2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಅಂತಿಮ ಅವಕಾಶ ನೀಡಿದೆ. ಅಕ್ಟೋಬರ್ 3ರಿಂದ ನವೆಂಬರ್ 3ರವರೆಗೆ ಅರ್ಜಿ ಸಲ್ಲಿಸುವ ಹಾಗೂ ದಾಖಲೆ ಪರಿಶೀಲನೆಗೆ ಅವಕಾಶ ನೀಡಲಾಗಿದ್ದರೂ, ಹಲವು ಅಭ್ಯರ್ಥಿಗಳು ನೋಡಲ್ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದೆ ಉಳಿದಿದ್ದಾರೆ. ಹೀಗಾಗಿ ಅಂತಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಗಿದೆ.
ಒಟ್ಟು 28,976 ಅರ್ಹ ಹಾಗೂ 6,793 ಆಕ್ಷೇಪಿತ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ (https://schooleducation.karnataka.gov.in/)ನಲ್ಲಿ ಪ್ರಕಟಿಸಲಾಗಿದೆ. ಇವರಲ್ಲಿ 6,174 ಮಂದಿ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆ ಹಾಗೂ ಫೋನ್ ಮೂಲಕ ನೀಡಿದ ಸೂಚನೆಗಳ ಬಳಿಕವೂ ದಾಖಲೆ ಪರಿಶೀಲನೆ ಮಾಡಿಸಿಕೊಂಡಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಇಲಾಖೆ ಈ ಅಭ್ಯರ್ಥಿಗಳಿಗೆ ನವೆಂಬರ್ 15ರೊಳಗೆ ತಮ್ಮ ನೋಡಲ್ ಕೇಂದ್ರಕ್ಕೆ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಪರಿಶೀಲನೆ ಮಾಡಿಸಿಕೊಳ್ಳುವಂತೆ ಅಂತಿಮ ಅವಕಾಶ ನೀಡಿದೆ. ದಿನಾಂಕದ ನಂತರ ಯಾವುದೇ ತಿದ್ದುಪಡಿ ಅಥವಾ ದಾಖಲೆ ಪರಿಶೀಲನೆ ಮಾಡಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅದೇ ರೀತಿ, ಈಗಾಗಲೇ ಕಾಲೇಜು ಆಯ್ಕೆ ಮಾಡಿದ ಅಭ್ಯರ್ಥಿಗಳು ಅದರಲ್ಲಿ ಬದಲಾವಣೆ ಬಯಸಿದರೆ, ಆನ್‌ಲೈನ್ ಮೂಲಕ ಲಾಗಿನ್ ಆಗಿ ನವೆಂಬರ್ 15ರೊಳಗೆ ಬದಲಾವಣೆ ಮಾಡಿಕೊಳ್ಳಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ
ಮೂಲ ದಾಖಲೆ ಪರಿಶೀಲನೆ ಮಾಡಿಸದ ಹಾಗೂ ತಿದ್ದುಪಡಿ ಮಾಡಿಸದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟು ಉಳಿದವರ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ತಯಾರಿಸಿ ಕಾಲೇಜು ಹಂಚಿಕೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





