“ಈದಿನ.ಕಾಮ್ ಸಂಸ್ಥೆಯು ದುಡಿವ, ಹಿಂದುಳಿದ, ತಳ ಸಮುದಾಯಗಳ ಪರವಾಗಿ ಕೆಲಸ ಮಾಡುವ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗಾಗಿ ಮಾತನಾಡುವ ಪಕ್ಷಪಾತಿ ಮಾಧ್ಯಮ. ನಾನು ಜನಸಾಮಾನ್ಯರ ಪರವಾಗಿ ದನಿ ಎತ್ತುತ್ತೇವೆ. ಹೆಚ್ಚು ವರದಿ ಮಾಡುತ್ತೇವೆ. ಪ್ರಶ್ನೆ ಮಾಡುತ್ತೇವೆ. ದ್ವೇಷ ಮತ್ತು ಕೋಮು ರಾಜಕಾರಣದ ವಿರುದ್ಧ ಗಂಭೀರ ನಿಲುವು ಹೊಂದಿದ್ದೇವೆ. ಕಾಂಗ್ರೆಸ್ ವಿಚಾರದಲ್ಲಿಯೂ ಅಷ್ಟೇ ನಿಷ್ಠುರವಾದ ನಿಲುವು ಹೊಂದಿದ್ದೇವೆ. ಇದೇ ನಿಲುವುಗಳೊಂದಿಗೆ ಮುಂದೆ ಸಾಗುತ್ತೇವೆ” ಎಂದು ಮಾಸ್ ಮೀಡಿಯಾ ಯೋಜನೆ ಮುಖ್ಯಸ್ಥ ಡಾ. ಎಚ್.ವಿ ವಾಸು ಹೇಳಿದರು.
ಕಲಬುರಗಿಯಲ್ಲಿ ಈದಿನ.ಕಾಮ್ ಆಯೋಜಿಸಿದ್ದ ‘ಓದುಗರ ಸಮಾವೇಶ‘ದಲ್ಲಿ ಅವರು ಮಾತನಾಡಿದರು. “ರಾಜ್ಯದ ನಾನಾ ಭಾಗಗಳಿಗೆ ಹೋದಾಗ, ಈದಿನ.ಕಾಮ್ ಕುರಿತು ಜನರು ಮಾತನಾಡುತ್ತಾರೆ. ಅವರೆಲ್ಲರೂ ಸಮಗ್ರ ಜನಮಾಧ್ಯಮಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ರೀತಿಯಲ್ಲಿ ಈದಿನ.ಕಾಮ್‌ಅನ್ನು ನೋಡುತ್ತಿದ್ದಾರೆ” ಎಂದರು.
“ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮಾವೇಶಕ್ಕೆ ಸಭಾಂಗಣ ಕಿಕ್ಕಿರಿಯುವಷ್ಟು ಜನರು ಬಂದಿದ್ದರು. ಅವರಲ್ಲಿ, 80% ಜನರು ಗ್ರಾಮೀಣ ಭಾಗದವರು. ಅಲ್ಲಿ ನೆರೆದಿದ್ದವರನ್ನು ಕಂಡಾಗ ನಾವು ನಿರ್ಧರಿಸಿದೆವು – ಮುಂದಿನ ಸಮಾವೇಶ ಬೆಂಗಳೂರಿನಲ್ಲಿ ನಡೆಯಬಾರದು ಎಂದು. ಅದರಂತೆ, ಇಂದು ಕಲಬುರಗಿಯಲ್ಲಿ ನಮ್ಮ ಸಮಾವೇಶ ನಡೆಯುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
“ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗವನ್ನು ಹಿಂದುಳಿದ ಪ್ರದೇಶವಾಗಿ ನೋಡಲಾಗುತ್ತಿದೆ. ಈಗಲೂ ಈ ಭಾಗಗಳಿಗೆ ಮಾಧ್ಯಮಗಳಲ್ಲಿ ಸ್ಥಾನವಿಲ್ಲ. ಮಾಧ್ಯಮಗಳು ಕೇವಲ ನಗರ ಕೇಂದ್ರಿತವಾಗಿವೆ. ಅಂತಹ ಮಾಧ್ಯಮಗಳ ನಡುವೆ ನಾನು ಶೋಷಿತರ ಸಮಸ್ಯೆಗಳು ಮತ್ತು ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಜನರನ್ನು ತಲುಪಲು ರಾಜ್ಯಾದ್ಯಂತ ಸಭೆ-ಸಮಾರಂಭಗಳನ್ನು ನಡೆಸುತ್ತಿದ್ದೇವೆ” ಎಂದರು.
“ರಾಜ್ಯಕ್ಕೆ ಊಟ ಹಾಕುತ್ತಿರುವವರಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರ ಕೊಡುಗೆ ಇದೆ. ಈ ಭಾಗದ ರೈತರ ಕುರಿತು ಮಾತನಾಡಬೇಕಿದೆ. ಕಲ್ಯಾಣ ಕರ್ನಾಟಕದ ಕುರಿತು ಹೆಚ್ಚು ಚರ್ಚೆ ನಡೆಯುವಂತೆ, ಇಲ್ಲಿನ ವಿಷಯಗಳು ಮುನ್ನೆಲೆ ಬರುವಂತೆ ನೋಡಿಕೊಳ್ಳಬೇಕಿದೆ. ಅಂತಹ ಕೆಲಸವನ್ನು ಈದಿನ.ಕಾಮ್ ಮಾಡಲಿದೆ” ಎಂದರು.
“ಇದೇ ವಾರ ರಾಜ್ಯದ ಎಲ್ಲ ಮಾಧ್ಯಮಗಳು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುರಿತು ದಿನವಿಡೀ ಸುದ್ದಿ ಮಾಡುತ್ತಿದ್ದವು. ಆದರೆ, ಈದಿನ.ಕಾಮ್ ರಾಯಚೂರಿನಿಂದ ಬೆಂಗಳೂರಿಗೆ ಬಂದು ಮದ್ಯ ನಿಷೇಧಕ್ಕಾಗಿ ಹೋರಾಟ ನಡೆಸುತ್ತಿದ್ದ ಮಹಿಳೆಯರ ಪ್ರತಿಭಟನೆಯನ್ನು ಕೇಂದ್ರೀಕರಿಸಿ ಸುದ್ದಿ ಮಾಡಿತು. ರೈತರಿಗಾಗಿ ನಡೆದ ಸಂಯುಕ್ತ ಹೋರಾಟ ಕರ್ನಾಟಕದ ಸುದ್ದಿಗಳನ್ನು ಪ್ರಕಟಿಸಿತು. ನಮ್ಮ ಕೆಲಸ ಜನರಿಗಾಗಿ ನಡೆಯುತ್ತದೆ. ಜನರ ದನಿಯನ್ನು ಮುನ್ನೆಲೆಗೆ ತರುತ್ತದೆ” ಎಂದರು.





