ಕೆಎಂಎಫ್‌ನ ನಂದಿನಿ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎಂದು ಡಾ.ಶರಣ್ಯ ಸಂತೋಷ್ ಎಂಬುವವರ ಹೇಳಿಕೆ ನೀಡಿದ್ದು, ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿ ನಂದಿನಿ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿರುವ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಸ್ಪಷ್ಟನೆ ನೀಡಿದ್ದು, “ಇದು ಶುದ್ಧ ಸುಳ್ಳು ಆರೋಪ. ಕೆಎಂಎಫ್ ಉತ್ಪನ್ನ ನೈಸರ್ಗಿಕವಾಗಿ ತಯಾರಿಸುತ್ತಿದ್ದೇವೆ. ಈವರೆಗೂ ಕೆಎಂಎಫ್ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಉತ್ಪನ್ನಗಳಿಗೆ ಯಾವುದೇ ರಾಸಾಯನಿಕವನ್ನು ಕೆಎಂಎಫ್ ಹಾಕುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ ನೇಮಕ
ಹಾಗೆಯೇ ಡಾ.ಶರಣ್ಯ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಎಂಎಫ್ ಉತ್ಪನ್ನಗಳ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರೆ ಕ್ರಮಕೈಗೊಳ್ಳಲಾಗುತ್ತದೆ. ನಂದಿನಿ ಉತ್ಪನ್ನಗಳು ಸುರಕ್ಷಿತವಾಗಿದ್ದು, ಜನರು ಆತಂಕವಿಲ್ಲದೆ ಬಳಸಬಹುದು” ಎಂದು ಬಿ ಶಿವಸ್ವಾಮಿ ಹೇಳಿದ್ದಾರೆ.
ಇನ್ನು, “ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India) ನಿಗದಿಪಡಿಸಿದ ಎಲ್ಲಾ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ನಂದಿನಿ ಉತ್ಪನ್ನಗಳನ್ನು ತಯಾರಿಸುವಾಗ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ನಂದಿನಿ ಉತ್ಪನ್ನಗಳು ಸುರಕ್ಷಿತ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಕರ್ನಾಟಕ ಹಾಲು ಒಕ್ಕೂಟ ಮಾಹಿತಿ ನೀಡಿದೆ.
ಪಶುಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್, “ಕಲಬೆರಕೆ ಆಗುತ್ತಿದ್ದರೆ ಕ್ರಮಕೈಗೊಳ್ಳಲಾಗುವುದು. ಬೇರೆ ಬೇರೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಅಪಪ್ರಚಾರವಾಗಬಾರದು. ಬೇರೆ ಬೇರೆ ಕಂಪನಿಯವರು ನಮ್ಮ ನಂದಿನಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.





