಮಾತಾಡೋಕೆ ಎಷ್ಟು ಧೈರ್ಯ ನಿಮಗೆ ಎಂದು ಕೇಳಿದರು. ನಾನು ಕೇಳಿದೆ ಆ ಮನುಷ್ಯನಿಗೆ ಸುಳ್ಳು ಮಾತಾಡೋಕೆ ಎಷ್ಟು ಧೈರ್ಯ. ಈ ದೇಶದಲ್ಲಿ ಸುಳ್ಳು ಮಾತಾಡೋಕೆ ಧೈರ್ಯ ಬೇಕು. ಸತ್ಯ ಮಾತಾಡೋಕೆ ಅಲ್ಲ” ಎಂದರು.

“ಪ್ರಪಂಚದ ಯಾವ ಯುದ್ಧವನ್ನು ನೋಡಿದರೂ ಅದರ ಆರಂಭಕ್ಕೆ ಮುನ್ನ ಮಾಧ್ಯಮಗಳೇ ಪಿಠೀಕೆ ಹಾಕುತ್ತವೆ. ಮನುಷ್ಯನಿಗೆ ‘ಜೆನೋಫೋಬಿಯಾ’ ಎಂಬ ಒಂದು ಮನಸ್ಥಿತಿ ಇರುತ್ತದೆ. ಅಪರಿಚಿತ ವ್ಯಕ್ತಿ ಬಂದಾಗ ಅವರನ್ನು ಸಂಶಯದಿಂದ ನೋಡುತ್ತೇವೆ. ಅವರು ಯಾರು ಎಂದು ಗೊತ್ತಾಗುವವರೆಗೂ ಒಂದು ಸಂಶಯ ಇರುತ್ತದೆ. ಇದನ್ನ ಕಾಲಕಾಲಕ್ಕೆ ರಾಜಕಾರಣಿಗಳು ದೂರ್ತರು ಬಳಸಿಕೊಳ್ಳುತ್ತಾ ಬಂದಿದ್ದಾರೆ” ಎಂದು ವಿವರಿಸಿದರು.
“ನಮ್ಮ ವರ್ಣದವರೇ ಶ್ರೇಷ್ಠ ಎಂದು ತನ್ನ ದೇಶದವರನ್ನೇ ಹಿಟ್ಲರ್ ನಂಬಿಸಿ, ಅದನ್ನೇ ಸಾಧಿಸಿ ತಾನೇ ನಾಯಕ ಎಂದು ಬಿಂಬಿಸಿಕೊಳ್ಳುತ್ತಾನೆ. ಆಮೇಲೆ ಆದ ಮಾರಣಹೋಮ ಗೊತ್ತಿದೆ. ಆದರೆ, ನಾವು ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ಇವರುಗಳು ಹಾಗೆನೇ, ಮೊದಲು ನಿಮ್ಮ ಧರ್ಮ, ಜಾತಿ, ಭಾಷೆ ಅಪಾಯದಲ್ಲಿದೆ ಎಂದು ಭಿನ್ನಾಭಿಪ್ರಾಯ ಹುಟ್ಟಿಸುತ್ತಾರೆ. ಈ ಭಯ ಹುಟ್ಟಿಸಿದ ತಕ್ಷಣ ಸ್ವಯಂಘೋಷಿತ ನಾಯಕರಾಗಿ ಮುನ್ನೆಲೆಗೆ ಬಡುತ್ತಾರೆ. ಒಂದು ಸಲ ಭಯ ಹುಟ್ಟಿಸಿದ ಮೇಲೆ ಅದನ್ನ ದ್ವೇಷವಾಗಿ ಬದಲಾವಣೆ ಮಾಡೋದು ತುಂಬಾ ಸುಲಭ. ಕೋಮುಗಲಭೆ, ಕೊಲೆ, ಕಿಡಿ, ಉರಿಗೌಡ – ನಂಜೇಗೌಡ ಎಂಬ ಇತ್ಯಾದಿ ಕಾರ್ಯಕ್ರಮಗಳನ್ನು ಇವರೇ ಹುಟ್ಟು ಹಾಕುತ್ತಾರೆ. ಸುಳ್ಳಿನ ಮೇಲೆ ಸುಳ್ಳನ ಕಟ್ಟುತ್ತಾ ಹೋಗುತ್ತಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ದುಡಿವ, ತಳ ಸಮುದಾಯಗಳ ಹಾಗೂ ಹಿಂದುಳಿದ ಪ್ರದೇಶಗಳಿಗಾಗಿ ಇರುವ ಪಕ್ಷಪಾತಿ ಮಾಧ್ಯಮ: ಡಾ. ಎಚ್.ವಿ ವಾಸು
“ಇತ್ತಿಚೆಗೆ ಇದಕ್ಕೆ ಉದಾಹರಣೆ ಎಂದರೆ, ಉಮರ್ ಖಾಲಿದ್. ನನ್ನ ದೇಶದ ಯುವಜನರ ಮೇಲೆ ನಂಬಿಕೆ ಎಂದರೆ ಅದು ಉಮರ್ ಖಾಲಿದ್. ನನಗಿಂದ ದೊಡ್ಡ ದೇಶಪ್ರೇಮಿ. ಆದರೆ, ಕಳೆದ 6 ವರ್ಷಗಳಲ್ಲಿ ಅವರನ್ನ ನೆಗೆಟಿವ್ ಆಗಿ ಬಿಂಬಿಸಿ ಜೈಲಿನಲ್ಲಿಟ್ಟಿದ್ದಾರೆ. ಅಡುಗೆಗೆ ತೆಗೆದುಕೊಂಡು ಹೋಗುವ ಅರ್ಧ ಕೆಜಿ ಮಾಂಸವನ್ನೂ ದನದ ಮಾಂಸ ಎಂದು ಸೃಷ್ಟಿಸಿ ಅಖ್ಲಾಕ್ ನಂತಹ ವ್ಯಕ್ತಿಗಳ ಹತ್ಯೆ ಮಾಡುತ್ತಾರೆ. ಸತ್ತ ಅಖ್ಲಾಕ್ ಆತ್ಮಕ್ಕೂ ಯಾಕೆ ಸತ್ತೆ ಎಂದು ಗೊತ್ತಿರುವುದಿಲ್ಲ. ಇಂತಹ ದ್ವೇಷದ ಘಟನೆಗಳನ್ನು ಸೃಷ್ಟಿಸಲಾಗುತ್ತದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ವದಂತಿಗಳ, ಸುಳ್ಳಿನ ರಾಜಕಾರಣ ನಡೆಸುತ್ತಿದ್ದಾರೆ. ತಾಯಿ ಮಕ್ಕಳ ರಕ್ಷಣೆಗಾಗಿ ಗುಮ್ಮ ಎಂದು ಅಮ್ಮ ಹೆದರಿಸುತ್ತಿದ್ದಳು. ಆದರೆ, ಈಗ ರಾಜಕಾರಣಿಗು ಅವರ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಇಂತಹ ಕ್ಲಿಷ್ಟವಾದ ಸಂದರ್ಭದಲ್ಲಿ ಸತ್ಯ ಹೇಳುವ ಜನಪರವಾಗಿ ನಡೆದುಕೊಳ್ಳುವ ಮಾಧ್ಯಮಗಳ ಅಗತ್ಯವಿದೆ. ಮಾರಿಕೊಂಡ ಮಾಧ್ಯಮಗಳ ಮಧ್ಯೆ ಈ ದಿನ.ಕಾಮ್ ಪ್ರಮಾಣಿಕ ಹೋರಾಟದ ದನಿಯಾಗಲಿ. ನಿಮ್ಮ ಜತೆಗೆ ನಾನಿರುತ್ತೇನೆ” ಎಂದು ತಿಳಿಸಿದರು.





