‘ನನ್ನ ಮೊಬೈಲ್‌ನಲ್ಲಿರುವ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ನಾನು ಯಾರಿಗೂ ಫಾರ್ವರ್ಡ್ ಮಾಡಿಲ್ಲ. ಹಾಗೇ ಸ್ಟೋರೇಜ್ ಬಾಕ್ಸ್‌ನಲ್ಲಿ ಉಳಿಸಿಕೊಂಡಿದ್ದೇನೆ’ ಎಂದು ಹಲುಬಿದರೆ ಪ್ರಯೋಜನವಿಲ್ಲ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಮಕ್ಕಳನ್ನು ಅಶ್ಲೀಲ, ಅಸಭ್ಯ ಅಥವಾ ಲೈಂಗಿಕ ರೀತಿಯಲ್ಲಿ ಚಿತ್ರಿಸಿರುವುದು ಉಳಿದುಕೊಂಡಿದ್ದರೂ ಜೈಲಿಗೆ ಹೋಗುವುದು ಖಚಿತ..!
ತಮ್ಮ ಮೊಬೈಲ್‌ನಲ್ಲಿ ಹೇರಳವಾಗಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯೊಬ್ಬರ ವಿರುದ್ಧದ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ‘ಈ ವಿಷಯದಲ್ಲಿ ವಿನಾಯಿತಿ ನೀಡಲು ಸುತರಾಂ ಸಾಧ್ಯವಿಲ್ಲ’ ಎಂದು ನುಡಿದಿದೆ.
‘ನನ್ನ ವಿರುದ್ಧ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತಗತಿ ನ್ಯಾಯಿಕ ಪ್ರಕ್ರಿಯೆಯ ವಿಶೇಷ ಕೋರ್ಟ್–1ರಲ್ಲಿರುವ (ಎಫ್‌ಟಿಎಸ್‌ಸಿ) ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ.ಬಿನೋಜ್ (38) ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, 2004ರ ಸುಪ್ರೀಂ ಕೋರ್ಟ್‌ನ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್ ವರ್ಸಸ್ ಎಸ್.ಹರೀಶ್’ ಪ್ರಕರಣದ ತೀರ್ಪು ಉಲ್ಲೇಖಿಸುವ ಮೂಲಕ, ‘ಯಾವುದೇ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಅಥವಾ ವಿಡಿಯೊಗಳನ್ನು ಹೊಂದಿದ್ದು ಅವುಗಳನ್ನು ಪ್ರಸಾರ ಮಾಡಿಲ್ಲ ಎಂಬುದಕ್ಕೆ ಪುರಾವೆ ಇದೆ ಎಂದಾದರೆ ಅದು ನಿಶ್ಚಿತವಾಗಿ ಅಪರಾಧ’ ಎಂಬ ಶಾಸನದ ನಿಬಂಧನೆಗೆ ಮುದ್ರೆ ಒತ್ತಿದೆ.
‘ನನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿರುವ ಚಿತ್ರಗಳನ್ನು ನಾನು ಯಾರೊಂದಿಗೂ ಹಂಚಿಕೊಂಡಿಲ್ಲ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಸಾರಾಸಗಟಾಗಿ ತಳ್ಳಿ ಹಾಕಿದೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
‘ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಪ್ರಾಸಿಕ್ಯೂಷನ್ ಪೂರಕ ಸಾಕ್ಷ್ಯಗಳನ್ನು ಮಂಡಿಸಿದೆ. ದಾಖಲೆಗಳು, ಆಪಾದಿತರು ಎಸಗಿರುವ ಅಪರಾಧ ದೃಢೀಕರಿಸುವ ಅಗತ್ಯ ಅಂಶಗಳನ್ನು ಬಹಿರಂಗಪಡಿಸಿವೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯಲ್ಲಿ ಅದೂ ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಅರ್ಜಿದಾರರ ಮೊಬೈಲ್ ಫೋನ್ ಅನ್ನು ಪೊಲೀಸರು ತನಿಖೆಯ ವೇಳೆ ವಶಕ್ಕೆ ಪಡೆದಿದ್ದರು. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದಾಗ ಅದರ ಸ್ಟೋರೇಜ್ ಬಾಕ್ಸ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳು ವಿಪುಲವಾಗಿ ಇದ್ದದ್ದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಕಮರ್ಶಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ (ಐಟಿ) ಕಲಂ 67(ಬಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೋಕ್ಸೊ) ಕಲಂ 15ರ ಅನ್ವಯ; ಮಕ್ಕಳ ಅಶ್ಲೀಲ ಚಿತ್ರಗಳ ರಚನೆ, ಬ್ರೌಸಿಂಗ್, ಸಂಗ್ರಹಣೆ ಮತ್ತು ಪ್ರಸರಣ ಶಿಕ್ಷಾರ್ಹ ಅಪರಾಧ ಎಂಬ ಅಂಶಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಈ ಕುರಿತಾದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಾಸಿಕ್ಯೂಷನ್ ಪರ ವಿನಯ್ ಮಹದೇವಯ್ಯ ವಾದ ಮಂಡಿಸಿದ್ದರು.
ಐಟಿ ಕಲಂ 67 ಬಿ ಏನು ಹೇಳುತ್ತದೆ ?
ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು, ರವಾನಿಸುವುದು; ಅದರಲ್ಲೂ ಮಕ್ಕಳಿಗೆ ಸಂಬಂಧಿಸಿದಂತೆ ಅಶ್ಲೀಲ ಪಠ್ಯ ಅಥವಾ ಡಿಜಿಟಲ್ ಚಿತ್ರಗಳನ್ನು ರಚಿಸುವುದು, ಸಂಗ್ರಹಿಸುವುದು, ಹುಡುಕುವುದು, ಬ್ರೌಸ್ ಮಾಡುವುದು, ಡೌನ್‌ಲೋಡ್ ಮಾಡುವುದು, ಜಾಹೀರುಗೊಳಿಸುವುದು, ಪ್ರಚಾರ ಮಾಡುವುದು, ವಿನಿಮಯ ಮಾಡಿಕೊಳ್ಳುವುದು ಅಪರಾಧ. ಇಂತಹ ಪ್ರಕರಣಗಳಲ್ಲಿ ವಿವಿಧ ಸ್ತರಗಳ ಅಪರಾಧ ಸ್ವರೂಪಕ್ಕೆ ₹5 ಸಾವಿರದಿಂದ ₹1 ಲಕ್ಷದವರೆಗೆ ದಂಡ ಮತ್ತು 3ರಿಂದ 7 ವರ್ಷಗಳವರೆಗೆ ವಿಸ್ತರಿಸಿದ ಜೈಲು ಶಿಕ್ಷೆ ವಿಧಿಸಬಹುದಾಗಿದೆ.





