ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗದೇ ಹೋದರೆ ಅಸಮಾನತೆ ಹೋಗಲಾಡಿಸಲು, ಗುಲಾಮಗಿರಿ ವ್ಯವಸ್ಥೆ ಕಿತ್ತುಹಾಕಲು ಸಾಧ್ಯವಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನ ಕೊಣಾಜೆಯ ಮಂಗಳ ಗಂಗೋತ್ರಿ ಯಲ್ಲಿ ಶಿವಗಿರಿ ಮಠ ವರ್ಕಲಾ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವ ವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶತಮಾನದ ಪ್ರಸ್ತಾನ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ, ಗುರುವಿನ ಮಹಾಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಹಾಗೂ ಯತಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ, ಯಾರೂ ಕೀಳಾಗುವುದಿಲ್ಲ. ಆದರೆ ವ್ಯಕ್ತಿತ್ವವನ್ನೂ ಜಾತಿ ನೋಡಿಯೇ ಅಳೆಯಲಾಗುತ್ತಿದೆ. ಸಮಾಜದಲ್ಲಿ ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯಗಳು ದೂರವಾಗಬೇಕು. ಜಡತ್ವದ ಜಾತಿ ವ್ಯವಸ್ಥೆ ಬದಲಾಗಬೇಕು. ಅದಕ್ಕಾಗಿ ಮನುಷ್ಯತ್ವದಿಂದ ಕೂಡಿದ ಸಮಾಜ ಕಟ್ಟಬೇಕು” ಎಂದು ಹೇಳಿದರು.
“ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ, ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಇನ್ನೂ ಗುಲಾಮಗಿರಿ ವ್ಯವಸ್ಥೆ ಬದಲಾಗಿಲ್ಲ. ಪ್ರಬಲ ಸಮುದಾಯದ ವ್ಯಕ್ತಿ ಎದುರಾದಾಗ ಸ್ವಾಮಿ ಎನ್ನುವ, ದಲಿತ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತರಾದರೂ ಅವರನ್ನು ಏಕ ವಚನದಲ್ಲಿ ಮಾತನಾಡಿಸುವ ವ್ಯವಸ್ಥೆ ಈಗಲೂ ಇದೆ. ಈ ವ್ಯವಸ್ಥೆಯೇ ಗುಲಾಮಗಿರಿಯ ಸಂಕೇತ. ಇದನ್ನು ಕಿತ್ತೆಸೆಯಬೇಕು ಎಂದು ನಾರಾಯಣಗುರುಗಳು ಸಾರಿ ಹೇಳಿದ್ದಾರೆ’ ಎಂದರು.





