ಗ್ರಾಮೀಣ ಭಾಗದ ನಾಣ್ನುಡಿಯಂತೆ ಶಿವರಾತ್ರಿಯೊಂದಿಗೆ ಚಳಿಗಾಲ ಶಿವ ಶಿವ ಎಂದು ಹೋಗಿದೆ. ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬಿಸಿಲು ಎದುರಾಗುವುದು ನಿರೀಕ್ಷಿತ. ಅದರೆ, ಉತ್ತರ ಕರ್ನಾಟಕವನ್ನೂ ಮೀರಿ ಕರಾವಳಿ ಭಾಗದಲ್ಲಿ ಹೆಚ್ಚು ಉಷ್ಠಾಂಗ ದಾಖಲಾಗುತ್ತಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಮಳೆಗಾಲದಲ್ಲಿ ಹೆಚ್ಚು ಮಳೆ ಬೀಳುವ ಸಮಯದಲ್ಲಿಯೇ ಹೇಗೆ ‘ಯೆಲ್ಲೋ, ಆರೆಂಜ್ ಮತ್ತು ರೆಡ್’ ಅಲರ್ಟ್ ಘೋಷಿಸಲಾಗುತ್ತದೆಯೋ, ಅಂತೆಯೇ, ಬೇಸಿಗೆ ಕಾಲದಲ್ಲೂ ಈ ಅಲರ್ಟ್‌ಗಳನ್ನು ಘೋಷಿಸಲಾಗುತ್ತದೆ. ಬೇಸಿಗೆ ಉಷ್ಠಾಂಶಕ್ಕೆ ಅನುಗುಣವಾಗಿ ಈ ಅಲರ್ಟ್‌ಗಳನ್ನು ಹವಾಮಾನ ಇಲಾಖೆ ಘೋಷಿಸುತ್ತದೆ. ಆ ಭಾಗಗಳಲ್ಲಿ ಬೇಸಿಗೆಯನ್ನು ನಿಭಾಯಿಸಲು ಜನರು ನಾನಾ ರೀತಿಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಕರಾವಳಿ ಭಾಗದ ದಕ್ಷಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಭಾಗದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಫೆಬ್ರವರಿ 28 ಮತ್ತು ಮಾರ್ಷ್ 01ರಂದು ಅತ್ಯಧಿಕ ತಾಪಮಾನ ದಾಖಲಾಗಲಿದೆ ಎಂದು ಇಲಾಖೆ ಹೇಳಿದೆ.
ಸದ್ಯ, ಕರಾವಳಿ ಭಾಗದಲ್ಲಿ ಉಷ್ಣಾಂಶವು 37° ಇಂದ 38° ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ 35° ಇಂದ 38° ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಮಾನವ ದೇಹವು ಗರಿಷ್ಠ 40-50° ಸೆಲ್ಸಿಯಸ್‌ವರೆಗೆ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದಾಗ್ಯೂ, ಬೇಸಿಗೆಯಲ್ಲಿ ನಿರ್ಜಲೀಕರಣದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಹೆಚ್ಚು ನೀರನ್ನು ಸೇವಿಸಬೇಕು. ಜೊತೆಗೆ, ನೀರಿನಂಶ ಇರುವ ಆಹಾರ ಪದಾರ್ಥ, ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.




